ಮಾರ್ಚ್, ಏಪ್ರಿಲ್ ತಿಂಗಳೆಂದರೆ ಅದು ಪರೀಕ್ಷೆ ಮತ್ತು ಮೌಲ್ಯ ಮಾಪನದ ಸಮಯ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಭಯ ಇರುತ್ತದೆಯೋ ಗೊತ್ತಿಲ್ಲ, ಆದರೆ ಎಕ್ಸಾಂ ರಿಸಲ್ಟ್ ದಿನದಂದು ಅವರಿಗೆ ಸ್ವಲ್ಪ ಮನದಲ್ಲಿ ಕೊಂಚ ಭಯ ಇದ್ದೇ ಇರುತ್ತೆ. ಇದೇ ಭಯದ ಕಾರಣದಿಂದ ಪರೀಕ್ಷೆ ಚೆನ್ನಾಗಿ ಬರೆದ್ರೂ ಕೂಡಾ ಕೆಲು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಕೊನೆಯಲ್ಲಿ ದಯವಿಟ್ಟು ನನ್ನನ್ನು ಪಾಸ್ ಮಾಡಿ ಎಂಬ ಬರಹಗಳನ್ನು ಬರೆಯುತ್ತಾರೆ. ಪ್ರತಿವರ್ಷ ಕೂಡಾ ಉತ್ತರ ಪತ್ರಿಕೆಯ ಮೌಲ್ಯ ಮಾಪನದ ಸಂದರ್ಭದಲ್ಲಿ ಇಂತಹ ಕೆಲವೊಂದು ಪ್ರಕರಣಗಳು ಸಿಕ್ಕೇ ಸಿಗುತ್ತದೆ. ಕೆಲವೊಂದು ತರ್ಲೆ ಉತ್ತರಗಳನ್ನು ಬರೆದಿರುವ ಉತ್ತರ ಪತ್ರಿಕೆಗಳು ಸಿಕ್ಕರೆ, ಇನ್ನೂ ಕೆಲವು ನೂರು ರೂಪಾಯಿ ನೋಟನ್ನು ಉತ್ತರ ಪತ್ರಿಕೆಯಲ್ಲಿ ಅಂಟಿಸಿ ದಯವಿಟ್ಟು ನನ್ನನ್ನು ಪಾಸ್ ಮಾಡಿ ಎಂದು ಮೌಲ್ಯಮಾಪಕರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಫೋಟೋಗಳು, ಸುದ್ದಿಗಳು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಅಂತಹದೊಂದು ಸುದ್ದಿ ಹರಿದಾಡುತ್ತಿದ್ದು, ವಿದ್ಯಾರ್ಥಿನಿಯೊಬ್ಬಳು “ಸರ್ ದಯವಿಟ್ಟು ನನ್ನನ್ನು ಪಾಸ್ ಮಾಡಿ ಇಲ್ಲಾಂದ್ರೆ ಮನೆಯಲ್ಲಿ ನನಗೆ ಮದ್ವೆ ಮಾಡ್ತಾರೆ” ಎಂಬ ಬರಹವನ್ನು ಉತ್ತರ ಪತ್ರಿಕೆಯಲ್ಲಿ ಬರೆದು ಆಕೆಯನ್ನು ಪಾಸ್ ಮಾಡುವಂತೆ ಮೌಲ್ಯಮಾಪಕರಲ್ಲಿ ಮನವಿ ಸಲ್ಲಿಸಿದ್ದಾಳೆ. ಈ ಉತ್ತರ ಪತ್ರಿಕೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಬಿಹಾರದಲ್ಲಿ ನಡೆದಿದ್ದು, ಬಿಹಾರದ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ʼದಯವಿಟ್ಟು ನನ್ನನ್ನು ಪಾಸ್ ಮಾಡಿ ಸರ್, ಇಲ್ಲಾಂದ್ರೆ ನನ್ನ ತಂದೆ ನನಗೆ ಮದುವೆ ಮಾಡ್ತಾರೆʼ ಎಂದು ಉತ್ತರ ಪತ್ರಿಕೆಯಲ್ಲಿ ಬರೆದು ಆಕೆಯನ್ನು ಹೇಗಾದರೂ ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಮೌಲ್ಯ ಮಾಪಕರಿಗೆ ಮನವಿಯನ್ನು ಮಾಡಿದ್ದಾಳೆ.
ಇದನ್ನೂ ಓದಿ: ಮಾತ್ರೆ ಪ್ಯಾಕೆಟ್ ಮೇಲೆ ಕೆಂಪು ಗೆರೆ ಏಕೆ ಇರುತ್ತದೆ? ಇದರ ಅರ್ಥವೇನು?
12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಮೌಲ್ಯ ಮಾಪನದ ಸಂದರ್ಭದಲ್ಲಿ ಈ ಉತ್ತರ ಪತ್ರಿಕೆ ಸಿಕ್ಕಿದ್ದು, ವಿದ್ಯಾರ್ಥಿನಿ ಉತ್ತರ ಪತ್ರಿಕೆಯಲ್ಲಿ “ನಾನು ಬಡ ಕುಟುಂಬದ ಹುಡುಗಿ. ನನ್ನ ತಂದೆ ಕೃಷಿಕರಾಗಿದ್ದು, ನನ್ನ ವಿದ್ಯಾಭ್ಯಾಸದ ಹೊರೆಯನ್ನು ಅವರಿಗೆ ಹೊರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ 318 ಕ್ಕಿಂತ ಕಡಿಮೆ ಅಂಕ ತೆಗೆದರೆ ಮದುವೆ ಮಾಡುವುದಾಗಿ ನನ್ನ ತಂದೆ ಹೇಳಿದ್ದಾರೆ. ಆದರೆ ನನಗೆ ಇಷ್ಟು ಬೇಗ ಮದುವೆಯಾಗಲು ಇಷ್ಟವಿಲ್ಲ. ಸರ್ ದಯವಿಟ್ಟು ನನ್ನನ್ನು ಪಾಸ್ ಮಾಡಿ” ಎಂದು ಉತ್ತರ ಪತ್ರಿಕೆಯಲ್ಲಿ ಮೌಲ್ಯ ಮಾಪಕರಿಗೆ ಮನವಿಯನ್ನು ಮಾಡಿದ್ದಾಳೆ. ಈ ಕುರಿತ ಫೋಟೋವೊಂದು ಇದೀಗ ವೈರಲ್ ಆಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ