Viral Video: ಭಾರತ-ಪಾಕ್ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟ ಸ್ನೇಹಿತರು, 41 ವರ್ಷಗಳ ಬಳಿಕ ಒಂದಾದ ಬೆಸ್ಟ್ ಫ್ರೆಂಡ್ಸ್
1947ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟಂತಹ ಜೀವದ ಗೆಳೆಯರಿಬ್ಬರು ಸುಮಾರು 41 ವರ್ಷಗಳ ಬಳಿಕ ಪರಸ್ಪರ ಭೇಟಿಯಾಗಿದ್ದಾರೆ. ಈ ಇಬ್ಬರ ಪುನರ್ ಮಿಲನದ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಸ್ನೇಹ ಅನ್ನೋದು ವಯಸ್ಸು, ಜಾತಿ, ಗಡಿ ಎಲ್ಲವನ್ನೂ ಮೀರಿದ್ದು ಮತ್ತು ಗೆಳೆತನ ಅನ್ನೋದು ಚಿರ ಶಾಶ್ವತ ಎಂಬುದನ್ನು ಈ ಜೀವದ ಗೆಳೆಯರಿಬ್ಬರು ಮತ್ತೊಮ್ಮೆ ನಿರೂಪಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಅಖಂಡವಾಗಿದ್ದ ಭಾರತವನ್ನು 1947ರಲ್ಲಿ ಬ್ರಿಟೀಷರು ಧರ್ಮದ ಆಧಾರದಲ್ಲಿ ಭಾರತವನ್ನು ಒಡೆಯುವ ಕೆಲಸವನ್ನು ಮಾಡಿದರು. ಈ ದೇಶ ವಿಭಜನೆ ಭಾರತದ ಇತಿಹಾಸ ಪುಟಗಳಲ್ಲಿರುವ ಕರಾಳ ಅಧ್ಯಾಯಗಳಲ್ಲೊಂದು. ಈ ವಿಭಜನೆಯಿಂದ ಇಡೀ ದೇಶವೇ ರಕ್ತಸಿಕ್ತವಾಯಿತು. ಅದೆಷ್ಟೋ ಜನರು ತಮ್ಮ ಆಪ್ತರನ್ನು, ಸಂಬಂಧಿಕರು, ಸ್ನೇಹಿತರನ್ನು ಕಳೆದುಕೊಂಡರು. ಮಕ್ಕಳು ಅನಾಥರಾದರು. ಕೊಲೆ, ಅತ್ಯಾಚಾರ ಹೀಗೆ ಹೀನಾತಿಹೀನ ದೌರ್ಜನ್ಯಗಳು ನಡೆದವು. ಇದೇ ದೇಶ ವಿಭಜನೆಯ ಸಮಯದಲ್ಲಿ ಬೇರ್ಪಟ್ಟಿದ್ದ ಜೀವದ ಗೆಳೆಯರಿಬ್ಬರು ಸುಮಾರು 41 ವರ್ಷಗಳ ಬಳಿಕ ಪರಸ್ಪರ ಭೇಟಿಯಾಗಿದ್ದಾರೆ. ಈ ಜೀವದ ಗೆಳೆಯರಿಬ್ಬರ ಪುನರ್ ಮಿಲನದ ಅಪೂರ್ವ ಕ್ಷಣದ ವಿಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಾಲ್ಯದ ಆತ್ಮೀಯ ಗೆಳೆಯದಾರ ಸುರೇಶ್ ಕೊಠಾರಿ ಮತ್ತು ಎ.ಜಿ ಶಾಕಿರ್ ಗುಜರಾತಿನ ಡೀಸಾದಲ್ಲಿ ಒಟ್ಟಿಗೆ ಬೆಳೆದವರು. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆ ಸಮಯದಲ್ಲಿ ಬೇರ್ಪಟ್ಟಿದ್ದರು. ಆಗ ಅವರಿಗೆ ಕೇವಲ 12 ವರ್ಷ ವಯಸ್ಸಾಗಿತ್ತು. ನಂತರ ಈ ಇಬ್ಬರೂ ಒಬ್ಬರನ್ನೊಬ್ಬರು ಸಂಪರ್ಕಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಆದರೆ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ. ನಂತರ ಸ್ನೇಹಿತರೊಬ್ಬರ ಸಹಾಯದಿಂದ ಈ ಜೀವದ ಗೆಳೆಯರಿಬ್ಬರು 1982 ರಲ್ಲಿ ಅಮೇರಿಕಾದ ನ್ಯೂಯಾರ್ಕ್ ಅಲ್ಲಿ ಭೇಟಿಯಾಗಿದ್ದರು. ಅದೇ ಕೊನೆ, ಆ ನಂತರ ಪರಸ್ಪರ ಭೇಟಿಯಾಗುವ ಅವಕಾಶವೇ ಸಿಗಲಿಲ್ಲ. ಹೀಗೆ ಬಾಲ್ಯದಲ್ಲಿ ಬೇರ್ಪಟ್ಟ ಗೆಳೆಯರಿಬ್ಬರು ಇದೀಗ ತಮ್ಮ ವೃದ್ಧಾಪ್ಯದಲ್ಲಿ ಒಂದಾಗಿದ್ದಾರೆ. ಸುರೇಶ್ ಕೊಠಾರಿ ಅವರ ಮೊಮ್ಮಗಳಾದ ಮೇಗನ್ ಕೊಠಾರಿ ಗೆಳೆಯರಿಬ್ಬರನ್ನು ಅಮೇರಿಕಾದಲ್ಲಿ ಮತ್ತೊಮ್ಮೆ ಭೇಟಿ ಮಾಡಿಸಿದ್ದು, ಇವರಿಬ್ಬರ ಪುನರ್ ಮಿನಲದ ಸುಂದರ ಕ್ಷಣವನ್ನು ಮೇಗನ್ ಕೊಠಾರಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಜೊತೆಗೆ “ಬಾಲ್ಯದಲ್ಲಿ ಬೇರ್ಪಟ್ಟ ಸ್ನೇಹಿತರು 41 ವರ್ಷಗಳ ಬಳಿಕ 2023 ರ ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಭೇಟಿಯಾದರು. ಭೌಗೋಳಿಕ ಮತ್ತು ರಾಜಕೀಯ ಅಡೆತಡೆಗಳ ಹೊರತಾಗಿಯೂ ಅವರಿಬ್ಬರ ನಿಶ್ಕಲ್ಮಶ ಸ್ನೇಹ, ಪ್ರೀತಿ ತುಂಬಾನೇ ಆಳವಾದದ್ದು, ಅದನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇದೇ ಏಪ್ರಿಲ್ ತಿಂಗಳಲ್ಲಿ ನ್ಯೂಜೆರ್ಸಿಯಲ್ಲಿ ನನ್ನ ತಾತನ 90 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಏರ್ಪಡಿಸಲಾಗಿದೆ. ಈ ಸಮಾರಂಭದಲ್ಲಿ ಅವರಿಬ್ಬರು ಮತ್ತೆ ಒಂದಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಮೇಗನ್ ಕೊಠಾರಿ ಹೇಳಿದ್ದಾರೆ.
ವೈರಲ್ ವಿಡಿಯೋದಲ್ಲಿ ಬಾಲ್ಯದಲ್ಲಿ ದೂರವಾಗಿದ್ದ ಜೀವದ ಗೆಳೆಯರಿಬ್ಬರ ಪುನರ್ ಮಿಲನದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ಮೂಲಕ ಸ್ನೇಹ ಅನ್ನೋದು ವಯಸ್ಸು, ಜಾತಿ, ಗಡಿ ಎಲ್ಲವನ್ನೂ ಮೀರಿದ್ದು ಮತ್ತು ಗೆಳೆತನ ಅನ್ನೋದು ಚಿರ ಶಾಶ್ವತ ಎಂಬುದನ್ನು ಈ ಜೀವದ ಗೆಳೆಯರಿಬ್ಬರು ನಿರೂಪಿಸಿದ್ದಾರೆ.
ಇದನ್ನೂ ಓದಿ: ಪ್ಲೀಸ್ ಸರ್ ಪಾಸ್ ಮಾಡಿ, ಇಲ್ಲಾಂದ್ರೆ ಮನೇಲಿ ನನ್ಗೆ ಮದ್ವೆ ಮಾಡ್ತಾರೆ, ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯ ಕೋರಿಕೆ
@brownhistory ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಗೆಳೆಯರಿಬ್ಬರ ಪುನರ್ಮಿಲನದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ 1.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಸ್ನೇಹವು ಚಿರ ಶಾಶ್ವತ, ಸ್ನೇಹ ಬಂಧವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎನ್ನುತ್ತಾ ಈ ವಿಡಿಯೋವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ