Viral Video : ದ್ವಿಚಕ್ರವಾಹನ ಸವಾರರಲ್ಲಿ ಹೆಲ್ಮೆಟ್ ಕುರಿತು ಅರಿವು ಮೂಡಿಸಲೆಂದು ಪೊಲೀಸ್ ಅಧಿಕಾರಿಯೊಬ್ಬರು ಮಂತ್ರೋಚ್ಛಾರದ ಶೈಲಿಯನ್ನು ಅನುಕರಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ‘ಈ ಅಣ್ಣ ತನ್ನ ಮದುವೆಯಲ್ಲಿಯೂ ಇಷ್ಟೊಂದು ಗೌರವಯುತವಾಗಿ ಬಾಸಿಂಗ ಧರಿಸಿರಲಿಲ್ಲವೇನೋ’ ಎಂದು ಶೀರ್ಷಿಕೆ ಕೊಟ್ಟು ವಿಡಿಯೋ ಟ್ವೀಟ್ ಮಾಡಿದ್ದಾರೆ ಟ್ವಿಟರ್ ಖಾತೆದಾರರಾದ ಜೈಕೀ ಯಾದವ್. ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನ ಓಡಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ತಡೆದ ಪೊಲೀಸ್ ಅಧಿಕಾರಿ, ಆತನ ತಲೆಗೆ ಹೆಲ್ಮೆಟ್ ಹಾಕುತ್ತ ಮಂತ್ರವನ್ನು ಪಠಿಸಲು ಶುರುಮಾಡುತ್ತಾರೆ. ಮಂತ್ರದಲ್ಲಿ ಸಂಚಾರ ನಿಯಮಗಳ ವಿವರಣೆ ಮತ್ತು ನಿಯಮ ಮುರಿದರೆ ಆಗುವ ಪರಿಣಾಮವನ್ನು ಶ್ರುತಿಬದ್ಧವಾಗಿ, ಲಯಬದ್ಧವಾಗಿ ಅತ್ಯಂತ ಮಾರ್ಮಿಕವಾಗಿ ಮತ್ತು ಗಂಭೀರವಾಗಿ ತಿಳಿಸುತ್ತಾ ಕೈಮುಗಿಯುತ್ತಾರೆ. ಇಷ್ಟೆಲ್ಲ ಸನ್ಮಾನ ನಡೆಯುತ್ತಿರುವಾಗ ವಾಹನಸವಾರರು ಶರಣಾಗದೆ ಗತ್ಯಂತರವಿಲ್ಲ!
इस भाई को इतनी इज़्ज़त से तो शादी में सेहरा भी नहीं पहनाया गया होगा? pic.twitter.com/UQn1gRFypz
— Jaiky Yadav (@JaikyYadav16) September 9, 2022
ಹೇಗಿದೆ ಮಂತ್ರ? ಅಂತೂ ಇನ್ನುಮುಂದೆ ತಪ್ಪದೆ ಸಂಚಾರಿ ನಿಯಮಗಳನ್ನು ಪಾಲಿಸುವುದಾಗಿ ವಾಹನಸವಾರರು ತಿಳಿಸುತ್ತಾರೆ. ಮುಂದಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ, ಈಗ ವಿಧಿಸಿರುವ ದಂಡದ ಐದುಪಟ್ಟು ಮೊತ್ತವನ್ನು ವಸೂಲಿ ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ಪೊಲೀಸರು ಮಂತ್ರದಲ್ಲಿಯೇ ವಿವರಿಸುತ್ತಾರೆ.
ಈ ವಿಡಿಯೋ ಸೆಪ್ಟೆಂಬರ್ 9ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಇನ್ನೇನು ಈ ವಿಡಿಯೋದ ವೀಕ್ಷಣೆ 2 ಮಿಲಿಯನ್ಗೆ ಏರಲಿದೆ. ಸುಮಾರು 1,200 ರೀಟ್ವೀಟ್, ಸುಮಾರು 10,000 ಮೆಚ್ಚುಗೆಯನ್ನು ಇದು ಪಡೆದಿದೆ.
ಈ ವಿಶಿಷ್ಟವಾದ ಜಾಗೃತಿಮಂತ್ರದಿಂದ ಪ್ರಭಾವಿತರಾದ ನೆಟ್ಟಿಗರು, ‘ಸಂಚಾರಿ ನಿಯಮ ಪಾಲನೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಮಾರ್ಗ ಸಮರ್ಪಕವಾಗಿದೆ’ ಎಂದಿದ್ದಾರೆ. ಇನ್ನೊಬ್ಬರು, ‘ಎಂಥ ಸ್ಫೂರ್ತಿದಾಯಕವಾಗಿದೆ ಈ ವಿಡಿಯೋ’ ಎಂದು ಹರ್ಷವ್ಯಕ್ತಪಡಿಸಿದ್ದಾರೆ. ‘ನಿಜಕ್ಕೂ ಇದು ಅತ್ಯಂತ ಸ್ನೇಹಪರ ನಡೆವಳಿಕೆ’ ಎಂದು ಮಗದೊಬ್ಬರು ಪೊಲೀಸ್ ಅಧಿಕಾರಿಯನ್ನು ಶ್ಲಾಘಿಸಿದ್ದಾರೆ. ‘ನಮ್ಮ ಮಧ್ಯಪ್ರದೇಶ ಈತನಕ ನೋಡಿರದಂಥ ಕರುಣಾಮಯಿ ಪೊಲೀಸ್ ಅಧಿಕಾರಿ ಭಗವತ್ ಪ್ರಸಾದ್ ಪಾಂಡೆ ಇವರು, ಇಡೀ ರಾಜ್ಯಕ್ಕೇ ಪ್ರಿಯವಾದ ವ್ಯಕ್ತಿ’ ಎಂದು ಹೆಮ್ಮೆಯಿಂದ ಪ್ರತಿಕ್ರಿಯಸಿದ್ದಾರೆ.
ಆದರೆ ಈ ಘಟನೆ ಯಾವ ಸ್ಥಳದಲ್ಲಿ ನಡೆದಿದೆ ಎಂಬ ಬಗ್ಗೆ ವಿವರ ತಿಳಿದು ಬಂದಿಲ್ಲ. ಆದರೆ, ಸಾರ್ವಜನಿಕ ಸೇವೆಗಳಲ್ಲಿ ನಿರತರಾಗಿರುವ ಅನೇಕರು ಇತ್ತೀಚಿನ ದಿನಗಳಲ್ಲಿ ಹೀಗೆ ಕ್ರಿಯಾಶೀಲವಾಗಿ ಕರ್ತವ್ಯನಿರತರಾಗುವಲ್ಲಿ ಹೆಚ್ಚೆಚ್ಚು ಆಸಕ್ತರಾಗುತ್ತಿದ್ದಾರೆ, ಒಳ್ಳೆಯದೇ; ಅಂತೂ ಎಲ್ಲ ಸಾಮಾಜಿಕ ಜಾಲತಾಣಗಳ ಕೃಪೆ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:02 pm, Sat, 17 September 22