Viral Video: ಊಟ ಕೊಡಲು ನಿರಾಕರಿಸಿದ್ದಕ್ಕೆ ಎಣ್ಣೆ ಏಟಲ್ಲಿ ರೆಸ್ಟೋರೆಂಟ್‌ಗೆ ಟ್ರಕ್ ನುಗ್ಗಿಸಿದ ಚಾಲಕ; ವಿಡಿಯೋ ವೈರಲ್
ಎಣ್ಣೆ ಏಟಲ್ಲಿ ಕುಡಿದವನು ಏನ್ ಮಾಡ್ತಾನೆ ಅನ್ನೋದು ಅವನಿಗೆನೇ ಗೊತ್ತಾಗಲ್ಲ ಅಂತಾರೆ. ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಆದ್ರೆ ಇಲ್ಲೊಂದು ಘಟನೆ ಮಾತ್ರ ಅದನ್ನು ನಿಜ ಎಂದು ಸಾಬೀತು ಮಾಡಿದೆ. ಹೌದು ಟ್ರಕ್ ಚಾಲಕನೊಬ್ಬ ಊಟ ಆರ್ಡರ್ ಮಾಡಲು ಬಂದಾಗ ರೆಸ್ಟೋರೆಂಟ್ ಸಿಬ್ಬಂದಿ ಊಟ ಕೊಡಲು ನಿರಾಕರಿಸಿದ್ದು, ಮೊದಲೇ ಎಣ್ಣೆ ಏಟಲ್ಲಿ ಇದ್ದ ಚಾಲಕ ಇದರಿಂದ ಕೋಪಗೊಂಡು ತನ್ನ ಟ್ರಕ್ ಅನ್ನೇ ರೆಸ್ಟೋರೆಂಟ್ ಒಳಗೆ ನುಗ್ಗಿಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಕುಡಿದ ಮತ್ತಿನಲ್ಲಿ ಕುಡುಕರು ಮಾಡುವ ಮಾಡುವ ಎಡವಟ್ಟುಗಳು, ಅವಾಂತರಗಳು ಒಂದೆರಡಲ್ಲ. ಹೊಟ್ಟೆಗೆ ಒಂದಿಷ್ಟು ಸಾರಾಯಿ ಇಳಿದರೆ ಸಾಕು ಕೆಲವರಿಗೆ ತಾವೇನು ಮಾಡ್ತಿದ್ದೇವೆ ಎಂಬುದು ಕೂಡಾ ಅರಿವಿಗೆ ಬರೋಲ್ಲ. ಹೀಗೆ ಕುಡುಕರು ನಶೆಯಲ್ಲಿ ಬೀದಿ ರಂಪ ಮಾಡುವ, ಎಡವಟ್ಟು ಮಾಡಿ ಪ್ರಾಣಕ್ಕೆ ಕುತ್ತು ತರುವ ಕೆಲಸಗಳನ್ನು ಮಾಡುವ ಸುದ್ದಿಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಊಟ ಕೊಡಲು ನಿರಾಕರಿಸಿದ್ದಕ್ಕೆ ಕಂಠ ಪೂರ್ತಿ ಕುಡಿದಿದ್ದ ಟ್ರಕ್ ಡ್ರೈವರ್, ಕೋಪದಲ್ಲಿ ತನ್ನ ಟ್ರಕ್ ಅನ್ನು ರೆಸ್ಟೋರೆಂಟ್‌ಗೆ ನುಗ್ಗಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ಪುಣೆಯಲ್ಲಿ ನಡೆದಿದ್ದು, ಆಹಾರ ಸಿಗದಿದ್ದಾಗ ಪ್ರಾಣಿಗಳು ಉಗ್ರ ರೂಪ ತಾಳುವಂತೆ, ಇಲ್ಲೊಬ್ಬ ಡ್ರೈವರ್ ಕೂಡಾ ಉಗ್ರ ರೂಪ ತಾಳಿ ಊಟ ಕೊಡಲು ನಿರಾಕರಿಸಿದ ರೆಸ್ಟೋರೆಂಟಿಗೆ ಟ್ರಕ್ ನುಗ್ಗಿಸಿದ್ದಾನೆ. ಈ ಡ್ರೈವರ್ ಸೊಲ್ಲಾಪುರದಿಂದ ಪುಣೆಗೆ ಹೋಗುವ ಮಾರ್ಗದಲ್ಲಿ ಗೋಕುಲ್ ರೆಸ್ಟೋರೆಂಟ್ ಅಲ್ಲಿ ಊಟ ಮಾಡಲು ಟ್ರಕ್ ನಿಲ್ಲಿಸಿದ್ದಾನೆ. ಮತ್ತು ರೆಸ್ಟೋರೆಂಟಿಗೆ ಪ್ರವೇಶಿಸಿದಾಗ ಮಾಲೀಕರು ಊಟ ಕೊಡಲು ನಿರಾಕರಿಸಿದ್ದಾರೆ. ಮೊದಲೇ ಕುಡಿದ ಅಮಲಿನಲ್ಲಿದ್ದ ಆತ ಇದರಿಂದ ಕೋಪಗೊಂಡು ತನ್ನ ಟ್ರಕ್ ಅನ್ನೇ ರೆಸ್ಟೋರೆಂಟ್ ಒಳಗೆ ನುಗ್ಗಿಸಿದ್ದಾನೆ. ಈ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.
VIDEO | Maharashtra: A truck driver rammed his vehicle into a hotel building in #Pune after he was reportedly denied food. The truck driver was allegedly drunk. The incident took place on Friday night.#PuneNews #maharashtranews
(Source: Third Party)
(Full video available on… pic.twitter.com/TrPEF1ZxrA
— Press Trust of India (@PTI_News) September 7, 2024
ಈ ಕುರಿತ ಪೋಸ್ಟ್ ಒಂದನ್ನು Press Trust of India ತನ್ನ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕುಡಿದ ಮತ್ತಿನಲ್ಲಿ ಚಾಲಕ ಪದೇ ಪದೇ ಟ್ರಕ್‌ನಿಂದ ರೆಸ್ಟೋರೆಂಟ್ ಬಾಗಿಲು ಮತ್ತು ಗೋಡೆಗೆ ಡಿಕ್ಕಿ ಹೊಡೆಯುತ್ತಿರುವ ದೃಶ್ಯವನ್ನು ಕಾಣಬಹುದು. ಪರಿಣಾಮ ಅಲ್ಲಿದ್ದ ಕೆಲ ವಾಹನಗಳಿಗೂ ಹಾನಿಯಾಗಿದೆ.
ಇದನ್ನೂ ಓದಿ: ಎಂಥಾ ಕಾಲ ಬಂತು ನೋಡಿ…. ಸಾವಿನ ಮನೆಯಲ್ಲಿ ಹೆಣದ ಜೊತೆಯೂ ರೀಲ್ಸ್
ಸೆಪ್ಟೆಂಬರ್ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ 19 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ʼಈ ಘಟನೆ ನಿಜಕ್ಕೂ ಭಯಾನಕವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ಕುಡಿದು ಗಾಡಿ ಓಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ