ಬೆಂಗಳೂರು: ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಆಗಸ್ಟ್ 4ರಂದು ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಅದಾದ ಕೆಲವೇ ದಿನಗಳ ನಂತರ ಅವರು ನೋಯ್ಡಾದ ಮಾಲ್ ಬಳಿ ಪತ್ತೆಯಾಗಿದ್ದಾರೆ. ಅವರನ್ನು ಯಾರಾದರೂ ಕಿಡ್ನಾಪ್ ಮಾಡಿದ್ದಾರೆಯೇ ಎಂದು ತನಿಖೆ ಆರಂಭಿಸಿದ ಪೊಲೀಸರಿಗೆ ಆ ಇಂಜಿನಿಯರ್ ಹೇಳಿದ ಮಾತು ಕೇಳಿ ಆಘಾತವಾಗಿದೆ.
ಉತ್ತರ ಬೆಂಗಳೂರಿನ ನಿವಾಸಿಯಾಗಿದ್ದ ಈ ವ್ಯಕ್ತಿ ಚಲನಚಿತ್ರವನ್ನು ವೀಕ್ಷಿಸಿದ ನಂತರ ಮಾಲ್‌ನಿಂದ ಹೊರಗೆ ಬರುತ್ತಿರುವುದನ್ನು ಕಂಡ ಪೊಲೀಸರು ಶುಕ್ರವಾರ ಬೆಳಿಗ್ಗೆ ಅವರನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಬೆಂಗಳೂರಿನಿಂದ ತಾನು ನೊಯ್ಡಾಕ್ಕೆ ಓಡಿಹೋಗಲು ಆತನ ಹೆಂಡತಿಯೇ ಕಾರಣ ಎಂದು ಅವರು ಹೇಳಿಕೆ ನೀಡಿದ್ದಾರೆ.
ತನ್ನ ಪತಿಯನ್ನು ಪತ್ತೆಹಚ್ಚಲು ಪೊಲೀಸರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಆ ಟೆಕ್ಕಿಯ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಆಕೆಯ ಪ್ರಕಾರ, ಸ್ವಲ್ಪ ಹಣವನ್ನು ಪಡೆಯಲು ಎಟಿಎಂಗೆ ಹೋಗಿದ್ದ ಗಂಡ ನಂತರ ನಾಪತ್ತೆಯಾಗಿದ್ದರು. 2 ವಾರದಿಂದ ಫೋನ್ ಕೂಡ ಮಾಡಿರಲಿಲ್ಲ.
ಉತ್ತರ ಬೆಂಗಳೂರಿನ ನಿವಾಸಿಯಾದ ಟೆಕ್ಕಿ ಆಗಸ್ಟ್ 4ರಿಂದ ನಾಪತ್ತೆಯಾಗಿದ್ದರು. ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಗಂಡ ಕಾಣೆಯಾಗುತ್ತಿರುವುದರ ಬಗ್ಗೆ ಪೋಸ್ಟ್ ಮಾಡಿದ್ದರು. ತನ್ನ ಪತಿ ಕಿಡ್ನಾಪ್ ಆಗಿರುವ ಶಂಕೆ ಪತ್ನಿಗೆ ಇತ್ತು. ಈ ಕುರಿತಾದ ತನಿಖೆಯ ಆರಂಭಿಕ ಅವಧಿಯಲ್ಲಿ, ಆ ವ್ಯಕ್ತಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದರಿಂದ ಪೊಲೀಸರಿಗೆ ಆತನ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಪೊಲೀಸರು ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಆದರೆ, ಟೆಕ್ಕಿ ನೋಯ್ಡಾದಲ್ಲಿ ಹೊಸ ಸಿಮ್ ಖರೀದಿಸಿ ಅದನ್ನು ತನ್ನ ಹಳೆಯ ಫೋನ್‌ಗೆ ಸೇರಿಸಿಕೊಂಡನು. ಅದು ಪೊಲೀಸರಿಗೆ ಅವರನ್ನು ಪತ್ತೆಹಚ್ಚಲು ಸಹಾಯ ಮಾಡಿತು.
ಮಾಲ್‌ನಿಂದ ಹೊರಬಂದಾಗ ಟೆಕ್ಕಿಯನ್ನು ಭೇಟಿಯಾದ ತನಿಖಾಧಿಕಾರಿಗಳು ಅವರನ್ನು ಸುತ್ತುವರೆದರು. ಆಗ ಸಿವಿಲ್ ಡ್ರೆಸ್ನಲ್ಲಿದ್ದವರು ಪೊಲೀಸರೆಂದೂ, ಅವರು ತನ್ನನ್ನೇ ಹುಡುಕಿಕೊಂಡು ಬಂದಿದ್ದಾರೆಂದೂ ತಿಳಿದು ನಕ್ಕ ಆ ಟೆಕ್ಕಿ ನೀವು ನನ್ನನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ, ನಾನಂತೂ ಮತ್ತೆ ಬೆಂಗಳೂರಿಗೆ ಬಂದು ನನ್ನ ಹೆಂಡತಿಯ ಜೊತೆ ಬದುಕುವುದಿಲ್ಲ ಎಂದಿದ್ದಾರೆ.
ಕೆಲವು ಗಂಟೆಗಳ ನಂತರ ಆ ಮೂವರು ಪೊಲೀಸ್ ಅಧಿಕಾರಿಗಳು ಆ ಟೆಕ್ಕಿಯನ್ನು ಬೆಂಗಳೂರಿಗೆ ವಾಪಾಸ್ ಬರಲು ಮನವೊಲಿಸಿದರು. “ನೀವು ನನ್ನನ್ನು ಜೈಲಿಗೆ ಹಾಕಿ. ನಾನು ಅಲ್ಲೇ ವಾಸ ಮಾಡುತ್ತೇನೆ. ಆದರೆ ನಾನು ಹೆಂಡತಿಯ ಜೊತೆ ಜೀವನ ಮಾಡುವುದಿಲ್ಲ” ಎಂದು ಟೆಕ್ಕಿ ಹಠ ಹಿಡಿದ್ದರು. ಆದರೆ, ಕೇಸ್ ಕ್ಲೋಸ್ ಆಗಬೇಕೆಂದರೆ ನೀವು ಬೆಂಗಳೂರಿಗೆ ಬರಲೇಬೇಕೆಂದು ಪೊಲೀಸರು ಅವರ ಮನವೊಲಿಸಿದರು.
ಇದನ್ನೂ ಓದಿ: Viral Video: ಸಖತ್ತಾಗಿ ಸ್ಟೆಪ್ ಹಾಕಿದ ಎಲಾನ್ ಮಸ್ಕ್ – ಡೊನಾಲ್ಡ್ ಟ್ರಂಪ್; AI ಡ್ಯಾನ್ಸ್ ವಿಡಿಯೋ ವೈರಲ್
ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪೊಲೀಸರು ಆತನಿಂದ ಹೇಳಿಕೆ ಪಡೆದು ಮನೆಗೆ ವಾಪಸ್ ಕಳುಹಿಸಿದ್ದಾರೆ. ತನ್ನ ಪತ್ನಿ ಕಿರುಕುಳ ನೀಡುತ್ತಾಳೆ ಮತ್ತು ಹಿಂಸಿಸುತ್ತಾಳೆ ಎಂದು ಟೆಕ್ಕಿ ಹೇಳಿಕೆಯಲ್ಲಿ ತಿಳಿಸಿದ್ದು, ಆಖೆಯ ಕಾಟ ತಾಳಲಾರದೆ ಬೆಂಗಳೂರು ಬಿಟ್ಟು ನೊಯ್ಡಾಗೆ ಓಡಿಹೋಗಿದ್ದೆ ಎಂದಿದ್ದಾರೆ.
ಮಾನಸಿಕ ಹಿಂಸೆಯಿಂದ ಬೇಸತ್ತಿದ್ದೇನೆ:
ನಾನು ಅವಳ ಎರಡನೇ ಪತಿ. 3 ವರ್ಷಗಳ ಹಿಂದೆ ನಾನು ಅವಳನ್ನು ಭೇಟಿಯಾದಾಗ ಅವಳು ಗಂಡನಿಂದ ಡೈವೋರ್ಸ್ ಪಡೆದಿದ್ದಳು, ಆಕೆಗೆ 12 ವರ್ಷ ವಯಸ್ಸಿನ ಮಗಳೂ ಇದ್ದಳು. ನನಗೆ ಆಗ ಮದುವೆಯಾಗಿರಲಿಲ್ಲ. ಅವಳನ್ನು ಮದುವೆಯಾಗಲು ಒಪ್ಪಿಕೊಂಡೆ. ನಮಗೆ ಈಗ ಎಂಟು ತಿಂಗಳ ಮಗಳಿದ್ದಾಳೆ. ನನ್ನ ಹೆಂಡತಿ ನನ್ನ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತಾಳೆ, ನನ್ನ ತಟ್ಟೆಯಿಂದ ಒಂದು ಹನಿ ಅನ್ನ ಅಥವಾ ಚಪಾತಿ ಬಿದ್ದರೂ ಅವಳು ಕೂಗುತ್ತಾಳೆ. ನಾನು ಅವಳು ಹೇಳಿದ ಹಾಗೆಯೇ ಬಟ್ಟೆ ಹಾಕಬೇಕು, ಟೀ ಕುಡಿಯಲು ಕೂಡ ಒಂಟಿಯಾಗಿ ಹೋಗಲು ಬಿಡುವುದಿಲ್ಲ. ಎಲ್ಲೇ ಹೋಗುವುದಾದರೂ ಆಕೆಯೊಂದಿಗೇ ಹೋಗಬೇಕು. ಅವಳಿಂದ ನನಗೆ ಸ್ವಾತಂತ್ರ್ಯವೇ ಇಲ್ಲದಂತಾಗಿದೆ ಎಂದು ಆ ಟೆಕ್ಕಿ ತಾನು ಪರಾರಿಯಾಗಲು ಕಾರಣವೇನೆಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.
ನಾನು ಕಾಣೆಯಾಗಿದ್ದೇನೆ ಎಂದು ನನ್ನ ಪತ್ನಿ ಆನ್‌ಲೈನ್‌ನಲ್ಲಿ ನನ್ನ ವೀಡಿಯೊಗಳು ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದರಿಂದ, ನಾನು ನನ್ನ ರೂಪವನ್ನು ಬದಲಾಯಿಸಿಕೊಂಡಿದ್ದೆ. ನಾನು ತಲೆಯನ್ನು ಪೂರ್ತಿಯಾಗಿ ಬೋಳಿಸಿಕೊಂಡಿದ್ದರಿಂದ ಯಾರಿಗೂ ನನ್ನ ಗುರುತು ಸಿಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ