Viral Video : ಅಮೆರಿಕದ ಒರ್ಲ್ಯಾಂಡೊದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಫ್ಲೋರಿಡಾದ ಕರಾವಳಿ ಭಾಗದಲ್ಲಿರುವ ವಿವಿಧ ರಾಜ್ಯಗಳ ಮೇಲೆ ಚಂಡಮಾರುತವು ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಈ ಪ್ರದೇಶಗಳಲ್ಲಿಯ ಜನರು ಬಿರುಗಾಳಿ ಮತ್ತು ಮಳೆಗೆ ಸಿಲುಕಿ ಅಪಾಯಕರ ಸನ್ನಿವೇಶಕ್ಕೀಡಾಗುತ್ತಿದ್ದಾರೆ. ಅನೇಕ ಜನರು ತಮ್ಮ ಕಾರುಗಳೊಂದಿಗೆ ಜಲಾವೃತವಾದ ರಸ್ತೆಗಳಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ನರ್ಸ್ ಒಬ್ಬರು ತನ್ನ ಕಾರಿನೊಂದಿಗೆ ಪ್ರವಾಹದಲ್ಲಿ ಸಿಲುಕಿದ್ದಾರೆ. ಅದೃಷ್ಟವಶಾತ್ ಅದೇ ಮಾರ್ಗವಾಗಿ ಹೊರಡುತ್ತಿದ್ದ ವರದಿಗಾರರೊಬ್ಬರು ಈಕೆಗೆ ಸಹಾಯ ಮಾಡಿದ್ದಾರೆ.
Wesh2 News ತನ್ನ ವರದಿಗಾರ ಟೋನಿ ಅಟ್ಕಿನ್ಸ್ ನರ್ಸ್‌ಗೆ ಸಹಾಯ ಮಾಡುತ್ತಿರುವ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಘಟನೆಯನ್ನು ವಿವರಿಸಿದೆ, ‘ನಮ್ಮ ವರದಿಗಾರರು ಬೆಳಗ್ಗೆ ಒರ್ಲ್ಯಾಂಡೋದ ಪ್ರವಾಹದಿಂದ ನರ್ಸ್ ಒಬ್ಬರನ್ನು ರಕ್ಷಿಸಿದ್ದಾರೆ. ಆಕೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಇಂಥ ಅವಘಡಕ್ಕೆ ನೀವೂ ಸಿಲುಕಬೇಡಿ. ಹರಿವು ಹೆಚ್ಚಿದ್ದಲ್ಲಿ ಪ್ರಯಾಣಿಸಬೇಡಿ’.
ಈ ವಿಡಿಯೋದಲ್ಲಿ ನರ್ಸ್ ಕಾರು ಭಾಗಶಃ ನೀರಿನಲ್ಲಿ ಮುಳುಗಿದೆ. ವರದಿಗಾರರು ಬೆನ್ನ ಮೇಲೆ ಆ ಮಹಿಳೆಯನ್ನು ಹೊತ್ತುಕೊಂಡು ಸುರಕ್ಷಿತ ಜಾಗಕ್ಕೆ ತಲುಪಿಸುತ್ತಾರೆ. ಈ ವರದಿಗಾರರನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.
‘ನೀವು ಧೈರ್ಯಶಾಲಿ, ತುಂಬಾ ಕರುಣಾಮಯಿ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ’ ಎಂದು ಇನ್ಸ್ಟಾಗ್ರಾಂ ಖಾತೆದಾರರು ಹೇಳಿದ್ದಾರೆ. ‘ಆಕೆಯ ಜೀವ ಉಳಿಸಿದ್ದಕ್ಕೆ ಧನ್ಯವಾದ ನೀವು ಸಹೃದಯಿ’ ಎಂದು ಮತ್ತೊಬ್ಬರು ಶಭಾಷ್ ಎಂದಿದ್ದಾರೆ.
ಸಂದರ್ಭ ಹೇಗೆ ಬರುತ್ತದೋ ಏನೋ, ಇಂಥ ಅವಘಡಗಳಿಂದ ಹೊರಬರುವುದನ್ನು ಮತ್ತು ಸಿಲುಕಿಕೊಂಡವರನ್ನು ಸುರಕ್ಷಿತ ಜಾಗಕ್ಕೆ ಕರೆತರುವ ಸಹಾಯವನ್ನು ಪ್ರತಿಯೊಬ್ಬರೂ ಮಾಡಲೇಬೇಕು. ಮನುಷ್ಯರಿಗೆ ಮನುಷ್ಯರೇ ಸಹಾಯ ಮಾಡುವುದಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:38 pm, Fri, 30 September 22