
ಸೌದಿ ಅರೇಬಿಯಾ, ಆಗಸ್ಟ್ 01: ಬದುಕಿನಲ್ಲಿ ಯಾವಾಗ ಹೇಗೆ ಕಹಿ ಘಟನೆಗಳು ನಡೆಯುತ್ತದೆ ಎಂದು ಊಹಿಸಲು ಅಸಾಧ್ಯ. ಸಂತೋಷವಾಗಿದ್ದ ಕ್ಷಣಗಳು ದುಃಖಕರವಾಗಿ ಮಾರ್ಪಡಾಗಬಲ್ಲದು. ಇದಕ್ಕೆ ಸಾಕ್ಷಿ ಈ ವಿಡಿಯೋ. ಸೌದಿ ಅರೇಬಿಯಾದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ (Green Mountain park in Saudi Arabia) 360 ಡಿಗ್ರಿ ಎಂದು ಕರೆಯಲ್ಪಡುವ ಜೋಕಾಲಿ ರೈಡ್ (360 Degree Ride) ಮಧ್ಯದ ಕಂಬವೇ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಈ ಘಟನೆಯಲ್ಲಿ ಬೃಹತ್ ಜೋಕಾಲಿಯಲ್ಲಿ ಕುಳಿತಿದ್ದ 23 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ದುರಂತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
@nabilajamal ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ 360 ಡಿಗ್ರಿ ಎಂದು ಕರೆಯಲ್ಪಡುವ ಜೋಕಾಲಿಯ ಮಧ್ಯಭಾಗವು ಎರಡು ತುಂಡುಗಳಾಗಿ ಮುರಿದು ಬೀಳುವುದನ್ನು ನೋಡಬಹುದು. ಇದರಲ್ಲಿ ಕುಳಿತುಕೊಂಡಿದ್ದ ಜನರು ಜೋರಾಗಿ ಕಿರುಚುತ್ತಿದ್ದು, ಮೇಲಿಂದ ಕೆಳಗೆ ಎಸೆಯಲ್ಪಡುತ್ತಿರುವ ದೃಶ್ಯವನ್ನು ನೀವಿಲ್ಲಿ ಕಾಣಬಹುದು.
Horrific ride malfunction in Saudi Arabia
A “360-degree” amusement ride broke mid-air at Green Mountain Park in Taif
At least 23 people injured while on board
Visuals show the ride snapping in half pic.twitter.com/xr25xOAcFa
— Nabila Jamal (@nabilajamal_) July 31, 2025
ಈ ಬೃಹತಾಕಾರದ ಜೋಕಾಲಿ ಮುರಿದು ಬಿದ್ದಿದ್ದು, 23 ಜನರು ಗಾಯಗೊಂಡಿದ್ದಾರೆ. ಆದರೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಈ ಜೋಕಾಲಿ ಮುರಿದು ಬಿದ್ದ ರಭಸಕ್ಕೆ ಎದುರಿಗೆ ನಿಂತಿದ್ದ ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ದುರಂತ ಸಂಭವಿಸುತ್ತಿದ್ದಂತೆ ಭದ್ರತಾ ಪಡೆಗಳು ಹಾಗೂ ತುರ್ತು ಪ್ರತಿಕ್ರಿಯೆ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆಯ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ರೈಡ್‌ನ ಅಸಮರ್ಪಕ ಕಾರ್ಯದ ಕಾರಣದ ಬಗ್ಗೆ ತುರ್ತು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Viral: ಪ್ರಬಲ ಭೂಕಂಪದ ನಡುವೆಯೂ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ವಿಡಿಯೋ ವೈರಲ್
ಜುಲೈ 31 ರಂದು ಶೇರ್ ಮಾಡಲಾದ ಈ ವಿಡಿಯೋ ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಒಬ್ಬ ವ್ಯಕ್ತಿಯನ್ನು ಮೇಲಿಂದ ಕೆಳಗೆ ಎಸೆಯಲಾಯಿತು. ಎಲ್ಲರೂ ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ನಾನು ಈ 360 ಡಿಗ್ರಿ ರೈಡ್ ನಲ್ಲಿ ಎಂದಿಗೂ ಹೋಗುವುದಿಲ್ಲ. ಇನ್ನೆಂದಿಗೂ ಈ ಜೋಕಾಲಿಯನ್ನು ಹತ್ತುವ ಪ್ರಯತ್ನ ಮಾಡಲಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ದೃಶ್ಯವು ನಿಜಕ್ಕೂ ಭಯಾನಕವಾಗಿದೆ. ಒಂದು ಕ್ಷಣ ಎದೆ ಝಲ್ ಎನ್ನಿತು ಎಂದು ಕಾಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ