Viral Video : ಮೈಸೂರಿನ ಯುವಕಲಾವಿದ ಬಾದಲ್ ನಂಜುಂಡಸ್ವಾಮಿ ಬಣ್ಣಕುಂಚಗಳ ವ್ಯಾಮೋಹವಿರುವ ಪ್ರತಿಯೊಬ್ಬರಿಗೂ ಪರಿಚಿತರು. ಅದರಲ್ಲೂ ಬಿಬಿಎಂಪಿ ಅಧಿಕಾರಿಗಳಿಗಂತೂ ಕೇಳುವುದೇ ಬೇಡ! ಸುಮಾರು ಹತ್ತು ವರ್ಷಗಳಿಂದ ಸ್ಟ್ರೀಟ್ ಆರ್ಟ್ ಮೂಲಕ ವ್ಯವಸ್ಥೆಯ ಓರೆಕೋರೆಗಳನ್ನು ಗುರುತಿಸುತ್ತ ಬಂದಿರುವ ಇವರು ನಮ್ಮ ನಡುವಿನ ಅಪರೂಪದ, ಪ್ರತಿಭಾನ್ವಿತ ಕಲಾವಿದರು. ಬೆಂಗಳೂರು ಮತ್ತು ಮೈಸೂರಿನ ಹದಗೆಟ್ಟ ರಸ್ತೆಗಳನ್ನು, ರಸ್ತೆಗುಂಡಿಗಳನ್ನು ಕೇಂದ್ರೀಕರಿಸಿಕೊಂಡು ಕಲೆಯ ಮೂಲಕ ವ್ಯವಸ್ಥೆಯ ಚುಕ್ಕಾಣಿ ಹಿಡಿದವರ ಗಮನ ಸೆಳೆದ ಇವರ ಸೃಜನಶೀಲತೆ ಅಗಾಧ. ಬಾದಲ್ ಒಂದು ಹಂತದಲ್ಲಿ ಎಷ್ಟು ಜನಪ್ರಿಯರಾದರೆಂದರೆ, ಯಾರೇ ಎಲ್ಲೇ ರಸ್ತೆಗುಂಡಿಗಳನ್ನು ನೋಡಿದರೂ ಮೊದಲು ಬಾದಲ್ ಅವರಿಗೆ ತಿಳಿಸಬೇಕು ಎನ್ನುವಷ್ಟು! ಹಾಗಿದ್ದರೆ ಬಾದಲ್ ಈಗ ಹೇಗೆ ಸುದ್ದಿಯಲ್ಲಿದ್ದಾರೆ? ಈ ವಿಡಿಯೋ ನೋಡಿ.
ಇತ್ತೀಚೆಗೆ ಬೆಂಗಳೂರಿನ ಓರಿಯನ್ ಮಾಲ್ನಲ್ಲಿ ಬಾದಲ್ ಸೃಷ್ಟಿಸಿದ ತ್ರೀಡಿ ಆನೆ ಬೆಂಗಳೂರಿಗರನ್ನು ಬಹುವಾಗಿ ಸೆಳೆಯುತ್ತಿದೆ. ಗೋಡೆಯೊಡೆದುಕೊಂಡು ಇನ್ನೇನು ಆನೆ ಬಂದೇ ಬಿಡುವುದೇ ಎಂಬಂಥ ನೈಜ ಮತ್ತು ಮಾಂತ್ರಿಕತೆಯನ್ನು ಬಾದಲ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಬೆಂಗಳೂರಿನ ಓರಿಯನ್ ಮಾಲ್ನಲ್ಲಿರುವ ಈ ಆನೆಯ ಕಲಾಕೃತಿಯ ಬಳಿ ಯಾರೂ ಹೋಗಿ ಫೋಟೋ ತೆಗೆಸಿಕೊಳ್ಳಬಹುದು. ‘ಈ ಸ್ಥಳದಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಕಡಿಮೆ ಬೆಳಕಿದ್ದರೆ ಒಳ್ಳೆಯದು’ ಎಂದು ಸಲಹೆಯನ್ನೂ ನೀಡಿದ್ದಾರೆ ಬಾದಲ್.
ರಂಗಕಲಾವಿದರು, ಕಥೆಗಾರರು, ಕಲಾನಿರ್ದೇಶಕರು ಆಗಿರುವ ಬಾದಲ್ ಈಗಾಗಲೇ ತಮ್ಮ ಚಿತ್ರಕಲೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವಂಥವರು. ಇವರ ಅದ್ಭುತ ಕಲೆಗಾರಿಕೆಗೆ ಮತ್ತಷ್ಟು ಅಂತಾರಾಷ್ಟ್ರೀಯ ಮನ್ನಣೆ ಸಿಗಬೇಕೆಂದು ನೆಟ್ಟಿಗರು ಹಾರೈಸಿದ್ದಾರೆ. ಇವರ ಸೃಜನಶೀಲತೆಗೆ ಇವರೇ ಸಾಟಿ ಎಂದು ಶ್ಲಾಘಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬಾದಲ್ ಅವರ ಆರ್ಟ್ಮ್ಯಾಜಿಕ್ ಎತ್ತ ಸಾಗಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಓರಿಯನ್ ಮಾಲ್ಗೆ ಭೇಟಿ ಕೊಟ್ಟಾಗ ಮರೆಯದಿರಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:13 pm, Tue, 29 November 22