ಬೆಂಗಳೂರಿನಲ್ಲಿ ಟ್ಯಾಕ್ಸಿ ಹಗರಣ; ಪ್ರಯಾಣಕ್ಕೆ 450 ರೂ. ಎಂದು ಹೇಳಿ ಮಹಿಳೆಯಿಂದ 3,000 ರೂ. ವಸೂಲಿ ಮಾಡಿದ ಡ್ರೈವರ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 24, 2025 | 12:48 PM

ಆನ್‌ಲೈನ್‌ ಸ್ಕ್ಯಾಮ್‌ಗಳಂತೆ ಕೆಲವೊಂದು ಟ್ಯಾಕ್ಸಿ ಡ್ರೈವರ್ಸ್‌ಗಳು ಕೂಡಾ ತಮ್ಮ ಕ್ಯಾಬ್‌ಗಳಲ್ಲಿ ಬರುವ ಪ್ಯಾಸೆಂಜರ್‌ಗಳಿಂದ ಹಣ ದೋಚುವಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಂತಹ ಸಾಕಷ್ಟು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಏರ್‌ಪೋರ್ಟ್‌ನಿಂದ ಪಿಜಿಗೆ ಕೇವಲ 450 ರೂ. ತಗುಲುತ್ತೆ ಅಂತ ಹೇಳಿ ಟ್ಯಾಕ್ಸಿ ಡ್ರೈವರ್‌ ಒಬ್ಬ ಮಹಿಳೆಯಿಂದ 3000 ರೂ. ಕಿತ್ತುಕೊಂಡು ಆಕೆಯನ್ನು ದಾರಿ ಮಧ್ಯೆ ಬಿಟ್ಟು ಹೋಗಿದ್ದಾನೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್‌ ಆಗುತ್ತಿದೆ.

ಬೆಂಗಳೂರಿನಲ್ಲಿ ಟ್ಯಾಕ್ಸಿ ಹಗರಣ; ಪ್ರಯಾಣಕ್ಕೆ 450 ರೂ. ಎಂದು ಹೇಳಿ ಮಹಿಳೆಯಿಂದ 3,000 ರೂ. ವಸೂಲಿ ಮಾಡಿದ ಡ್ರೈವರ್
ಸಾಂದರ್ಭಿಕ ಚಿತ್ರ
Follow us on

ನಗರ ಪ್ರದೇಶಗಳಲ್ಲಿ ಹೆಚ್ಚಿನವರು ಆರಾಮದಾಯಕ ಪ್ರಯಾಣಕ್ಕಾಗಿ ಕ್ಯಾಬ್‌ಗಳನ್ನೇ ಹೆಚ್ಚಾಗಿ ಬಳಸುತ್ತಿರುತ್ತಾರೆ. ಆದ್ರೆ ಕ್ಯಾಬ್‌ಗಳಲ್ಲಿಯೂ ಹಗರಣಗಳು ನಡೆಯುತ್ತದೆ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಕೆಲವು ಕ್ಯಾಬ್‌ ಚಾಲಕರು ಪ್ರಯಾಣಿಕರಿಗೆ ಮೋಸ ಮಾಡಿ ಹಣ ಪೀಕಿದ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಏರ್‌ಪೋರ್ಟ್‌ನಿಂದ ಪಿಜಿಗೆ ಕೇವಲ 450 ರೂ. ತಗುಲುತ್ತೆ ಅಂತ ಹೇಳಿ ಟ್ಯಾಕ್ಸಿ ಡ್ರೈವರ್‌ ಒಬ್ಬ ಮಹಿಳೆಯಿಂದ 3000 ರೂ. ಕಿತ್ತುಕೊಂಡು ಆಕೆಯನ್ನು ದಾರಿ ಮಧ್ಯೆ ಬಿಟ್ಟು ಹೋಗಿದ್ದಾನೆ. ಮಹಿಳೆ ಈ ಭಯಾನಕ ಅನುಭವವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಮಹಿಳೆ ಎದುರಿಸಿದ ಭಯಾನಕ ಪರಿಸ್ಥಿತಿಯ ಕಥೆಯನ್ನು r/bangalore ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನಾನು ರಾತ್ರಿ 10.30 ರ ಸುಮಾರಿಗೆ ಬೆಂಗಳೂರಿನ ಟರ್ಮಿನಲ್‌ 1 ಏರ್‌ಪೋರ್ಟ್‌ನಲ್ಲಿ ಇಳಿದೆ. ಮತ್ತು ನಾನು ಇಲ್ಲಿಂದ ಪಿಜಿಗೆ ಬಸ್‌ನಲ್ಲಿ ಹೋಗಲು ಯೋಜಿಸಿದೆ. ಹೀಗೆ ಬಸ್‌ಸ್ಟ್ಯಾಂಡ್‌ಗೆ ಹೋಗುವ ಸಂದರ್ಭದಲ್ಲಿ ಸ್ನೇಹಪೂರ್ವಕವಾಗಿ ಮಾತನಾಡುತ್ತಾ ಬಂದ ವ್ಯಕ್ತಿಯೊಬ್ಬರು 450 ರೂ. ಪೇ ಮಾಡಿ ನಾನು ನಿಮ್ಮನ್ನು ನೇರವಾಗಿ ಪಿಜಿಗೆ ತಲುಪಿಸುತ್ತೇನೆ, ನನಗೆ ಕೆಆರ್‌ ಪುರಂಗೆ ಸ್ನೇಹಿತನ್ನು ಬಿಡಲು ಹೋಗ್ಲಿಕ್ಕೆ ಕೂಡಾ ಇದೆ ಎಂದು ಹೇಳಿದರು. ಮತ್ತು ರೈಡ್‌ ಇತಿಹಾಸವನ್ನು ಕೂಡಾ ತೋರಿಸಿ, ಅವರ ಟ್ಯಾಕ್ಸಿಯಲ್ಲೇ ಬರುವಂತೆ ಒತ್ತಾಯಿಸಿದರು.

ನಾನು ಕಾರಿನಲ್ಲಿ ಕೂರುವ ವೇಳೆಯೇ ಇನ್ನೊಬ್ಬ ವ್ಯಕ್ತಿ ಕೂಡಾ ಮುಂದುಗಡೆ ಸೀಟಿನಲ್ಲಿ ಕುಳಿತುಕೊಂಡನು. ಇದರಿಂದ ನಾನು ಸ್ವಲ್ಪ ಭಯಭೀತಳಾದೆ. ಹೀಗೆ ಹೋಗ್ತಾ ಇರಬೇಕಾದರೆ ಟೋಲ್‌ ಪಾವತಿಸಲು ಚಾಲಕ ನನ್ನ ಬಳಿ 200 ರೂ. ಕೇಳಿದನು. ಅಲ್ಲದೆ ಕಾರಲ್ಲಿ ಜೋರಾಗಿ ಮ್ಯೂಸಿಕ್‌ ಬೇರೆ ಹಾಕಿದ್ರು. ಸ್ವಲ್ಪ ದೂರ ಸಾಗಿದ ಮೇಲೆ ಸಿಗರೇಟ್‌ ಸೇದಲು ಮತ್ತು ಚಹಾ ಕುಡಿಯಲು ಗಾಡಿಯನ್ನು ನಿಲ್ಲಿಸಿದನು. ಜೊತೆಗೆ ಪೆಟ್ರೋಲ್‌ಗೂ ಕೂಡಾ 300 ರೂ. ನನ್ನ ಬಳಿಯೇ ಕೇಳಿದ, ಅದನ್ನು ಕೂಡಾ ನಾನೇ ಪಾವತಿಸಿದೆ. ಅಲ್ಲದೆ ಕಾರಿನಲ್ಲಿಯೇ ಸಿಗರೇಟ್‌ ಸೇದಲು ಶುರು ಮಾಡಿದ್ರು. ಇವೆಲ್ಲವೂ ನನಗೆ ಅಹಿತಕರ ಭಾವನೆಯನ್ನು ಉಂಟುಮಾಡಿತು. ಅಂತಿಮವಾಗಿ ಒಂದು ನಿರ್ಜನ ಪ್ರದೇಶದಲ್ಲಿ ಕಾರ್‌ ನಿಲ್ಲಿಸಿ, 3000 ರೂ. ಪೇ ಮಾಡುವಂತೆ ಕೇಳುತ್ತಾನೆ. ಇನ್ನೊಬ್ಬ ನನ್ನ ಮೊಬೈಲ್‌ ಬೇರೆ ಕಿತ್ತುಕೊಳ್ಳುತ್ತಾನೆ. ನಂತರ ಆತ ಮೊಬೈಲ್‌ ಹಿಂತಿರುಗಿಸಿದ್ದು, ಮೊದಲೇ ಭಯದಲ್ಲಿದ್ದ ನಾನು ಅವರು ಕೇಳಿದಷ್ಟು ಹಣ ಪಾವತಿಸಿದೆ. ಸ್ವಲ್ಪ ಹೊತ್ತಿನ ನಂತರ ಉಬಾರ್‌ ಕ್ಯಾಬ್‌ ಬಂತು. ಆ ಕ್ಯಾಬ್‌ ಡ್ರೈವರ್‌ ನನ್ನನ್ನು ಕ್ಷೇಮವಾಗಿ ಪಿಜಿಗೆ ತಲುಪಿಸಿದರು. ಈ ಅನುಭವಂತೂ ತುಂಬಾನೇ ಭಯಾನಕವಾಗಿತ್ತು, ಅದೃಷ್ಟವಶಾತ್‌ ನಾನು ಸುರಕ್ಷಿತವಾಗಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತದ ಅತ್ಯಂತ ದುಬಾರಿ ರೈಲು ಇದು; ಜೇಬಿನಲ್ಲಿ ಹಣ ಇದ್ರೆ ಮಾತ್ರ ಈ ಕಾಸ್ಟ್ಲಿ ಟ್ರೈನ್‌ನಲ್ಲಿ ಪ್ರಯಾಣಿಸಬಹುದಂತೆ…

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಿಶೇಷವಾಗಿ ಮಹಿಳೆಯರು ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗರೂಕರಾಗಿರಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼವಿಮಾನ ನಿಲ್ದಾಣಗಳಲ್ಲಿ ಹೆಚ್ಚಾಗಿ ಇಂತಹ ಟ್ಯಾಕ್ಸಿ ಹಗರಣಗಳು ನಡೆಯುತ್ತಿರುತ್ತವೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಾಧ್ಯವಾದರೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ