Karnataka Government Schools: ಐತಲಾ… ನಮ್ಮಜ್ಜ ಪಾಟಿ ಬ್ಯಾಡಂತಾನ, ಏನ್ ಬರ್ಕಂಬರ್ಲಿ ನೋಟ್ಬುಕ್ನ್ಯಾಗ. ಎಬಿಸಿಡಿ ಎಲ್ಲಾ ನನಗ ಬರಿಯಾಕ ಬರಂಗಿಲ್ಲ್ಯಪ್ಪಾ… ಈ ಮಧ್ಯಾಹ್ನದ ಹೊತ್ತಿನಲ್ಲಿ ತಂಪಾದ ಕಾರಂಜಿಯಂತೆ ನಿಮ್ಮನ್ನು ಮುದಗೊಳಿಸುತ್ತವೆ ಈ ಮಗುವಿನ ನೇರ ಮತ್ತು ಮುಗ್ಧ ಉತ್ತರಗಳು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು (Government School Teacher) ಈ ಮಗುವಿಗೆ ಎಬಿಸಿಡಿ ಬರೆದುಕೊಂಡು ಬಾ ಎಂದು ಹೇಳಿದ್ದಾರೆ. ಅದಕ್ಕೆ ಅದು, ಶಿಕ್ಷಕರಿಗೇ ಪಾಟಿಸವಾಲು ಹಾಕುತ್ತ ಹೋಗುತ್ತದೆ. ಮುಂದಿನ ಸಂಭಾಷಣೆಯನ್ನು ನೀವೇ ಕೇಳಿಬಿಡಿ. ಬರೆದರೆ ಅದರ ಸೊಗಡು ಹಾರಿ ಹೋಗುತ್ತದೆ!
ಈತನಕ ಈ ವಿಡಿಯೋ ಅನ್ನು ಸುಮಾರು 55,000ಕ್ಕೂ ಹೆಚ್ಚು ಜನ ನೋಡಿದ್ದಾರೆ. ಮುನ್ನೂರಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಇದು ಪಕ್ಕಾ ಉತ್ತರ ಕರ್ನಾಟಕದ ರಾಯಚೂರ ತಳೀನಪಾ. ಇದು ನಮ್ಮ ಸರ್ಕಾರಿ ಶಾಲೆಯ ಚತುರ. ಎಷ್ಟು ಸಲ ಈ ವಿಡಿಯೋ ನೋಡಿದರೂ ಬೇಜಾರೇ ಆಗುತ್ತಿಲ್ಲ. ನನಗೂ ಲೇ ಅಂತೀಯಲ್ಲಪಾ ಎಂದು ನಗುವ ಸರ್. ಸರ್ ತಾಳ್ಮೆ ನಿಜಕ್ಕೂ ಗ್ರೇಟ್ ಅಲ್ವಾ? ನನಗನಿಸಿದಂತೆ ಇಂಥ ಮಕ್ಕಳೇ ನಾಳೆ ಜಾಣರಾಗುವುದು… ಅಂತೆಲ್ಲ ಪ್ರತಿಕ್ರಿಯಿಸಿದೆ ನೆಟ್ಮಂದಿ.
ಇದನ್ನೂ ಓದಿ : Viral Video: ಬುಲ್ ಶಾರ್ಕ್ ಅವನ ಕೈಕಚ್ಚಿದ್ದಲ್ಲದೆ ನೀರಿಗೂ ಎಳೆಯುತ್ತದೆ, ಮುಂದೆ?
ಹುಡುಗ ರಾಕ್ ಮೇಷ್ಟ್ರು ಶಾಕ್. ಮಸ್ತ್ ಅದೀಲೇಪಾ ತಮ್ಮಾ, ಮಾಸ್ತರ್ ಮನೀಗ್ ಹೊಕ್ಕಾರ್. ನೈಸ್ ಆ್ಯಕ್ಸೆಂಟ್ ಸ್ಮಾರ್ಟ್ ಕಿಡ್. ಇದು ಪಕ್ಕಾ ನಮ್ಮ ಯಾದಗಿರಿ ಭಾಷೆನೇ. ವಂಡರ್ಫುಲ್ ಟೀಚರ್… ಹೀಗೆ ಜನರೆಲ್ಲ ಖುಷಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂದು ಕೇಳಿದ್ದಾರೆ ಒಬ್ಬರು. ಇದು ಬಗ್ಗುವಿಕೆ ಅಲ್ಲದೆ ಇನ್ನೇನು? ಸಹಜವಾಗಿ ತನ್ನ ತಿಳಿವಿಗೆ ನಿಲುಕಿದ್ದನ್ನು ಪ್ರತ್ಯುತ್ತರಿಸುತ್ತಿದೆ.
ಇದನ್ನೂ ಓದಿ : Viral Video: ”ಪುಟ್ಟಿ, ನೀನು ಸ್ಪೈಡರ್ಮ್ಯಾನ್ನ ಮಗಳೇ? ವಂಡರ್ ವುಮನ್ನ ಮಗಳೇ?”
ದಿನದ ಅನ್ನಕ್ಕಾಗಿ ಮನೆಮಂದಿಯೆಲ್ಲ ಮೈಮುರಿದು ದುಡಿಯಲೇಬೇಕಾದಂಥ ಅನಿವಾರ್ಯತೆ ಇದ್ದ ಕುಟುಂಬಗಳಲ್ಲಿರುವ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ದೇಗುಲ, ಶಿಕ್ಷಕರುಗಳೇ ಎಲ್ಲ. ಇಂಥ ನಿಸ್ಪೃಹ ಮಕ್ಕಳಿಗೆ ಒಳ್ಳೆಯದಾಗಲಿ. ನಿಮ್ಮ ಮನೆಗಳಲ್ಲೂ, ನಿಮ್ಮೂರಿನಲ್ಲೂ ಇಂಥ ಮುಗ್ಧ ಮಕ್ಕಳು ನಿಮ್ಮನ್ನು ಸುತ್ತುವರೆದಿರುತ್ತವೆಯೇ? ಇದು ನಕ್ಕು ಸುಮ್ಮನಾಗುವ ವಿಷಯವಲ್ಲ. ಚಿಲುಮೆಯಂತೆ ಚಿಮ್ಮುವ ಈ ಮಕ್ಕಳಲ್ಲಿ ಪ್ರಚಂಡ ಶಕ್ತಿ ಇದೆ. ಪ್ರೀತಿಯಿಂದ ಶಿಸ್ತನ್ನು ಶಿಕ್ಷಣವನ್ನೂ ಧಾರೆಯೆರೆಯಬೇಕಷ್ಟೇ. ಮಕ್ಕಳೇ ನಾಡಿನ ಆಸ್ತಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:00 pm, Tue, 27 June 23