Viral: ತ್ರಿಪುರಾದ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು; ಇದರ ಹಿಂದಿನ ಕಾರಣ ಏನು?
ಹ್ಯೂಮನ್ ಇಮ್ಯುನೊ ಡಿಫಿಷಿಯೆನ್ಸಿ ವೈರಸ್ (HIV) ಸೋಂಕು ಏಡ್ಸ್ ರೋಗಕ್ಕೆ ಕಾರಣವಾಗುವ ಮಾರಣಾಂತಿಕ ಸೋಂಕು ಆಗಿದೆ. ಇದೀಗ ತ್ರಿಪುರಾ ರಾಜ್ಯದಲ್ಲಿ ಹೆಚ್‌ಐವಿ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡಿದ್ದು, ಇಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳೇ ಈ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿ ಇತ್ತೀಚಿನ ವರದಿಯೊಂದರಲ್ಲಿ ಬಹಿರಂಗವಾಗಿದೆ.

ಹ್ಯೂಮನ್ ಇಮ್ಯುನೊ ಡಿಫಿಷಿಯೆನ್ಸಿ ವೈರಸ್ (HIV) ಏಡ್ಸ್ ರೋಗಕ್ಕೆ ಕಾರಣವಾಗುವ ಒಂದು ರೀತಿಯ ವೈರಸ್ ಆಗಿದ್ದು, ಅಸುರಕ್ಷಿತ ಲೈಂಗಿಕತೆ, ಸ್ವಚ್ಛವಾಗಿರದ ಸಿರಿಂಜ್‌ಗಳ ಬಳಕೆ, ಡ್ರಗ್ಸ್ ತೆಗೆದುಕೊಳ್ಳಲು ಚುಚ್ಚು ಮದ್ದುಗಳನ್ನು ಬಳಸುವುದು, ಬೇರೆ ಬೇರೆ ಜನರ ಔಷದ ಉಪಕರಣಗಳನ್ನು ಹಂಚಿಕೊಳ್ಳುವುದು ಇತ್ಯಾದಿಗಳಿಂದ ಹೆಚ್‌ಐವಿ ಸೋಂಕು ಹರಡುತ್ತದೆ. ಈ ಸೋಂಕಿನ ಕಾರಣದಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ ಮತ್ತು ಇತರ ಸಾಂಕ್ರಾಮಿಕ ರೋಗಗಳ ಅಪಾಯವು ಗಮನಾರ್ಹವಾಗಿ ಹೆಚ್ಚುತ್ತದೆ. ಬಳಿಕ ಈ ಸೋಂಕು ಏಡ್ಸ್‌ಗೂ ಕಾರಣವಾಗಬಹುದು. ಇದೀಗ HIV ಸೋಂಕಿಗೆ ಸಂಬಂಧಿಸಿದ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದ್ದು, ತ್ರಿಪುರಾ ರಾಜ್ಯದಲ್ಲಿ ಹೆಚ್‌ಐವಿ ಸೋಂಕಿನಿಂದ 47 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 828 ವಿದ್ಯಾರ್ಥಿಗಳಲ್ಲಿ ಹೆಚ್‌ಐವಿ ಪಾಸಿಟಿವ್ ಕಂಡು ಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ ತ್ರಿಪುರಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (TSACS) ಹಿರಿಯ ಅಧಿಕಾರಿಯೊಬ್ಬರು ರಾಜ್ಯದಲ್ಲಿ ಹೆಚ್‌ಐವಿ ಸೋಂಕಿನಿಂದ 47 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 828 ವಿದ್ಯಾರ್ಥಿಗಳಲ್ಲಿ ಹೆಚ್‌ಐವಿ ಪಾಸಿಟಿವ್ ಕಂಡು ಬಂದಿದೆ ಎಂಬ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ತ್ರಿಪುರಾ ಜರ್ನಲಿಸ್ಟ್ಸ್ ಯೂನಿಯನ್, ವೆಬ್ ಮೀಡಿಯಾ ಫೋರಮ್ ಮತ್ತು ಟಿಎಸ್‌ಎಸಿಎಸ್ ಜಂಟಿಯಾಗಿ ಆಯೋಜಿಸಿದ್ದ ಇತ್ತೀಚಿನ ಮಾಧ್ಯಮ ಕಾರ್ಯಗಾರದಲ್ಲಿ TSACS ನ ಹಿರಿಯ ಅಧಿಕಾರಿಯೊಬ್ಬರು ಈ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. TSACS ರಾಜ್ಯಾದ್ಯಂತ 220 ಶಾಲೆಗಳು ಮತ್ತು 24 ಕಾಲೇಜುಗಳು ಮತ್ತು ಕೆಲವು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಡ್ರಗ್ಸ್ ಸೇವಿಸುವುದನ್ನು ಪತ್ತೆ ಹಚ್ಚಿದೆ. ಇದುವೇ ಹೆಚ್‌ಐವಿ ಪ್ರಕರಣದ ಹೆಚ್ಚಳದ ಹಿಂದಿನ ಪ್ರಮುಖ ಕಾರಣವೆಂದು TSACS ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗ; ಭೀಕರ ದೃಶ್ಯ ವೈರಲ್
ಆಂಟಿರೆಟ್ರೋವೈರಲ್ ಥೆರಪಿ ಕೇಂದ್ರದ ಮಾಹಿತಿಯ ಪ್ರಕಾರ 2024 ರಲ್ಲಿ ತ್ರಿಪುರಾದಲ್ಲಿ 8,729 ಹೆಚ್‌ಐವಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಪ್ರತಿದಿನ ಐದರಿಂದ ಏಳು ಹೊಸ ಹೆಚ್‌ಐವಿ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸೋಂಕಿತ ವಿದ್ಯಾರ್ಥಿಗಳೆಲ್ಲರೂ ಶ್ರೀಮಂತ ಕುಟುಂಬಕ್ಕೆಯೇ ಸೇರಿದವರಾಗಿದ್ದಾರೆ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Wed, 10 July 24