ಬಹುಶಃ ಬ್ರೇಕಪ್ ಆದ ಬಳಿಕ ಮತ್ತೊಮ್ಮೆ ಪ್ರೇಮಿಗಳು ಒಂದಾದಂತಹ ಘಟನೆಗಳನ್ನು ನೋಡಿರಬಹುದು ಆದ್ರೆ ಮದುವೆಯಾಗಿ ಡಿವೋರ್ಸ್ ಪಡೆದು ದೂರವಾದ ದಂಪತಿಗಳು ಮರು ಮದುವೆಯಾಗುವಂತಹ ಅಥವಾ ಮತ್ತೆ ಒಂದಾದಂತಹ ಪ್ರಕರಣಗಳನ್ನು ನೀವ್ಯಾವತ್ತೂ ನೋಡಿರಲಿಕ್ಕಿಲ್ಲ ಅಲ್ವಾ. ಇಲ್ಲೊಂದು ಇಂತಹ ಅಪರೂಪದ ಘಟನೆ ನಡೆದಿದ್ದು, ಪರಮ ಶತ್ರುಗಳಂತೆ ಜೀವಿಸುವ ವಿಚ್ಛೇದಿತ ದಂಪತಿಗಳ ಮಧ್ಯೆ, ಇಲ್ಲಿಬ್ಬರು ಡಿವೋರ್ಸ್ ಪಡೆದು ದೂರ ದೂರವಾಗಿದ್ದ ದಂಪತಿಗಳು ಮತ್ತೆ ಒಂದಾಗಿದ್ದಾರೆ. ವಿಚ್ಛೇದನ ಪಡೆದು ಬರೋಬ್ಬರಿ 50 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಈ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಕುರಿತ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.
ಅಮೇರಿಕಾದ ಪೆನ್ಸಿಲ್ವೇನಿಯಾದ ವಿಚ್ಛೇದಿತ ದಂಪತಿಗಳಿಬ್ಬರು ಇದೇ ಭಾನುವಾರ (ಡಿಸೆಂಬರ್ 8) ಅಂದರೆ ನಾಳೆ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿವೋರ್ಸ್ ಪಡೆದು ದೂರ ದೂರವಾಗಿದ್ದ ಈ ದಂಪತಿಗಳು ಇದೀಗ ಒಂದಾಗಿದ್ದು, ಬರೋಬ್ಬರಿ 50 ವರ್ಷಗಳ ಬಳಿಕ ಇಳಿ ವಯಸ್ಸಿನಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮರುಮದುವೆಯಾಗಲು ನಿರ್ಧರಿಸಿದ್ದಾರೆ.
ಫೇ ಗೇಬಲ್ ಮತ್ತು ರಾಬರ್ಟ್ ವೆನ್ರಿಚ್ 1951 ರಲ್ಲಿ ಪ್ರೀತಿಸಿ ಮದುವೆಯಾಗುತ್ತಾರೆ. ಈ ದಂಪತಿಗೆ 4 ಮಕ್ಕಳು ಕೂಡಾ ಜನಿಸುತ್ತಾರೆ. ಆದ್ರೆ ಕೆಲ ಕಾಲದ ಬಳಿಕ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ, 1975 ರಲ್ಲಿ ಈ ಇಬ್ಬರೂ ಡಿವೋರ್ಸ್ ಪಡೆದುಕೊಳ್ಳುತ್ತಾರೆ. ನಂತರ ಈ ಇಬ್ಬರು ಬೇರೆ ಬೇರೆ ಮದುವೆಯನ್ನು ಸಹ ಆಗ್ತಾರೆ. ಕೆಲ ಕಾಲಗಳ ಬಳಿಕ ಇವರಿಬ್ಬರ ಸಂಗಾತಿಗಳು ಮರಣವನ್ನು ಮರಣ ಹೊಂದುತ್ತಾರೆ. ಆದರೆ ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದ ಇವರಿಬ್ಬರ ಮಧ್ಯೆ ಮಾತ್ರ ಉತ್ತಮ ಸಂಬಂಧವಿತ್ತು. ಮತ್ತು ಆಗಾಗ್ಗೆ ಕುಟುಂಬದ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದರು. ಇದೇ ಭೇಟಿ ಇವರಿಬ್ಬರ ಮಧ್ಯೆ ಒಲವಿನ ಕೊಂಡಿಯನ್ನು ಬೆಸೆದಿದ್ದು, ಅಂತಿಮವಾಗಿ ಇದೀಗ ತಮ್ಮ ಇಳಿ ವಯಸ್ಸಿನಲ್ಲಿ ಇವರಿಬ್ಬರು ಮತ್ತೊಮ್ಮೆ ಒಂದಾಗಲು ಬಯಸಿದ್ದಾರೆ. ಪ್ರಸ್ತುತ ವೆನ್ರಿಚ್ ಅವರಿಗೆ 94 ವರ್ಷ ಹಾಗೂ ಫೇ ಗೇಬಲ್ ಅವರಿಗೆ 89 ವರ್ಷ ವಯಸ್ಸಾಗಿದ್ದು, ಇದೇ ಭಾನುವಾರ ಈ ವಿಚ್ಛೇದಿತ ದಂಪತಿ ತಮ್ಮ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮರುಮದುವೆಯಾಗಲಿದ್ದಾರೆ.
ಇದನ್ನೂ ಓದಿ: ಸಿಂಪತಿ ಟ್ರಿಕ್ಸ್ ವರ್ಕ್ ಆಯ್ತು; ರ‍್ಯಾಪಿಡೊ ಕ್ಯಾಬ್ ಚಾಲಕನ ಮೋಸದಾಟದಿಂದ ಪಾರದ ಕಥೆಯನ್ನು ಹಂಚಿಕೊಂಡ ಬೆಂಗಳೂರಿನ ಯುವಕ
“ಅವಳು ನನ್ನ ಜೀವನದ ಮೊದಲ ಪ್ರೀತಿ, ಆಕೆಯನ್ನು ನಾನು ಮರಳಿ ಪಡೆಯುತ್ತೇನೆ ಎಂದು ನಾನು ಯಾವತ್ತೂ ಯೋಚಿಸಿರಲಿಲ್ಲ. ಇದೀಗ ಮತ್ತೊಮ್ಮೆ ಅವಳು ನನಗೆ ಸಿಕ್ಕಿದ್ದು ಬಹಳ ಖುಷಿಯಾಗಿದೆ. ಜೀವನ ಪೂರ್ತಿ ನಾನು ಆಕೆಯೊಂದಿಗೆ ಸಂತೋಷದಿಂದ ಜೀವನ ಸಾಗಿಸಲು ನಿರ್ಧರಿಸಿದ್ದೇನೆ” ಎಂದು ವೆನ್ರಿಚ್ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ