Video Cassette Recorder Day 2022: ಸಣ್ಣವರಿದ್ದಾಗ, ದೂರದ ಮದರಾಸಿನಲ್ಲಿ ನೆಲೆಸಿದ್ದ ಚಿಕ್ಕಪ್ಪ ಊರಿಗೆ ಬಂದನೆಂದರೆ, ಅವನು ಏನು ತಂದಿರಬಹುದೆಂಬ ಕುತೂಹಲ ನನ್ನ ಹಾಗೂ ನನ್ನೊಡನೆ ಇದ್ದ ಮತ್ತೊಬ್ಬ ಚಿಕ್ಕಪ್ಪನ ಮಗಳು ಹಾಗೂ ಸೋದರತ್ತೆಯ ಮಗನಿಗೆ. ಪ್ರತಿಬಾರಿಯೂ ಹೊಸ ವಸ್ತುಗಳನ್ನು ತರುತ್ತಿದ್ದ ಚಿಕ್ಕಪ್ಪ, ನಮಗೆ ಹೀರೋ ಸಮಾನ. ಹಾಗೇ, ಈ ಬಾರಿಯೂ ಅವನ ಬಟ್ಟೆ ತುಂಬಿದ ಬ್ಯಾಗ್ ತೆಗೆದಾಗ, ಕಣ್ಣಿಗೆ ಬಿದ್ದಿದ್ದು, ಕಪ್ಪು ಬಣ್ಣದ ಒಂದು ಮಾಯಾಪೆಟ್ಟಿಗೆ. ಅದರದೊಂದು ಮುಚ್ಚಳ ತೆಗೆದು, ಒಂದು ಕಣ್ಣಿನಿಂದ ನೋಡಿದರೆ, ನಾವೇ ಕಾಣುತ್ತಿದ್ದೆವು. ಅರೆರೆ, ಒಂಟಿ ಕಣ್ಣಿನ ದುರ್ಬಿನ್! ನಮಗೆಲ್ಲರಿಗೂ ಖುಷಿ. ಹೊಟ್ಟೆಹಿಡಿದು ನಕ್ಕ ಚಿಕ್ಕಪ್ಪ, ಮಾಯಾಪೆಟ್ಟಿಗೆಯ ಕಾರ್ಯವೈಖರಿಯನ್ನ ವಿವರಿಸತೊಡಗಿದರು. ಇದು, ಪ್ರತಿ ವರ್ಷ ಶಾಲಾವಾರ್ಷಿಕೋತ್ಸವದ ಸಮಯದಲ್ಲಿ ನಮ್ಮ ಕಾರ್ಯಗಳನ್ನು ಸೆರೆಹಿಡಿಯುತ್ತಿದ್ದ ವಿಡಿಯೋ ರೆಕಾರ್ಡರ್.
ಶ್ರೀವಿದ್ಯಾ ಕಾಮತ್ (Srividya Kamath)
ಸಾಧಾರಣವಾಗಿ, ಫೋಟೋ ಸ್ಟೂಡಿಯೋದವರ ಬಳಿ ಬಿಟ್ಟರೆ ಯಾರ ಬಳಿಯೂ ವಿಡಿಯೋ ರೆಕಾರ್ಡರ್ ಇರದ ಸಮಯ ಅದು. ಇದ್ದವರು, ಅತಿ ಸ್ಥಿತಿವಂತರು. ರೆಕಾರ್ಡರ್ ಇದ್ದರೆ ಸಾಲದು, ರೆಕಾರ್ಡ್ ಮಾಡಿದ ವಿಡಿಯೋವನ್ನು ಪ್ಲೇ ಮಾಡುವ ಪ್ಲೇಯರ್ ಕೂಡ ಮನೆಯಲ್ಲಿರಬೇಕು. ಅದೊಮ್ಮೆ, ನನ್ನ ಭರತನಾಟ್ಯದ ಕಾರ್ಯಕ್ರಮ ಇದ್ದುದರಿಂದ, ಶಾಲಾ ವಾರ್ಷಿಕೋತ್ಸವದಲ್ಲಿ ನನ್ನ ನೃತ್ಯ ವಿಡಿಯೋ ರೆಕಾರ್ಡರಿನಲ್ಲಿ ಸೆರೆಹಿಡಿಯಲು ಚಿಕ್ಕಪ್ಪನಿಗೆ ಹೇಳಲಾಯಿತು. ಈ ಸಂಭ್ರಮ ನನ್ನ ಮತ್ತು ನನ್ನೊಡನೆ ನೃತ್ಯ ಮಾಡಲಿದ್ದ ಗೆಳತಿಯರನ್ನ ಹೀರೋಯಿನ್ಗಳ ಮಟ್ಟಕ್ಕೇರಿಸಿತ್ತು.
ಶ್ರೀವಿದ್ಯಾ ಬರಹ : Lockdown Stories : ಚಲನಾಮೃತ ; ‘ಮೇಣದಬತ್ತಿ ಉತ್ಪಾದನೆ ಮೌಢ್ಯ’ ಉತ್ತರ ಕಂಡುಕೊಳ್ಳುತ್ತ ಹೋದೆ
ವಿಡಿಯೋ ರೆಕಾರ್ಡರ್ ನಲ್ಲಿ ನಮ್ಮನ್ನೇ ಹೆಚ್ಚು ಸೆರೆ ಹಿಡಿಯಲಿ ಎಂಬ ಆಸೆಗೆ ನಮ್ಮಗಳ ಮಧ್ಯದಲ್ಲೇ ಒಂದು ಸಣ್ಣ ಸ್ಪರ್ಧೆ, ಸಣ್ಣ ಹೊಟ್ಟೆಕಿಚ್ಚೂ ಆರಂಭವಾಯಿತು. ಎಲ್ಲರಿಗಿಂತಲೂ ಯಾರು ಚೆನ್ನಾಗಿ ನೃತ್ಯ ಮಾಡುವರೋ, ಅವರನ್ನೇ ಹೆಚ್ಚು ವೀಡಿಯೋ ರೆಕಾರ್ಡ್ ಮಾಡಲಾಗುವುದೆಂಬ ಚಿಕ್ಕಪ್ಪನ ಮಾತಿನ ಮೇಲಿನ ನಂಬಿಕೆಯೊಂದಿಗೆ, ವೀಡಿಯೋ ರೆಕಾರ್ಡರ್ ಮಹಾಶಯನನ್ನು ಮೆಚ್ಚಿಸಲು, ಹಗಲೂ ರಾತ್ರೆ ಅಭ್ಯಾಸ ಮಾಡಿ ಸೊಗಸಾಗಿ ನೃತ್ಯ ಮಾಡಿದೆವು. ನಮ್ಮ ನೃತ್ಯ ಗುರುಗಳ ಮಾತುಗಳಾಗಲೀ, ನಮ್ಮ ಪೋಷಕರ ಬೈಗುಳಗಳಾಗಲೀ, ಶಾಲಾ ಶಿಕ್ಷಕರ ಬೋಧನೆಯಾಗಲಿ ನಮ್ಮಲ್ಲಿ ತರಲಾಗದ ಬದಲಾವಣೆಯನ್ನ ವಿಡಿಯೋ ರೆಕಾರ್ಡರ್ ತಂದಿತ್ತು. ವಿಡಿಯೋ ರೆಕಾರ್ಡರ್ ನಮ್ಮ ಸ್ಪೂರ್ತಿಯ ಸೆಲೆಯಾಗಿತ್ತು!
ಇಂದಿಗೂ ಆ ವಿಡಿಯೋ ಟೇಪ್ ಬಾಲ್ಯದ ಮುಗ್ಧತೆಯನ್ನ ಹೊತ್ತು, ಮನೆಯ ಒಂದು ಹಳೆಯ ಟ್ರಂಕಿನಲ್ಲಿ ನಿದ್ದೆ ಹೋಗಿದೆ. ನಮ್ಮದೇ ಒಂದು ಅಂಗವೆಂಬಂತೆ.
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 10:42 am, Tue, 7 June 22