National Chocolate Ice Cream Day 2022: ಆ ದಿನ ನಮ್ಮನ್ನು ಕಾಪಾಡಿದ ಪುರಾತನ ಐದರ ನೋಟು

National Chocolate Ice Cream Day 2022: ಆ ದಿನ ನಮ್ಮನ್ನು ಕಾಪಾಡಿದ ಪುರಾತನ ಐದರ ನೋಟು
ಸುಷ್ಮಾ ಸವಸುದ್ದಿ

Childhood : ‘ಅದೆಲ್ಲ ತಿನ್ನಬೇಡವೆ ಸರಿ ಇರಲ್ಲ. ಆ ಡಬ್ಬದಲ್ಲಿ ಹುಳಗಳ ಇರ್ತವೆ’ ಅಂತ ಹೆದರಿಸೋ ಅಮ್ಮನ ಸಾಹಸಕ್ಕೆ ಯಾವ ಬೆಲೆನೂ ಸಿಗ್ತಾ ಇರಲಿಲ್ಲ. ದೊಡ್ಡವರು ಆಗ್ತಾ ಇದ್ದಂಗೆ ಆ ಅಜ್ಜನ ಡಬ್ಬಿನು ಮಾಯ ಆಯ್ತು, ಅದಕ್ಕೆ ಕಾಯುವ ದಾರಿನೂ.

TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Jun 07, 2022 | 11:24 AM

National Chocolate Ice Cream Day 2022: ಆಗೆಲ್ಲ ಎಂಟಾಣೆ ಕೊಟ್ರೆ ಕಲರ್ ಐಸ್ಕ್ರೀಮ್, ಒಂದರೂಪಾಯಿಗೆ ಹಾಲಿನ ಐಸ್ಕ್ರೀಮ್. ಸೈಕಲ್ ಹಿಂದೆ ಒಂದು ತಗಡಿನ ಡಬ್ಬಿ ಇಟ್ಕೊಂಡು ಬರ್ತಾ ಇದ್ದ ಅಜ್ಜನ ದಾರಿಗೆ ಕಾಯೋದರಲ್ಲೆ ರಜೆ ಕಳಿತಾ ಇತ್ತು. ‘ಅದೆಲ್ಲ ತಿನ್ನಬೇಡವೆ ಸರಿ ಇರಲ್ಲ. ಆ ಡಬ್ಬದಲ್ಲಿ ಹುಳಗಳ ಇರ್ತವೆ’ ಅಂತ ಹೆದರಿಸೋ ಅಮ್ಮನ ಸಾಹಸಕ್ಕೆ ಯಾವ ಬೆಲೆನೂ ಸಿಗ್ತಾ ಇರಲಿಲ್ಲ. ದೊಡ್ಡವರು ಆಗ್ತಾ ಇದ್ದಂಗೆ ಆ ಅಜ್ಜನ ಡಬ್ಬಿನು ಮಾಯ ಆಯ್ತು, ಅದಕ್ಕೆ ಕಾಯುವ ದಾರಿನೂ. ಹೈಸ್ಕೂಲ್ ಮೆಟ್ಟಿಲು ಏರೋ ಹೊತ್ತಿಗೆ ಐಸ್ಕ್ರೀಮ್ ಪಾರ್ಲರ್​ಗೆ  ಹೋಗಿ, ಹೋಟೆಲಿಗೆ ಹೋಗಿ ನಾನಾ ತರಹದ ಐಸ್ಕ್ರೀಮ್ ಹೆಸರು ಹೇಳಿ ನೂರಾರು ರೂಪಾಯಿ ಕೊಟ್ಟು ತಿಂದು ಬರೋವಷ್ಟ ದೊಡ್ಡವರು ಆಗಿ ಹೋಗಿದ್ವಿ. ಮಳೇಲಿ ಯೂನಿಫಾರ್ಮ್ ಒದ್ದೆ ಮಾಡ್ಕೊಂಡು ವೆನಿಲಾ ಐಸ್ಕ್ರೀಮ್ ತಿಂದದ್ದು ಇನ್ನೂ ಹಸಿ ನೆನಪು. ಒಮ್ಮೆ ಅಪ್ಪ ಮತ್ತು ತಂಗಿ ಜೊತೆಗೆ ಶಾಪಿಂಗ್ ಮಾಡ್ಕೊಂಡ ಬರೋವಾಗ ಹೊಸ ಐಸ್ಕ್ರೀಮ್ ಶಾಪ್ ಕಣ್ಣಿಗೆ ಬಿತ್ತು. ಹೊಸದು ಹೋಗಿ ಟೆಸ್ಟ ಮಾಡುವ ಅಂತ ಅಪ್ಪನ ಎಳೆದುಕೊಂಡೆ ಹೋದ್ವಿ. ಮೆನು ತಂದು ಮುಂದೆ ಇಟ್ರು. ಸುಷ್ಮಾ ಸವಸುದ್ದಿ (Sushma Savasuddi)

ನಾನು ಮೂರು Chocolate Ice Cream ಕೊಡಿ ಎಂದೆ ಮೆನು ನೋಡದೆ. ಮೇಲಾಗಿ ಚೆನ್ನಾಗಿ ಇರುತ್ತೆ ನೀವು ಇಷ್ಟಪಡ್ತೀರಿ ಅಂತ ಬೇರೆ ಪುಸಲಾಯಿಸಿದ್ದೆ. ರೆಗ್ಯೂಲರ್ ಆಗಿ ತಿನ್ನೋ  ಐಸ್​ಕ್ರೀಮ್​ಗಿಂ ಸಖತ್ ಆಗಿ ಇರೋದು. ಇಲ್ಲೂ ಚೆನ್ನಾಗೇ ಸಿಗಬಹುದು ಅನ್ನೋ ಊಹೆ ನಂದಾಗಿತ್ತು. ಆದರೆ ನನ್ನ ಊಹೆ ತಪ್ಪಿತ್ತು. ನನ್ನ ಮುಂದೆ ಕುಳಿತ ಇಬ್ಬರ ಕಂಗೆಣ್ಣು ನನ್ನನ್ನೇ ಗುರಾಯಿಸೋವಷ್ಟು ಕೆಟ್ಟದಾಗಿತ್ತು. ನನಗೆ ಒಳ ಒಳಗೆ ಯಾಕಾದ್ರೂ ಇಲ್ಲಿಗೆ ಬಂದನೋ? ಸುಮ್ನೆ ಮೆನು ಅವರ ಕೈಯಲ್ಲಿ ಕೊಟ್ಟಿದ್ರೆ ಆಗಿರೋದು ಅಂತ ಪೇಚಾಡಿದೆ. ಎರಡೇ ಸ್ಪೂನ್​ ತಿನ್ನುವ ಹೊತ್ತಿಗೆ ಸಾಕಾಗಿ ಎದ್ದುಹೊರಟ ನಮ್ಮನ್ನು ಹೇಗಿತ್ತು ಐಸ್​ಕ್ರೀಮ್ ಅಂತ ಕೇಳೋ ಆತುರದಲ್ಲಿ ಇದ್ದ ಅಂಗಡಿಯವನಿಗೆ ‘ಹೋಗಿ ಟೇಬಲ್ ಮೇಲೆ ಇದ್ದ ನಮ್ಮ ಕಪ್ ನೋಡಿ ಗೊತ್ತಾಗುತ್ತೆ’ ಅನ್ನೋದಾ ನನ್ನ ತಂಗಿ! ಅದೇ ಮೊದಲ ಸಲ ಐಸ್ಕ್ರೀಮನಾ ಅರ್ಧಕ್ಕೆ ಬಿಟ್ಟು ಬಂದಿದ್ದು. ಅದೇ ಕೊನೇ ಕೂಡ ಅನ್ನಿ.

ಇದನ್ನೂ ಓದಿ : Video Cassette Recorder Day 2022: ಈ ಮಹಾಶಯನನ್ನು ಮೆಚ್ಚಿಸಲು ಹಗಲೂ ರಾತ್ರಿ ನರ್ತಿಸಿದ ಆ ದಿನ

ಇನ್ನೊಮ್ಮೆ ಸ್ನೇಹಿತೆ ಜೊತೆ ಬಿರಿಬಿಸಿಲಲ್ಲಿ ಶಾಪಿಂಗ್ ಮುಗಿಸಿ ಕೂಲ್ಡ್​ಡ್ರಿಂಕ್ಸ್ ಅಂಗಡಿಯೊಳಗೆ ಹೊಕ್ಕೆವು. ಹಣ ಜಾಸ್ತಿ ಉಳಿದಿರಲಿಕ್ಕಿಲ್ಲ ಅನ್ನೋ ಸಣ್ಣ ಸಂದೇಹ ಇತ್ತು ಆದರೆ ಅದನ್ನು ಕನ್​ಫರ್ಮ್ ಮಾಡಿಕೊಳ್ಳುವ ಗೋಜಿಗೆ ಹೋಗದೆ ಎರಡು ಐಸ್ಕ್ರೀಮ್ ಆರ್ಡರ್ ಮಾಡಿ ತಿಂದ್ವಿ. ಬಿಲ್ ಜಾಸ್ತಿ ಏನೂ ಆಗಿದ್ದಿಲ್ಲ ಬರಿ ನಲವತ್ತೇ ರೂಪಾಯಿ. ಪರ್ಸ್ ತೆಗೆದರೆ ದುಡ್ಡೇ ಇಲ್ಲ. ಇಬ್ಬರ ಪರ್ಸ್ ಕಿತ್ತು ಹಾಕಿದರೂ ಸಿಕ್ಕ ದುಡ್ಡು ಮೂವತ್ತರ ಮೇಲೆ ಇಲ್ಲ. ಅವರಿಗೆ ನಲವತ್ತು ಕೊಡಬೇಕು. ವೇಟರ ಪದೇಪದೆ ಬಂದು ಮತ್ತೆ ಏನಾದ್ರೂ ಬೇಕಾ ಅಂತ ಕೇಳ್ತಾ ಇದಾನೆ. ಏನು ಹೇಳೋದು ಅಲ್ಲಿ ಎಷ್ಟು ಜನರಿದ್ದಾರೆ. ದುಡ್ಡು ಇಲ್ಲ ಅಂದ್ರೆ ಏನಂದಾರು? ಇಬ್ಬರ ಬ್ಯಾಗ್ ಕಿತ್ತು ಹಾಕಿದೆವು. ಬ್ಯಾಗಿನ ತಳ ಭಾಗದಲ್ಲಿ ಹೋಗಿ ಕುಳಿತ ಚಿಲ್ಲರೆ ಹೊರತೆಗೆದೆವು ಅವು ಒಟ್ಟು ಸೇರಿ ಆರು ರೂಪಾಯಿ ಆಯ್ತು. ಇನ್ನೂ ನಾಲ್ಕು ರೂಪಾಯಿ ಎಲ್ಲಿಂದ ಹುಟ್ಟಿಸಬೇಕು? ಒಬ್ಬರಿಗೊಬ್ಬರು ಮುಖ ನೋಡ್ತಾ ಪೆಚ್ಚಾಗಿ ಹೋದೆವು.

ಇದನ್ನೂ ಓದಿ : World Milk Day 2022: ಚಹಾ ಕಾಫಿಗೂ ಹಾಲು ಬೇಡವೆನ್ನುತ್ತಿರುವುದು ಯಾಕೆ?

ಅವಳು ದಿಢೀರನೆ ಏನೋ ಹೊಳೆದವರಂತೆ ಬ್ಯಾಗಿನಲ್ಲಿ ಇದ್ದ ಅಷ್ಟೂ ಪುಸ್ತಕ ಹೊರತೆಗೆದು ಅದರೊಳಗೆ ಹುಡುಕತೊಡಗಿದಳು. ಒಂದು ಪುಸ್ತಕದಲ್ಲಿ ಐದು ರೂಪಾಯಿ ನೋಟಿತ್ತು. ಅದು ಅಳಿವಿನಂಚಿನಲ್ಲಿ ಇರುವ ಐದರ ನೋಟು ತನ್ನ ಸಂಗ್ರಹದಲ್ಲಿ ಇರಲಿ ಅಂತ ಇಟ್ಟುಕೊಂಡಿದ್ದಳು ಅದೇ ನೋಟು ಈಗ ನಮಗೆ ಗತಿ. ‘ಆದ್ರೆ ಈ ನೋಟು ನಡೆಯುತ್ತೆ ಅಂತಿಯಾ?’ ಮೆತ್ತಗೆ ಕೇಳಿದೆ. ಅದಕ್ಕೆ ಅವಳು ಏನೂ ಉತ್ತರಿಸದೆ ನನ್ನ ಕೈಯಲ್ಲಿದ್ದ ಚಿಲ್ಲರೇನು ತಗೊಂಡು ಮೆನು ಕಾರ್ಡನಲ್ಲಿ ಇಟ್ಟವಳೆ ನಡಿ ಹೋಗೋಣ ಎಂದು ಮೇಲೆ ಎದ್ದಳು. ನಾನು ಒಂದು ರೂಪಾಯಿ ಹೆಚ್ಚಿಗೆ ಇಟ್ವೆ ಅಂದೆ. ಅದಕ್ಕವಳು ಆ ಒಂದು ರೂಪಾಯಿ ವಾಪಸ್ ತಗೊಂಡು ಮತ್ತೆ ಮೆನು ಕಾರ್ಡ್ ಮುಚ್ಚಿ ನನ್ನ ಕೈ ಎಳೆದು ಹೊರ ನಡೆದಳು. ಬಸ್, ಆಟೋ ಏರದೆ ಬಿಸಿಲಲ್ಲಿ ಪಾದಯಾತ್ರೆ ಮಾಡಿಕೊಂಡು ಮನೆಗೆ ಬಂದೆವು.

ಇದನ್ನೂ ಓದಿ

ಗಮನಿಸಿ : ವಿಶೇಷ ದಿನಗಳ ಸಂದರ್ಭಕ್ಕೆ ನೀವೂ ಕೂಡ ನಿಮ್ಮ ವಿಚಾರ, ಅನುಭವವನ್ನು ಬರೆಯಬಹುದು. ಒಂದು ವಾರ ಮೊದಲು ಸುಮಾರು 300 ಪದಗಳಲ್ಲಿ ನಿಮ್ಮ ಫೋಟೋದೊಂದಿಗೆ ಬರಹ ನಮ್ಮನ್ನು ತಲುಪಲಿ. tv9kannadadigital@gmail.com

Follow us on

Related Stories

Most Read Stories

Click on your DTH Provider to Add TV9 Kannada