Viral Video : ಜರ್ಮನಿಯ ಜೆನ್ನಿಫರ್ ವಿಡಿಯೋ ಕ್ರಿಯೇಟರ್. ಭಾಷಾ ಕಲಿಕೆ, ನಟನೆ, ನೃತ್ಯದಲ್ಲಿ ಆಸಕ್ತಿ ಇರುವ ಈಕೆ ಮೈಸೂರಿನಲ್ಲಿರುತ್ತಾರೆ. ಕನ್ನಡವನ್ನು ಸುಲಲಿತವಾಗಿ ಮಾತನಾಡುವ ಈಕೆಗೆ ಮೈಸೂರೆಂದರೆ ಬಲುಪ್ರೀತಿ. ಅದರಲ್ಲಿಯೂ ದೇವರಾಜ ಮಾರುಕಟ್ಟೆಯೇ ಈಕೆಯ ಪ್ರಮುಖ ಪ್ರತಿಭಾಪ್ರದರ್ಶನದ ತಾಣ. ಈ ಹಿಂದೆ ಇದೇ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಮಾರಿದ್ದು ಮತ್ತೆ ಆ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದೀರಿ. ಇದೀಗ ಈಕೆ ಇದೇ ಮಾರುಕಟ್ಟೆಯಲ್ಲಿ ಈರುಳ್ಳಿ ವ್ಯಾಪಾರಕ್ಕೆ ಕುಳಿತಿದ್ದನ್ನು ನೋಡಿ.
ಅಂಗಡಿಯಾತ ಅಂಗಡಿ ನೋಡಿಕೊಳ್ಳೋದಕ್ಕೆ ಹೇಳಿ ಹೋಗುತ್ತಾನೆ. ಯಾರಾದರೂ ಬಂದರೆ ನೂರು ರೂಪಾಯಿಗೆ ನಾಲ್ಕು ಕೇಜಿ ಈರುಳ್ಳಿ ಅಂತ ಹೇಳಿ ಎಂದು ಹೇಳುತ್ತಾನೆ. ಅವನು ವಾಪಸ್ ಬರುವ ಹೊತ್ತಿಗೆ ಈಕೆ ಖಾಲಿ ಬುಟ್ಟಿ ಹಿಡಿದುಕೊಂಡು ನಿಂತಿರುತ್ತಾರೆ. ಅಂಗಡಿಕಾರನಿಗೆ ಅಚ್ಚರಿಯಾಗುತ್ತದೆ. ನಾಲ್ಕು ರೂಪಾಯಿಗೆ ನೂರು ಕೇಜಿ ಕೊಟ್ಟೆ ಎನ್ನುತ್ತಾಳೆ!
ವಿಡಿಯೋ ಕ್ರಿಯೇಟರ್ ಆಗಿರುವ ಜೆನ್ನಿಫರ್ ಹೀಗೆ ತಿಳಿಹಾಸ್ಯದ ರೀಲ್ಗಳನ್ನು ಮಾಡುತ್ತ ಇನ್ಸ್ಟಾಗ್ರಾಂನಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಇವರ ಕನ್ನಡ ಭಾಷಾಪ್ರೇಮಕ್ಕೆ ನೆಟ್ಟಿಗರು ಮನಸೋಲುತ್ತಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡುವ ಇವರನ್ನು ಅನೇಕ ಭಾರತೀಯರು ಮತ್ತು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಅಕ್ಕರೆಯಿಂದ ಕಾಣುತ್ತಾರೆ. ಮೈಸೂರಿನ ಶಾಲೆ, ಮಾರುಕಟ್ಟೆ, ಬೀದಿಗಳನ್ನೆಲ್ಲ ಕುತೂಹಲದಿಂದ ಹೊಕ್ಕಾಡುವ ಈಕೆ ಸರಳಜೀವಿ. ಯಾವುದೇ ಹಮ್ಮುಬಿಮ್ಮಿಲ್ಲದೆ ಎಲ್ಲರೊಳಗೂ ಒಂದಾಗುತ್ತಿರುವ ಈಕೆಯ ಪರಿ ಸೋಜಿಗವನ್ನುಂಟು ಮಾಡುತ್ತದೆ.
14 ಗಂಟೆಗಳ ಹಿಂದೆಯಷ್ಟೇ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು 35,000 ಜನರು ಮೆಚ್ಚಿದ್ದಾರೆ. 700ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಬಡವನ ಹೊಟ್ಟೆ ಮೇಲೆ ಯಾಕೆ ಹೊಡೆಯುತ್ತೀರಿ ಅಕ್ಕಾ ಎಂದು ತಮಾಷೆ ಮಾಡಿದ್ದಾರೆ ಕೆಲವರು. ಮೊದಲೇ ಆಗಿದ್ದರೆ ನಾನೇ ಎಲ್ಲವನ್ನೂ ಖರೀದಿಸುತ್ತಿದ್ದೆ ಎಂದಿದ್ದಾರೆ ಇನ್ನೂ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:07 am, Fri, 9 December 22