ವಿವಾಹ ಮೆರವಣಿಗೆಯಲ್ಲಿ ಉತ್ತರಾಖಂಡದ ಆ್ಯಂಬುಲೆನ್ಸ್ ಚಾಲಕ ಪಿಪಿಇ ಕಿಟ್ ಧರಿಸಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್
ಉತ್ತರಾಖಂಡದ ಆ್ಯಂಬುಲೆನ್ಸ್ ಚಾಲಕ ಮನಸ್ಸಿನ ನೋವಿನಿಂದ ಆಚೆ ಬರಲು ಮದುವೆಯ ಮೆರವಣಿಗೆಯಲ್ಲಿ ಪಿಪಿಇ ಕಿಟ್ ಧರಿಸಿಕೊಂಡೇ ಮನಸ್ಸೋ ಇಚ್ಚೇ ನೆಮ್ಮದಿಯಾಗುವಷ್ಟು ನೃತ್ಯ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆ ಕೂಡಾ ಉಲ್ಬಣಗೊಳ್ಳುತ್ತಿದೆ. ಹಗಲು ರಾತ್ರಿ ಎನ್ನದೇ ದಿನವಿಡೀ ಕೆಲಸ ಮಾಡುವ ಆ್ಯಂಬುಲೆನ್ಸ್ ಚಾಲಕರು ಸೋತಿದ್ದಾರೆ. ಮೃತದೇಹಗಳನ್ನು ಪ್ರತಿನಿತ್ಯ ನೋಡುತ್ತಿದ್ದ ಆ್ಯಂಬುಲೆನ್ಸ್ ಚಾಲಕರ ಮಾನಸಿಕ ಸ್ಥಿತಿ ದುರ್ಬಲಗೊಳ್ಳುತ್ತಿದೆ. ಪ್ರತಿನಿತ್ಯ ಸಾವನ್ನೇ ನೋಡುತ್ತಿದ್ದ ಉತ್ತರಾಖಂಡದ ಆ್ಯಂಬುಲೆನ್ಸ್ ಚಾಲಕ ಮನಸ್ಸಿನ ನೋವಿನಿಂದ ಆಚೆ ಬರಲು ಮದುವೆಯ ಮೆರವಣಿಗೆಯಲ್ಲಿ ಪಿಪಿಇ ಕಿಟ್ ಧರಿಸಿಕೊಂಡೇ ಮನಸ್ಸೋ ಇಚ್ಚೇ ನೆಮ್ಮದಿಯಾಗುವಷ್ಟು ನೃತ್ಯ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಾಖಂಡ ಮೂಲದ ನೈನಿತಾಲ್ ಜಿಲ್ಲೆಯ ಆ್ಯಂಬುಲೆನ್ಸ್ ಚಾಲಕ ಮಹೇಶ್ ಅವರು ಕೊವಿಡ್ ಸೋಂಕಿನಿಂದ ಬಳಲುತ್ತಿದ್ದ ರೋಗಿಗಳನ್ನು ಪ್ರತಿನಿತ್ಯ ನೋಡುತ್ತಾ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಸೋಮವಾರ ಹಲ್ವಾನಿ ಪ್ರದೇಶದಲ್ಲಿ ನಡೆದ ಮದುವೆ ವಿವಾಹದ ಮೆರವಣಿಗೆ ಕಂಡ ಅವರು ಖುಷಿಗೊಂಡು ಮನಸೋ ಇಚ್ಚೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಅವರು ನೃತ್ಯ ಮಾಡುವ ಮೂಲಕ ಮನಸಿನ ನಿರಾಳತೆ ಪಡೆದಿದ್ದಾರೆ.
ಹಲ್ದ್ವಾನಿಯ ಡಾ.ಸುಶೀಲಾ ತಿವಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಮಹೇಶ್ ‘ನಾನು ಕೊವಿಡ್ ಸೋಂಕಿನಿಂದ ಬಳಲುತ್ತಿರುವವರನ್ನು ಆಸ್ಪತ್ರೆಗೆ ಕಡೆದೊಯ್ಯಲು ನಿರಂತವಾಗಿ ಕೆಲಸ ಮಾಡುತ್ತಲೇ ಬಂದಿದ್ದೇನೆ. ಇಲ್ಲಿಯವರೆಗೆ ನಾನು ನನ್ನ ಮನೆಗೆ ಹೋಗಿಲ್ಲ. ಇದರಿಂದಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದೆ. ಆಸ್ಪತ್ರೆಯ ಮುಂದೆ ವಿವಾಹವೊಂದರ ಮೆರವಣಿಗೆ ನೋಡಿ ಮನಸ್ಸಿನ ಒತ್ತಡ ನಿವಾರಿಸಲು ಮನಸ್ಸೋ ಇಚ್ಚೇ ಕುಣಿದುಬಿಟ್ಟೆ. ಇದೀಗ ಮನಸ್ಸು ಕೊಂಚ ನಿರಾಳ ಅನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಸುಮಾರು 10 ನಿಮಿಷಗಳ ಕಾಲ ನೃತ್ಯ ಮಾಡಿದ್ದೇನೆ. ಇದೀಗ ಮನಸ್ಸಿನಲ್ಲಿದ್ದ ಒತ್ತಡವನ್ನೆಲ್ಲಾ ಮರೆತಿದ್ದೇನೆ. ಮನಸ್ಸು ನಿರಾಳ ಭಾವದಿಂದ ಕೂಡಿದೆ. ನೃತ್ಯ ಮಾಡಿದ ನಂತರ ಮನಸ್ಸು ಸ್ವಲ್ಪ ಸುಧಾರಿಸಿಕೊಂಡಿದೆ. ನನ್ನ ಮನಸ್ಸಿನಲ್ಲಿದ್ದ ಒತ್ತಡವನ್ನು ದೂರವಾಗಿಸಲು ನೃತ್ಯ ಮಾಡಿದೆ ಎಂದು ಮಹೇಶ್ ಹೇಳಿದ್ದಾರೆ.
ಮಹೇಶ್ ಕೆಲಸ ಮಾಡುವ ಆಸ್ಪತ್ರೆಯ ಮುಂದೆ ವಿವಾಹದ ಮೆರವಣಿಗೆ ಸಾಗುತ್ತಿತ್ತು. ವಿವಾಹದಲ್ಲಿ ಬ್ಯಾಂಡ್ ಸದ್ದನ್ನು ಕೇಳಿದ ಮಹೇಶ್ ಅವರು ತಾವು ಕುಳಿತಿದ್ದ ಆ್ಯಂಬುಲೆನ್ಸ್ನಿಂದ ಹೊರಬಂದು ಧರಿಸಿದ್ದ ಪಿಪಿಇ ಕಿಟ್ನಲ್ಲಿಯೇ ಹೆಜ್ಜೆ ಹಾಕಿದ್ದಾರೆ. ಇವರನ್ನು ನೋಡಿದ ಜನರು ಆಶ್ಚರ್ಯಗೊಂಡಿದ್ದಾರೆ.
ಡಾ. ಸುಶೀಲಾ ತಿವಾರಿ ಸರ್ಕಾರಿ ಅಸ್ಪತ್ರೆಯಲ್ಲಿ ವೈದ್ಯರಾಗಿರುವ ಯುವರಾಜ್ ಪಂತ್ ಮಾತನಾಡಿ, ಕೊವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳನ್ನು ಮತ್ತು ಮೃತಪಟ್ಟ ರೋಗಿಗಳ ಶವಗಳನ್ನು ಅಂತ್ಯಕ್ರಿಯೆಗೆ ಕರೆದೊಯ್ಯಲು ಮಹೇಶ್ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಸಾವಿಗೀಡಾದ ಮೃತದೇಹಗಳನ್ನು ನೋಡುತ್ತಿದ್ದ ಅವರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಅದರಿಂದಾಚೆ ಬರಲು ಸಂಗೀತ, ನೃತ್ಯ ಮೊದಲಾದವುಗಳನ್ನು ಕೇಳುವುದು, ಮತ್ತು ಮನಸ್ಸೋ ಇಚ್ಚೇ ಕುಣಿಯುವುದರ ಮೂಲಕ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು. ರಕ್ತದೊತ್ತಡ, ಆತಂಕಗಳನ್ನೂ ದೂರಮಾಡುವ ಉತ್ತಮ ಮಾರ್ಗವಿದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವೈರಲ್ ವಿಡಿಯೋ; ಕೊರೊನಾ ವೈರಾಣುವಿಗೆ ವಿದಾಯ ಹೇಳುವುದು ಹೇಗೆ? ಇಲ್ಲಿದೆ ನೋಡಿ ತಮಾಷೆ ದೃಶ್ಯ