ಮೊದಲೆಲ್ಲ ಹಳೆಯ ವಸ್ತುಗಳಿಗೆ ಯಾವುದೇ ಬೆಲೆಯಿಲ್ಲದೆ ಗುಜರಿಗೆ ಹಾಕುತ್ತಿದ್ದರು. ಆದರೆ ಈಗ ಹಳೆಯ ವಸ್ತುಗಳನ್ನು ಆ್ಯಂಟಿಕ್ ಎಂಬ ಹೆಸರಿನಲ್ಲಿ ದುಬಾರಿ ಬೆಲೆ ಕೊಟ್ಟು ಖರೀದಿಸುವ ಕ್ರೇಜ್ ಕೂಡ ಶುರುವಾಗಿದೆ. ವ್ಯಕ್ತಿಯೊಬ್ಬರು ಲಂಡನ್ನ ಬೀದಿಯಲ್ಲಿ ಸೊಟ್ಟಗಾದ ಹಳೇ ಸ್ಪೂನ್ ಒಂದನ್ನು ಖರೀದಿಸಿದ್ದರು. ಆ ಚಮಚವನ್ನು ಅವರು ಆನ್ಲೈನ್ನಲ್ಲಿ ಹರಾಜಿ ಹಾಕಿದ್ದು, ಬರೋಬ್ಬರಿ 2 ಲಕ್ಷ ರೂ. ಗಳಿಸಿದ್ದಾರೆ! 90 ಪೈಸೆ ರೂ. ಬೆಲೆಯ ಚಮಚವನ್ನು 2 ಲಕ್ಷ ರೂ.ಗೆ ಮಾರಾಟ ಮಾಡುವಂಥದ್ದು ಅದರಲ್ಲಿ ಏನು ವಿಶೇಷತೆಯಿತ್ತು? ಇಲ್ಲಿದೆ ಮಾಹಿತಿ…
ಉದ್ದನೆಯ ಹಿಡಿಕೆಯುಳ್ಳ, ಸೊಟ್ಟಗಾಗಿದ್ದ ಹಳೇ ಚಮಚವನ್ನು ನೋಡಿದ ಆ ವ್ಯಕ್ತಿಗೆ ಈ ಸ್ಪೂನ್ ಬೇರೆಯದಕ್ಕಿಂತ ಬಹಳ ವಿಭಿನ್ನವಾಗಿದೆ ಎಂದೆನಿಸಿತ್ತು. ಹೀಗಾಗಿ, ತಾನು ಖರೀದಿಸಿದ ಚಮಚವನ್ನು ಆನ್ಲೈನ್ನಲ್ಲಿ ಹರಾಜಿಗೆ ಹಾಕಲು ಯೋಚಿಸಿದ. ಲಾರೆನ್ಸ್ನ ಹರಾಜುದಾರರನ್ನು ಸಂಪರ್ಕಿಸಿದ ಆತ ಆನ್ಲೈನ್ನಲ್ಲಿ ತನ್ನ ಚಮಚದ ಮಾಹಿತಿಯನ್ನು ಕೂಡ ದಾಖಲಿಸಿದ. ಆ ಚಮಚವನ್ನು ನೋಡಿ ಹರಾಜಿನಲ್ಲಿ ಮೊತ್ತವನ್ನು ನಮೂದಿಸಲಾಗುತ್ತದೆ. ಆಗ ಹರಾಜು ತಂಡದಲ್ಲಿದ್ದ ಸಿಲ್ವರ್ ಎಕ್ಸ್ಪರ್ಟ್ ಒಬ್ಬರು ಆ ಚಮಚ ಮಾಮೂಲಿಯದಲ್ಲ, ಅದು ಬೆಳ್ಳಿಯ ಚಮಚ ಎಂದು ಹೇಳಿದರು. ಇದನ್ನು ಕೇಳಿ ಖರೀದಿಸಿದಾತನಿಗೂ ಶಾಕ್ ಆಗಿತ್ತು. 5 ಇಂಚಿನ ಆ ಸ್ಪೂನ್ 13ನೇ ಶತಮಾನದ ಕಾಲದ್ದು, ಆ ಕಾಲದ ಬೆಳ್ಳಿಯಿಂದ ತಯಾರಿಸಲ್ಪಟ್ಟಿದ್ದು ಎಂದು ಸಿಲ್ವರ್ ಎಕ್ಸ್ಪರ್ಟ್ ಹೇಳಿದ್ದರು. ಆ ಚಮಚಕ್ಕೆ 51,712 ರೂ. ಬೆಲೆ ಕಟ್ಟಬಹುದು ಎಂದು ಅವರು ಸಲಹೆ ನೀಡಿದ್ದರು.
ಆ ಆ್ಯಂಟಿಕ್ ಚಮಚದ ಹಿಂದೆ 13ನೇ ಶತಮಾನದ ಇತಿಹಾಸವಿದೆ ಎಂಬುದು ಗೊತ್ತಾಗುತ್ತಿದ್ದಂತೆ ಆ ಚಮಚದ ಮಾಲೀಕ ಆನ್ಲೈನ್ನಲ್ಲಿ ಆ ಚಮಚವನ್ನು ಹರಾಜಿಗಿಟ್ಟ. ಹರಾಜಿನಲ್ಲಿ ಆ ಚಮಚದ ಇತಿಹಾಸವನ್ನು ತಿಳಿದ ಜನರು ಹೆಚ್ಚೆಚ್ಚು ಬಿಡ್ ಮಾಡತೊಡಗಿದರು. 50 ಸಾವಿರದಿಂದ ಶುರುವಾದ ಹರಾಜು ಕೊನೆಗೆ 1,97,000 ರೂ.ಗೆ ಬಂದು ನಿಂತಿತು. ತೆರಿಗೆ ಎಲ್ಲ ಸೇರಿ ಆ ಚಮಚದ ಬೆಲೆ 2 ಲಕ್ಷ ರೂ. ದಾಟಿತು. ಈ ರೀತಿ 90 ಪೈಸೆಯ ಚಮಚ 2 ಲಕ್ಷ ರೂ.ಗೆ ಮಾರಾಟವಾಯಿತು.
ಇದನ್ನೂ ಓದಿ: Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!
(Viral News: 90 Paisa Spoon Sold For Whopping 2 Lakhs in Online Auction What is The Reason?)