ಒಂದು ವಿಮಾನದ ಕತೆ; ಪ್ರಯಾಣಿಕ ಮಾಡಿದ ಪುಟ್ಟ ಸಹಾಯದಿಂದ ಆತನ ಬದುಕೇ ಬದಲಾಯ್ತು!
ವಿಮಾನದಲ್ಲಿ ಸಂಚರಿಸುವವರೆಲ್ಲರೂ ಶ್ರೀಮಂತರೇ ಎಂಬ ಅಭಿಪ್ರಾಯ ಹಲವರಲ್ಲಿದೆ. ವಿಮಾನದಲ್ಲಿ ಬಸ್, ರೈಲುಗಳಲ್ಲಿ ನಡೆಯುವಂತಹ ಸ್ವಾರಸ್ಯಕರ ಘಟನೆಗಳು, ಜೀವನಕ್ಕೆ ಪೂರಕವಾದ ಪಾಠಗಳು ಸಿಗದಿರುವುದಕ್ಕೆ ಈ ಅಭಿಪ್ರಾಯವೂ ಒಂದು ಕಾರಣ. ವಿಮಾನದಲ್ಲಿ ಸಂಚರಿಸುವವರು ಯಾರೂ ಅಕ್ಕಪಕ್ಕದವರ ಜೊತೆ ಸಂವಹನ ನಡೆಸುವುದಿಲ್ಲ. ಆದರೆ, ಈ ವಿಮಾನದಲ್ಲಿ ನಡೆದ ಘಟನೆಯನ್ನು ನೀವು ತಿಳಿಯಲೇಬೇಕು!
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ವಿಪರೀತ ಹಸಿವಾಗುತ್ತದೆ. ಆದರೆ, ಅವರ ಬಳಿ ಹಣವಿರುವುದಿಲ್ಲ. ಹೀಗಾಗಿ, ಗಗನಸಖಿಯನ್ನು ಕರೆದ ಅವರು, ‘ಇದು ಲಾಂಗ್ ಫ್ಲೈಟ್ ಆದ್ದರಿಂದ ಈ ವಿಮಾನದಲ್ಲಿ ಇನ್ನೂ ಬಹಳ ಗಂಟೆಗಳ ಕಾಲ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ನನಗೆ ಹಸಿವಾಗುತ್ತಿದೆ. ಆದರೆ, ನನ್ನ ಬಳಿ ಹಣವಿಲ್ಲ. ಇಲ್ಲಿರುವ ಯಾರಾದರೂ ನನಗೆ ಫುಡ್ ಕೊಡಿಸುತ್ತಾರಾ? ಎಂದು ಕೇಳಿ ನೋಡಿ’ ಎನ್ನುತ್ತಾರೆ.
ಅದರಂತೆ ಆ ಗಗನಸಖಿ ಆ ವಿಮಾನದಲ್ಲಿ ಕುಳಿತಿದ್ದವರ ಬಳಿ ಹೋಗಿ ‘ಅಲ್ಲಿ ಕುಳಿತಿರುವ ವ್ಯಕ್ತಿಗೆ ಆಹಾರ ಬೇಕಾಗಿದೆ. ಆದರೆ, ಅವರ ಬಳಿ ಅದನ್ನು ಕೊಳ್ಳಲು ಹಣವಿಲ್ಲ. ನೀವು ಯಾರಾದರೂ ನಮ್ಮ ಫುಡ್ ಸರ್ವಿಸ್ ಅನ್ನು ಸ್ಪಾನ್ಸರ್ ಮಾಡುತ್ತೀರಾ?’ ಎಂದು ಕೇಳುತ್ತಾರೆ. ಅವರಲ್ಲಿ ಬಹುತೇಕರು ಅದಕ್ಕೆ ನಿರಾಕರಿಸುತ್ತಾರೆ. ಆದರೆ, ಓರ್ವ ವ್ಯಕ್ತಿ ಹಣ ತೆಗೆದು ಕೊಡುತ್ತಾರೆ. ‘ಆ ವ್ಯಕ್ತಿಗೆ ಏನು ಬೇಕೋ ತಿನ್ನಲು ತಂದುಕೊಡಿ’ ಎಂದು ಹೇಳುತ್ತಾರೆ. ತನಗೆ ಸಹಾಯ ಮಾಡಿದ ವ್ಯಕ್ತಿಗೆ ಹಸಿದ ವ್ಯಕ್ತಿ ಧನ್ಯವಾದ ಹೇಳುತ್ತಾರೆ.
ಇದನ್ನೂ ಓದಿ: Success Story: ಬೀದಿಬದಿ ವ್ಯಾಪಾರಿಯ ಮಗಳು ಐಎಎಸ್ ಅಧಿಕಾರಿಯಾದ ಸ್ಫೂರ್ತಿ ಕತೆ!
ಆದರೆ, ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಎಲ್ಲರೂ ಕೆಳಗಿಳಿಯುವಾಗ ಆಹಾರಕ್ಕೆ ಹಣ ಕೊಟ್ಟಾತನನ್ನು ಆ ಹಸಿದ ವ್ಯಕ್ತಿ ತಡೆದು ನಿಲ್ಲಿಸುತ್ತಾರೆ. ‘ನಾನು ಎಲ್ಲರ ಬಳಿಯೂ ಸಹಾಯ ಕೋರಿದೆ. ಆದರೆ, ಯಾರೂ ನನಗೆ ಆಹಾರ ಪಡೆಯಲು ಹಣ ನೀಡಲು ಒಪ್ಪಲಿಲ್ಲ. ನೀವು ಏಕೆ ಹಣ ನೀಡಲು ಮನಸು ಮಾಡಿದಿರಿ?’ ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಆತ, ‘ನಮಗೆ ಹಸಿವಾದಾಗ ಊಟ ಸಿಗದಿದ್ದರೆ ಅದರ ಅನುಭವ ಹೇಗಿರುತ್ತದೆ ಎಂದು ನನಗೆ ಗೊತ್ತು. ಆಗ ಯಾರಾದರೂ ನಮ್ಮ ಹೊಟ್ಟೆಗೆ ಏನಾದರೂ ಕೊಡಲಿ ಎಂದು ಅನಿಸುತ್ತದೆ. ನಾನು ಕೂಡ ಬಹಳ ಬಡತನದಿಂದ ಬಂದವನು. ಆಗ ತಿನ್ನಲು ಆಹಾರವೇ ಸಿಗುತ್ತಿರಲಿಲ್ಲ. ಆದರೀಗ, ನಾನು ಒಬ್ಬರಿಗೆ ಸಹಾಯ ಮಾಡುವಷ್ಟು ಸಂಪಾದನೆ ಮಾಡುತ್ತಿದ್ದೇನೆ. ಹೀಗಾಗಿ, ನಿಮಗೆ ಊಟ ಕೊಡಿಸಿದೆ. ಅದು ಮನುಷ್ಯತ್ವ’ ಎನ್ನುತ್ತಾರೆ.
This is such a heartwarming story….it sure made me feel good! pic.twitter.com/xTqiOEeUfX
— Harsh Goenka (@hvgoenka) October 31, 2024
ಈ ಮಾತನ್ನು ಕೇಳಿ ಖುಷಿಪಟ್ಟ ಆ ಮತ್ತೋರ್ವ ಪ್ರಯಾಣಿಕ ಅಚ್ಚರಿಯ ಸತ್ಯವೊಂದನ್ನು ಹೇಳುತ್ತಾರೆ. ‘ಈ ವಿಮಾನದ ಮಾಲೀಕ ನಾನು ಎಂಬುದು ನಿಮಗೆ ಗೊತ್ತಾ? ಇವರೆಲ್ಲರೂ ನನ್ನ ಸಿಬ್ಬಂದಿ. ನೀವು ಈ ದಿನ ತೋರಿದ ಮಾನವೀಯತೆಗೆ ಪ್ರತಿಯಾಗಿ ನಾವು ಕೂಡ ಉಡುಗೊರೆಯೊಂದನ್ನು ನೀಡುತ್ತಿದ್ದೇವೆ. ನೀವು ನನಗೆ ಆಹಾರ ಕೊಡಿಸಲು ನಿಮ್ಮ ಹಣವನ್ನು ತೆಗೆದುಕೊಟ್ಟಿರಿ. ಆದರೆ, ಇದು ನಾವು ಆಡಿದ ನಾಟಕವಾಗಿತ್ತು. ನಿಮ್ಮ ಮಾನವೀಯತೆ ನಮಗೆ ಬಹಳ ಇಷ್ಟವಾಯಿತು. ಹೀಗಾಗಿ, ನಮ್ಮ ಏರ್ಲೈನ್ಸ್ ಪರವಾಗಿ ನಿಮಗೆ ಗಿಫ್ಟ್ವೊಂದನ್ನು ನೀಡುತ್ತಿದ್ದೇವೆ’ ಎಂದು ಹೇಳಿದರು. ಇದನ್ನು ಕೇಳಿದ ಪ್ರಯಾಣಿಕ ಆಶ್ಚರ್ಯಚಕಿತರಾದರು.
ಇದನ್ನೂ ಓದಿ: Viral: ಬಿಯರ್ ಬಾಟಲ್‌ನಲ್ಲಿ ಪತ್ತೆಯಾಯ್ತು ಸತ್ತ ಹಲ್ಲಿ; ಕಿಕ್ಕೇರಿಸುವ ಮುನ್ನ ಜೋಪಾನ ಮದ್ಯ ಪ್ರಿಯರೇ….
35 ಲಕ್ಷಕ್ಕೂ ಅಧಿಕ ಮೊತ್ತದ ಚೆಕ್ ಒಂದನ್ನು ನೀಡಿದ ಏರ್ಲೈನ್ಸ್ ಮಾಲೀಕ ‘ಈ ದುಡ್ಡಿನಲ್ಲಿ ನೀವೇನು ಮಾಡುತ್ತೀರಿ?’ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಆ ಪ್ರಯಾಣಿಕ, ‘ಇದು ನನ್ನ ಜೀವನವನ್ನೇ ಬದಲಿಸುವ ಮೊತ್ತ. ಇದರಲ್ಲಿ ನಾನು ನನ್ನ ಮಕ್ಕಳ ಶಾಲೆ, ಕಾಲೇಜಿನ ಫೀಸ್ ಕಟ್ಟುತ್ತೇನೆ’ ಎಂದು ಹೇಳಿದರು. ಅದಕ್ಕೆ ಆ ಏರ್ಲೈನ್ಸ್ ಮಾಲೀಕ, ‘ಇಂದು ನನಗೆ ಮಾಡಿದಂತೆ ಯಾರಿಗಾದರೂ ಅಗತ್ಯವಿದ್ದರೆ ನಿಮ್ಮ ಕೈಲಾದಷ್ಟು ಅವರಿಗೆ ಸಹಾಯ ಮಾಡಿ. ಅದು ನಿಮಗೆ ಚಿಕ್ಕ ಸಹಾಯ ಎನಿಸಬಹುದು. ಆದರೆ, ಅವರಿಗೆ ಅದು ದೊಡ್ಡ ವಿಷಯವಾಗಿರುತ್ತದೆ’ ಎಂದು ಹೇಳಿದರು.
ಕೆಲವೊಮ್ಮೆ ನಾವು ಮಾಡುವ ಚಿಕ್ಕ ಸಹಾಯದ ಪ್ರತಿಫಲ ಬಹಳ ದೊಡ್ಡದಾಗಿರುತ್ತದೆ. ಹೀಗಾಗಿ, ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಉಪಕಾರ ಎಂದಿಗೂ ವ್ಯರ್ಥವಾಗುವುದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Thu, 31 October 24