AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Rajyotsava 2024: ಇನ್‌ಸ್ಟಾಗ್ರಾಮ್‌ನಲ್ಲಿ ಸರಳವಾಗಿ ಪರಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನದಲ್ಲಿ ಯುವತಿಯರು…

ಕರ್ನಾಟಕದಲ್ಲಿ ಹಲವಾರು ಮಂದಿ ಪರಭಾಷಿಕರಿದ್ದಾರೆ. ಆದರಲ್ಲಿ ಹೆಚ್ಚಿನವರು ಕನ್ನಡ ಕಲಿಯುವುದು ತುಂಬಾನೇ ಕಷ್ಟಕರ ಎಂದು ಭಾವಿಸುತ್ತಾರೆ. ಇಂತಹವರಿಗೆ ಸರಳ ರೀತಿಯಲ್ಲಿ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡವನ್ನು ಕಲಿಸುವ ಪ್ರಯತ್ನಕ್ಕೆ ಮೂವರು ಯುವತಿಯರು ಕೈ ಹಾಕಿದ್ದು, ಈ ಪ್ರಯತ್ನದಲ್ಲಿ ಅವರು ಯಶಸ್ಸನ್ನೂ ಕೂಡಾ ಕಂಡಿದ್ದಾರೆ. ಕನ್ನಡ ರಾಜ್ಯೋತ್ಸವದ ಈ ಶುಭ ಸಮಯದಲ್ಲಿ ಆ ಯುವತಿಯರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.

Kannada Rajyotsava 2024: ಇನ್‌ಸ್ಟಾಗ್ರಾಮ್‌ನಲ್ಲಿ ಸರಳವಾಗಿ ಪರಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನದಲ್ಲಿ ಯುವತಿಯರು…
ಸಾಕ್ಷಿ ಬೈದ್, ರಾಶಿ ರೈ, ನವ್ಯಾ ಎಸ್‌. ಕಾರಂತ್
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 31, 2024 | 5:05 PM

Share

ನಾವು ಯಾವ ನೆಲದಲ್ಲಿರುತ್ತೇವೆಯೋ ಅಲ್ಲಿನ ಭಾಷೆ ಕಲಿಯುವುದು, ಆ ನೆಲಕ್ಕೆ ನಾವು ಗೌರವ ಕೊಡುವುದು ತುಂಬಾನೇ ಮುಖ್ಯ. ಆದರೆ ಕರ್ನಾಟಕದಲ್ಲಿ ನೆಲೆಸಿರುವ ಅದೆಷ್ಟೋ ಪರಭಾಷಿಕರು ಕನ್ನಡವನ್ನು ಮಾತನಾಡುತ್ತಿಲ್ಲ, ಮಾತನಾಡುವುದು ಬಿಡಿ, ಕನ್ನಡವನ್ನು ಕಲಿಯುವ ಪ್ರಯತ್ನವನ್ನೂ ಕೂಡಾ ಮಾಡುತ್ತಿಲ್ಲ. ಇಷ್ಟು ಮಾತ್ರವಲ್ಲದೇ ಕೆಲವು ಕನ್ನಡದವರೇ ಕನ್ನಡವನ್ನು ಮಾತನಾಡಲು ಹಿಂದೆ ಮುಂದೆ ನೋಡುತ್ತಾರೆ. ಇದೇ ಕಾರಣದಿಂದ ಇತ್ತೀಚಿಗೆ ಅತ್ಯಂತ ಸುಂದರ ಹಾಗೂ ಸುಮಧುರವಾದ ಕನ್ನಡ ಭಾಷೆ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹಾಗೂ ವಿಶೇಷವಾಗಿ ಕನ್ನಡ ಗೊತ್ತಿಲ್ಲದವರಿಗೆ ಸುಲಭ ರೀತಿಯಲ್ಲಿ ಕನ್ನಡ ಭಾಷೆಯನ್ನು ಕಲಿಸುವ ಸಲುವಾಗಿ ಮೂವರು ಯುವತಿಯರು ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದ್ದು, ಈ ಪ್ರಯತ್ನದಲ್ಲಿ ಯಶಸ್ಸನ್ನೂ ಕೂಡಾ ಕಂಡಿದ್ದಾರೆ. ಕನ್ನಡ ರಾಜ್ಯೋತ್ಸವದ ಈ ಶುಭ ಸಮಯದಲ್ಲಿ ಆ ಯುವತಿಯರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.

ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ ಕಲಿಸುವ ಯುವತಿಯರು:

ಸಾಕ್ಷಿ ಬೈದ್:

ಸಾಕ್ಷಿ ಬೈದ್‌ ಎಂಬ ಮುಂಬೈ ಮೂಲದ ಯುವತಿ morethankannadagottila ಎಂಬ ತನ್ನ ಇನ್‌ಸ್ಟಾಗ್ರಾಮ್‌ ಪೇಜ್‌ ಮೂಲಕ ಕನ್ನಡ ಗೊತ್ತಿಲ್ಲದವರಿಗೆ ಕನ್ನಡವನ್ನು ಕಲಿಸುತ್ತಿದ್ದಾರೆ. ಓದಿಗಾಗಿ ಮುಂಬೈನಿಂದ ಬೆಂಗಳೂರಿಗೆ ಬಂದ ಈಕೆ ತನ್ನ ಸ್ನೇಹಿತರು ಮತ್ತು ಕನ್ನಡ ಭಾಷೆಯ ಪುಸ್ತಕಗಳನ್ನು ಓದುವ ಮೂಲಕ ಕನ್ನಡವನ್ನು ಕಲಿತರು. ಈ ಮಧ್ಯೆ ಕನ್ನಡ ಭಾಷಾ ಕೋರ್ಸ್‌ಗಳನ್ನು ಹುಡುಕುತ್ತಿದ್ದಾಗ, ಹೆಚ್ಚಿನ ಆನ್‌ಲೈನ್‌ ಟ್ಯುಟೋರಿಯಲ್‌ಗಳು ಕೂಡಾ ಆಕೆಗೆ ಲಭ್ಯವಾಗಲಿಲ್ಲ. ಇದರಿಂದಾಗಿ ಇತರರಿಗೂ ಉಪಯೋಗವಾಗಲಿ ಎಂಬ ಉದ್ದೇಶದಿಂದ ತನ್ನ ಇನ್‌ಸ್ಟಾಗ್ರಾಮ್‌ ಪೇಜ್‌ ಮೂಲಕ ಕನ್ನಡ ಭಾಷೆ ಕಲಿಸುವ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಇಲ್ಲಿ ಈಕೆ ಕನ್ನಡ ಗೊತ್ತಿಲ್ಲದವರಿಗೆ ಬಹಳ ಸರಳವಾಗಿ ಕನ್ನಡ ಪದಗಳನ್ನು ಅದರ ಅರ್ಥವನ್ನು ಕಲಿಸಿಕೊಡುತ್ತಿದ್ದಾರೆ. ಇಷ್ಟು ಮಾತ್ರದಲ್ಲದೆ ಈ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಕರ್ನಾಟಕದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆಯೂ ತಿಳಿಸಿಕೊಡುತ್ತಿದ್ದಾರೆ. ಇವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 3.55 ಲಕ್ಷ ಫಾಲೋವರ್ಸ್‌ ಇದ್ದಾರೆ.

ರಾಶಿ ರೈ:

ವೈಟ್‌ಫೀಲ್ಡ್‌ ನಿವಾಸಿ ರಾಶಿ ರೈ ಎಂಬವರು kannadahindisanga ಎಂಬ ತಮ್ಮ ಇನ್‌ಸ್ಟಾಗ್ರಾಮ್‌ ಪೆಜ್‌ನಲ್ಲಿ ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಭಾಷೆಯನ್ನು ಕಲಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇಲ್ಲಿ ಇವರು ಕನ್ನಡ ಮತ್ತು ಹಿಂದಿ ಎರಡೂ ಭಾಷೆಯಲ್ಲೂ ವಾಕ್ಯಗಳು ಮತ್ತು ಪದಗಳನ್ನು ಕಲಿಸಿಕೊಡುತ್ತಿದ್ದಾರೆ. ಇದು ಅನೇಕ ಸಂದರ್ಭಗಳಲ್ಲಿ ಸುಲಭವಾಗಿ ಸಂವಹನ ನಡೆಸಲು ಸರಳವಾಗುತ್ತದೆ ಎಂದು ಹೇಳುತ್ತಾರೆ ರಾಶಿ. ಇವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆಟೋ ಚಾಲಕರ ಜೊತೆ, ಕ್ಯಾಬ್‌ ಡ್ರೈವರ್‌ ಜೊತೆ, ಬಸ್ಸಿನಲ್ಲಿ ಹಾಗೂ ದೈನಂದಿನ ಸನ್ನಿವೇಶಗಳಲ್ಲಿ ಹೇಗೆ ಸಂಭಾಷಣೆಯನ್ನು ನಡೆಸಬೇಕು ಎಂಬುದನ್ನು ಕಲಿಸಿಕೊಡುತ್ತಿದ್ದಾರೆ. ಇವರು ಇನ್‌ಸ್ಟಾಗ್ರಾಮ್‌ನಲ್ಲಿ 1.64 ಲಕ್ಷ ಫಾಲೋವರ್ಸ್‌ ಅನ್ನು ಹೊಂದಿದ್ದಾರೆ.

ನವ್ಯಾ ಎಸ್‌. ಕಾರಂತ್:

ಕನ್ನಡತಿ ನವ್ಯಾ ಎಸ್.ಕಾರಂತ್‌ ಅವರು kannad_alla_kannada ಎಂಬ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಕನ್ನಡ ಭಾಷೆ ಗೊತ್ತಿಲ್ಲದವರಿಗೆ ಸರಳ ರೀತಿಯಲ್ಲಿ ಕನ್ನಡವನ್ನು ಕಲಿಸಿಕೊಡುತ್ತಿದ್ದಾರೆ. ಕನ್ನಡ ಶಿಕ್ಷಕಿಯಾಗಿರುವ ಇವರು ಕನ್ನಡ ಭಾಷೆಯನ್ನು ಕಲಿಸುವುದರ ಜೊತೆ ಜೊತೆಗೆ ನಮ್ಮ ರಾಜ್ಯ ಮತ್ತು ರಾಜ್ಯದ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಹ ಮಾಡುತ್ತಿದ್ದಾರೆ. ಇವರು ರೀಲ್ಸ್‌ನಲ್ಲಿ ಕೆಲವೊಂದು ಕನ್ನಡ ಪದಗಳನ್ನು, ವಾಕ್ಯಗಳನ್ನು ಅದರ ಇಂಗ್ಲೀಷ್‌ ಅರ್ಥದೊಂದಿಗೆ ಬಹಳ ಸುಲಭವಾಗಿ ಪರಭಾಷಿಕರಿಗೆ ಕಲಿಸಿಕೊಡುತ್ತಿದ್ದಾರೆ. ನವ್ಯಾ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1.5 ಲಕ್ಷ ಫಾಲೋವರ್ಸ್‌ ಇದ್ದಾರೆ.

ಕನ್ನಡ ರಾಜ್ಯೋತ್ಸವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ