Viral News : ಚುನಾವಣೆ ಹತ್ತಿರ ಬಂದಾಗ ಮಾತ್ರ ಈ ರಸ್ತೆಗುಂಡಿಗಳ ರಿಪೇರಿ ಭರದಿಂದ ಶುರುವಾಗುತ್ತದೆ. ಮುಂದೊಂದು ತಿಂಗಳೊಳಗೆ ಹಳೆಯ ಗುಂಡಿಗಳು ಯಥಾಪ್ರಕಾರ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಒಂದಿಲ್ಲಾ ಒಂದು ಊರಿನಲ್ಲಿ ಈ ರಸ್ತಗುಂಡಿಗಳಿಂದ ಅಪಾಯಕ್ಕೆ ಸಿಲುಕುವವರ ಸಂಖ್ಯೆ ಏರುತ್ತಲೇ ಇರುತ್ತದೆ. ಇದೀಗ ಪಾಂಡಿಚೇರಿಯಲ್ಲಿ ನಡೆದ ಘಟನೆಯನ್ನು ಗಮನಿಸಿ. ಹದಿಹರೆಯದ ಹುಡುಗನೊಬ್ಬ ತನ್ನ ಅಜ್ಜ ರಸ್ತೆಗುಂಡಿಯಲ್ಲಿ ಬಿದ್ದು ಕಾಲು ಮುರಿದುಕೊಂಡ ನಂತರ ಆಸ್ಪತ್ರೆಗೆ ದಾಖಲಾದಾಗ ತೀವ್ರ ನೊಂದುಕೊಂಡಿದ್ದಾನೆ. ಅಷ್ಟೇ ಅಲ್ಲ, ತನ್ನ ಅಜ್ಜನಂತೆ ಯಾರೂ ಹೀಗೆ ಅಪಘಾತಕ್ಕೆ ಈಡಾಗಬಾರದೆಂದು ಸ್ವತಃ ಆ ರಸ್ತೆಗುಂಡಿಯನ್ನು ಸಿಮೆಂಟು ಮರಳಿನಿಂದ ಮುಚ್ಚಿದ್ದಾನೆ.
13 ವರ್ಷದ ಮಾಸಿಲಮಣಿ ಪಾಂಡಿಚೇರಿಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತನ ಅಜ್ಜ ಕೃಷಿಕ. ದ್ವಿಚಕ್ರವಾಹನದ ಮೇಲೆ ಚಲಿಸುತ್ತಿದ್ದಾಗ ರಸ್ತೆಗುಂಡಿಯಿಂದಾಗಿ ತೀವ್ರತರ ಅಪಘಾತಕ್ಕೆ ಒಳಗಾಗಿದ್ದಾರೆ. ಪರಿಣಾಮವಾಗಿ ಕಾಲಿನ ಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗಿದ್ಧಾರೆ. ಇದರಿಂದ ಮಾಸಿಲಮಾಣಿ ತೀವ್ರ ಆಘಾತಕ್ಕೆ ಒಳಗಾಗಿದ್ದಾನೆ. ಆದರೆ ಅದೇ ಸಮಯಕ್ಕೆ ಪ್ರಜ್ಞಾವಂತಿಕೆಯಿಂದ ಯೋಚಿಸಿ, ತನ್ನ ಅಜ್ಜನ ಅಪಘಾತಕ್ಕೆ ಈಡಾದ ಜಾಗಕ್ಕೆ ಹೋಗಿ, ರಸ್ತೆಗುಂಡಿಯನ್ನು ಮುಚ್ಚಿ ರಿಪೇರಿ ಮಾಡಿಬಂದಿದ್ದಾನೆ.
ಇದನ್ನೂ ಓದಿ : ಎಕ್ಸ್ಕ್ಯೂಸ್ ಮೀ, ಗುಟ್ಕಾ ಉಗಿಯಲು ವಿಮಾನದ ಕಿಟಕಿಯ ಬಾಗಿಲನ್ನು ತೆರೆಯುವಿರಾ?
ಈ ಬಾಲಕನ ಕಾರ್ಯವನ್ನು ಮಾಜಿ ಶಾಸಕ ವೈಯ್ಯಾಪುರಿ ಮಣಿಕಂದನ್ ಶ್ಲಾಘಿಸಿ ಸನ್ಮಾನಿಸಿದ್ದಾರೆ. ಪಾಂಡಿಚೇರಿ ಮತ್ತು ಪತುಕಣ್ಣು ಮಾರ್ಗದ ರಸ್ತೆಯು ಕಳೆದ ಏಳು ವರ್ಷಗಳಿಂದ ದುರಸ್ತಿ ಕಂಡಿಲ್ಲ. ಈತನಕ ಇಲ್ಲಿಯ ಸರ್ಕಾರ ಇದನ್ನು ದುರಸ್ತಿಗೊಳಿಸಲು ಯಾವುದೇ ರೀತಿಯ ಸೂಕ್ತ ಕ್ರಮ ಕೈಗೊಂಡಿಲ್ಲ. ಇಲ್ಲಿ ಅಪಘಾತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:54 pm, Mon, 23 January 23