106 ವರ್ಷದ ಈ ಕೂರ್ಮರಾಯರೀಗ ಮಹಾಸ್ನಾನದಲ್ಲಿ ಮಗ್ನರಾಗಿದ್ದಾರೆ! ಶ್​….

| Updated By: ಶ್ರೀದೇವಿ ಕಳಸದ

Updated on: Oct 15, 2022 | 4:14 PM

Tortoise Enjoys Spa Day : ಈ ವಾರಾಂತ್ಯವನ್ನು ನೀವು ಹೇಗೆ ಕಳೆಯಬೇಕೆಂದಿದ್ದೀರಿ? ಈ ಹಿರಿಯರು ಮಾತ್ರ ನೀರಿಗೆ ಮುಖವೊಡ್ಡಿ ಕಣ್ಮುಚ್ಚಿ, ಕತ್ತು ಚಾಚಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ. ನೋಡಿ ಇವರ ವೈಖರಿ.

106 ವರ್ಷದ ಈ ಕೂರ್ಮರಾಯರೀಗ ಮಹಾಸ್ನಾನದಲ್ಲಿ ಮಗ್ನರಾಗಿದ್ದಾರೆ! ಶ್​....
106 Year Old Tortoise Enjoys Spa Day Gets Scrub From Man
Follow us on

Viral Video : ಮೇಲಿಂದ ನೀರು ಬೀಳುತ್ತಿದ್ದಂತೆ ಆನಂದದಿಂದ ಕಣ್ಣು ಮುಚ್ಚಿ ಕತ್ತೆತ್ತಿ ಆಹ್ಲಾದಿಸಬೇಕು ಅನ್ನಿಸುತ್ತದಲ್ಲ? ನೀವೀಗ ಇದನ್ನು ಓದುತ್ತ ಮನಸಿನಲ್ಲಿಯೇ ಹೂಂ ಎಂದಿರುತ್ತೀರಿ ಹಾಗೆಯೇ ಯಾವುದೋ ಜಲಪಾತದ ಕೆಳಗೆ ನಿಂತಂತೆ ಕಲ್ಪಿಸಿಕೊಂಡಿರುತ್ತೀರಿ. ಆದರೆ ನಿಮ್ಮೆಲ್ಲರೊಂದಿಗೆ ಈ ವಿಡಿಯೋದಲ್ಲಿರುವ ಈ  ಆಮೆಯೂ ಹೂಂ ಎನ್ನುವುದನ್ನೂ ಮರೆತು ಈ ಸ್ನಾನವನ್ನು ಅನುಭವಿಸಲಾರಂಭಿಸಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ನೆಟ್ಟಿಗರು, ಎಂಥಾ ಅದೃಷ್ಟ! ಈ ವಾರಾಂತ್ಯದಲ್ಲಿ ನಮಗೂ ಇಂಥ ಅವಕಾಶ ಸಿಗಬಾರದೆ? ಎಂದು ತಟವಟಿಸುತ್ತಿದ್ದಾರೆ.

ಸಾಮಾನ್ಯವಾಗಿ ಗ್ಯಾಲಪಗೊಸ್ ಆಮೆಗಳು 150 ವರ್ಷಗಳಿಗಿಂತಲೂ ಹೆಚ್ಚು ಬದುಕುತ್ತವೆ. ಈಗಿಲ್ಲಿ ಜಗತ್ತನ್ನೇ ಮರೆತು ಹೀಗೆ ಮೈಯ್ಯೊಡ್ಡಿ ಸ್ನಾನವನ್ನು ಆನಂದಿಸುತ್ತಿದೆಯಲ್ಲ ಈ ಆಮೆಗೆ ಬರೋಬ್ಬರಿ 106 ವರ್ಷಗಳು!  ಇದರ ಪೋಷಕ ಇದಕ್ಕೆ ಸ್ಕ್ರಬ್​ ಮಾಡಿ ಮೈಯನ್ನೆಲ್ಲ ಹದಗೊಳಿಸುತ್ತಿದ್ದಾರೆ. ಮತ್ತೆ ಮತ್ತೆ ಹೀಗೆ ಇವರು ಮೈಯುಜ್ಜುತ್ತಿರಲಿ ಎಂಬ ಧರ್ತಿಯಲ್ಲಿ ಆಮೆ ಕುಳಿತಂತಿದೆ.

ಅಮೆರಿಕದ ಯೂಟ್ಯೂಬರ್ ಜಯ್ ಬ್ರ್ಯೂವರ್ ಇನ್​ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಎಡಾಲ್ಫ್​ ಎಂಬ ಈ ಆಮೆಯ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಫೌಂಟೇನ್ ವ್ಯಾಲಿಯಲ್ಲಿರುವ ದಿ ರೆಪ್ಟೈಲ್ ಝೂ ಪ್ರಿಹಿಸ್ಟಾರಿಕ್ ಇಂಕ್​ನ ಸಂಸ್ಥಾಪಕರಾಗಿರುವ ಬ್ರ್ಯೂವರ್ ಸರಿಸೃಪಗಳ ಸಂತಾನೋತ್ಪತ್ತಿ ವಿಷಯವಾಗಿ ಸಂಶೋಧನೆ ನಡೆಸಿದ್ದಾರೆ. ಇವರಿಗೆ 6 ಮಿಲಿಯನ್​ಗಿಂತಲೂ ಹೆಚ್ಚು ಫಾಲೋವರ್​ಗಳು ಇನ್​ಸ್ಟಾಗ್ರಾಂನಲ್ಲಿದ್ದಾರೆ. ಯೂಟ್ಯೂಬ್​ನಲ್ಲಿ 4 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಿನ್ನೆಯಷ್ಟೇ ಇವರು ಹಂಚಿಕೊಂಡ ವಿಡಿಯೋ ನೋಡಿದ್ದೀರಿ.

ಈ ವಿಡಿಯೋ ನೋಡುತ್ತಿದ್ದಂತೆ ನಿಮಗೀಗ ಈ ವಾರಾಂತ್ಯದಲ್ಲಿ ಸ್ಪಾ ಬುಕ್ ಮಾಡುವ ಆಲೋಚನೆ ಬರತೊಡಗಿದೆಯೆ? ಸ್ಪಾ ಇಲ್ಲವಾದರೆ ಹೊಳೆಗೆ ಹೋಗಿ. ಅದೂ ಇಲ್ಲವಾ ಟ್ಯಾಂಕಿನ ನೀರು ಖಾಲಿಯಾಗುವ ತನಕ ಸ್ನಾನ ಮಾಡಿ. ಯಾರಾದರೂ ಈ ಬಗ್ಗೆ ತಕರಾರು ಎತ್ತಿದರೋ ಆಗ ಈ ಕೂರ್ಮರಾಯರ ವಿಡಿಯೋ ತೋರಿಸಿಬಿಡಿ.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 4:12 pm, Sat, 15 October 22