Viral Video: ಪ್ರವಾಹದ ರಭಸಕ್ಕೆ ಕೊಚ್ಚಿಹೋದ 90 ವರ್ಷಗಳ ಹಳೆಯ ರೈಲು ಸೇತುವೆ
ಪಂಜಾಬ್ ಮತ್ತು ಹಿಮಾಚಲದ ಗಡಿಯಲ್ಲಿರುವ ಕಾಂಗ್ರಾ ಜಿಲ್ಲೆಯಲ್ಲಿ ಚಕ್ಕಿ ನದಿಯ ಮೇಲೆ ಬ್ರಿಟಿಷರು ನಿರ್ಮಿಸಿದ 800 ಮೀಟರ್ ಉದ್ದದ ರೈಲ್ವೆ ಸೇತುವೆ ಶನಿವಾರ ಬೆಳಿಗ್ಗೆ ಕುಸಿದಿದೆ.
ದೇಶಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಹಲವೆಡೆ ಪ್ರವಾಹ ಉಂಟಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ, ಬೆಳೆ, ಆಸ್ತಿ ಪಾಸ್ತಿಗಳಿಗೂ ಹಾನಿಯಾಗಿವೆ. ಅದರಂತೆ ಪಂಜಾಬ್ ಮತ್ತು ಹಿಮಾಚಲದ ಗಡಿಯಲ್ಲಿರುವ ಕಾಂಗ್ರಾ ಜಿಲ್ಲೆಯ ಚಕ್ಕಿ ನದಿಯ ಮೇಲಿನ 800 ಮೀಟರ್ ಉದ್ದದ ರೈಲ್ವೆ ಸೇತುವೆ ಶನಿವಾರ ಬೆಳಿಗ್ಗೆ ಕುಸಿದಿದೆ. ಚಕ್ಕಿ ನದಿಗೆ ಹರಿಯುವ ಪ್ರವಾಹಕ್ಕೆ ಪಿಲ್ಲರ್ ಕೊಚ್ಚಿಹೋಗಿ ಈ ಅವಘಡ ಸಂಭವಿಸಿದೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ. ಪರಿಣಾಮವಾಗಿ ಸೇತುವೆಗೆ ಹೊಸ ಪಿಲ್ಲರ್ ನಿರ್ಮಾಣವಾಗುವವರೆಗೆ ಪಠಾಣ್‌ಕೋಟ್ ಮತ್ತು ಜೋಗಿಂದರ್ ನಗರ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
1928ರಲ್ಲಿ ಬ್ರಿಟಿಷರು ನಿರ್ಮಿಸಿದ ಈ ರೈಲ್ವೇ ಸೇತುವೆಯಲ್ಲಿ ಪಠಾಣ್‌ಕೋಟ್ ಮತ್ತು ಜೋಗಿಂದರ್ ನಗರ್ ನಡುವೆ ಪ್ರತಿದಿನ ಏಳು ರೈಲುಗಳು ಸಂಚರಿಸುತ್ತವೆ. ಪಾಂಗ್ ಅಣೆಕಟ್ಟಿನ ವನ್ಯಜೀವಿ ಅಭಯಾರಣ್ಯದ ನೂರಾರು ಹಳ್ಳಿಗಳಿಗೆ ರಸ್ತೆ ಸಂಪರ್ಕ, ಬಸ್ಗಳ ಸೇವೆ ಇಲ್ಲದಿರುವ ಹಿನ್ನಲೆ ರೈಲುಗಳು ಇಲ್ಲಿನ ಜೀವನಾಡಿಯಾಗಿದೆ. ಈ ಗ್ರಾಮಗಳ ಜನರು ಕಂಗ್ರಾ ಜಿಲ್ಲಾ ಕೇಂದ್ರಕ್ಕೆ ಹೋಗಲು ರೈಲುಗಳನ್ನು ಅವಲಂಬಿಸಿದ್ದಾರೆ. ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ 90 ವರ್ಷಗಳಷ್ಟು ಹಳೆಯದಾದ ಈ ಸೇತುವೆಗೆ ಹಾನಿಯಾಗಿದ್ದು, ಸದ್ಯ ಪ್ರವಾದ ರಭಸಕ್ಕೆ ಒಂದು ಪಿಲ್ಲರ್ ಕುಸಿದು ಬಿದ್ದಿದೆ.
ನದಿ ಪಾತ್ರದಲ್ಲಿ ಅಕ್ರಮ ಗಣಿಗಾರಿಕೆಯಿಂದಾಗಿ ಸೇತುವೆಗೆ ಹಾನಿಯಾಗಿರುವ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಹಲವು ದೂರುಗಳು ಬಂದಿವೆ. ಕಳೆದ ತಿಂಗಳು ಸೇತುವೆ ಪಿಲ್ಲರ್ ಬಿರುಕು ಬಿಟ್ಟಿದ್ದರಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆದರೆ ಈಗ ಪಿಲ್ಲರ್ ಕೊಚ್ಚಿ ಹೋಗಿದೆ.
Chakki railway bridge near #Pathankot in #Kangra district collapsed pic.twitter.com/I3yxAr6eU4
— Mamta Gusain (@Mamtagusain5) August 20, 2022
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Sat, 20 August 22