ಚಾಕೊಲೇಟ್​ ವಧು; ದಯವಿಟ್ಟು ಇರುವೆ, ಮಕ್ಕಳಿಂದ ದೂರವಿರಿ ಎಂದ ನೆಟ್​ಮಂದಿ

Chocolate : ಮಿಲ್ಕಿಬಾರ್, ಕ್ಯಾಡ್ಬರಿ, ಫೆರೇರೋ ರೋಚರ್, ಮ್ಯಾಂಗೋ ಬೈಟ್​, ಕಿಟ್​ಕ್ಯಾಟ್​, ಫೈವ್​ ಸ್ಟಾರ್​ ಏನಿಲ್ಲ ಏನುಂಟು ಈಕೆಯ ಕಿವಿಯಲ್ಲಿ ಕತ್ತಲ್ಲಿ ತಲೆಯಲ್ಲಿ! ಬನ್ನಿ ಬೇಗ ಬೇಗ. ವಿಡಿಯೋ ನೋಡ್ತಾ ಒಂದೊಂದೇ...

ಚಾಕೊಲೇಟ್​ ವಧು; ದಯವಿಟ್ಟು ಇರುವೆ, ಮಕ್ಕಳಿಂದ ದೂರವಿರಿ ಎಂದ ನೆಟ್​ಮಂದಿ
ಚಾಕೊಲೇಟ್​ಗಳಿಂದ ಅಲಂಕರಿಸಿಕೊಂಡ ವಧು
Updated By: ಶ್ರೀದೇವಿ ಕಳಸದ

Updated on: Jan 28, 2023 | 1:56 PM

Viral Video : ಭಾರತೀಯ ಮದುವೆಗಳೆಂದರೆ ವಿವಿಧ ಸಂಸ್ಕೃತಿ ಸಂಪ್ರದಾಯದ ಹಿನ್ನೆಲೆಯಲ್ಲಿ ವೈವಿಧ್ಯಮಯವಾಗಿ ನಡೆಯುವಂಥವು. ಅದಕ್ಕೆ ತಕ್ಕಂತೆ ಮಂಟಪದಿಂದ ಹಿಡಿದು ವಧುವರರ ತನಕ ಅವರವರದೇ ಆದ ವಿಶೇಷ ರೀತಿಯಲ್ಲಿ ರೂಪುಗೊಳ್ಳುವಂಥ ಸಂಗತಿಗಳು. ಆದರೆ ಇದು ಆಧುನಿಕ ಕಾಲ. ಎಲ್ಲವೂ ಅವರವರ ರುಚಿ ಅಭಿರುಚಿಗೆ ತಕ್ಕಂತೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಚಾಕೊಲೇಟ್​ ಪ್ರಿಯೆ ವಧುವೊಬ್ಬಳು ತನ್ನನ್ನು ಹೀಗೆ ಚಾಕೊಲೇಟ್​ಗಳಿಂದ ಅಲಂಕರಿಸಿಕೊಂಡಿದ್ದಾಳೆ. ನೆಟ್ಟಿಗರು ಬಾಯಲ್ಲಿ ನೀರೂರಿಸಿಕೊಳ್ಳುತ್ತ, ನಿಮ್ಮ ಬದುಕು ಹೀಗೇ ಸಿಹಿಯಾಗಿರಲಿ ಎಂದು ಹಾರೈಸುತ್ತ ಕೆಲ ಎಚ್ಚರಿಕೆಗಳನ್ನೂ ನೀಡುತ್ತಿದ್ದಾರೆ.

ಕೇಶವಿನ್ಯಾಸ ಮತ್ತು ಆಭರಣ ವಿನ್ಯಾಸವನ್ನು ವಿವಿಧ ಬಗೆಯ ಚಾಕೊಲೇಟ್​​ಗಳಿಂದ ಮಾಡಲಾಗಿದೆ. ಮ್ಯಾಂಗೋ ಬೈಟ್​, ಫೆರೆರೋ ರೋಚರ್, ಕಿಟ್​ ಕ್ಯಾಟ್​, ಮಿಲ್ಕಿಬಾರ್, ಫೈವ್ ಸ್ಟಾರ್​ ಹೀಗೆ ಯಾವ್ಯಾವ ಬ್ರ್ಯಾಂಡಿನ ಚಾಕೊಲೇಟ್​ಗಳು ಇಲ್ಲಿಲ್ಲ ಹುಡುಕಿ ಹೇಳಿ!

ಇದನ್ನೂ ಓದಿ : ಗಗನಯಾನಿ ವಧು; ಕಲಾವಿದರ ಕಲ್ಪನೆಗೆ ಒತ್ತಾಸೆ ನೀಡಿದ ಎಐ ತಂತ್ರಜ್ಞಾನ

ಚೈತ್ರಾ ಫ್ಯಾಷನ್​ ಸ್ಟುಡಿಯೋ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈಗಾಗಲೇ 2 ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಐದು ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ನೀವು ಮದುವೆಯಲ್ಲಿ ಮಕ್ಕಳಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ ನೆಟ್ಟಿಗರು. ಆಹ್​ ಬಜೆಟ್​ಸ್ನೇಹಿ ಅಲಂಕಾರ ಮತ್ತು ಆಭರಣಗಳು ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಜಿಮ್​ಪ್ರಿಯೆ! ಮದುವೆಯಲ್ಲಿ ಪುಲ್​ಅಪ್ಸ್​ ತೆಗೆದ ವಧುವಿನ ವಿಡಿಯೋ ವೈರಲ್

ನೀವು ಮಕ್ಕಳಿಂದ ಅಷ್ಟೇ ಅಲ್ಲ ಇರುವೆಗಳಿಂದಲೂ ದೂರ ಇರಬೇಕು. ಇಲ್ಲವಾದರೆ ನಿಮ್ಮ ಮದುವೆ ಎನ್ನುವುದು… ಎಂದು ಮಗದೊಬ್ಬರು ಹೇಳಿದ್ದಾರೆ. ನಾನು ಅಲ್ಲಿದ್ದರೆ ಖಂಡಿತ ಈ ಎಲ್ಲಾ ಚಾಕೊಲೇಟ್​ಗಳನ್ನು ತಿನ್ನುತ್ತಿದ್ದೆ ಎಂದಿದ್ದಾರೆ ಇನ್ನೂ ಒಬ್ಬರು. ಬಟ್ಟೆಗಳನ್ನೂ ಚಾಕೊಲೇಟುಗಳಿಂದ ಯಾಕೆ ಅಲಂಕರಿಸಿಕೊಂಡಿಲ್ಲ ಎಂದು ಮತ್ತೊಬ್ಬರು ಕೇಳಿದ್ದಾರೆ.

ಇದನ್ನೂ ಓದಿ : ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಮದುವೆಯ ದಿನವೇ ತಲೆಗೂದಲನ್ನು ಕತ್ತರಿಸಿದ ವಧು

ಶ್ರಮವನ್ನು ಮೆಚ್ಚುವಂಥದ್ದು, ಆದರೆ ಇದು ಅರ್ಥಹೀನ ಎಂದು ಒಬ್ಬರು ಹೇಳಿದ್ದಾರೆ. ಇವಳಿಗೆ ಹುಚ್ಚು ಹಿಡಿದಿದೆಯಾ ಎಂದು ಮತ್ತೊಬ್ಬರು ಕೇಳಿದ್ದಾರೆ. ಇಷ್ಟೆಲ್ಲಾ ಖಾಲೀ ಸಮಯ ಇದೆಯಾ ಜನರ ಬಳಿ? ಎಂದು ಒಬ್ಬರು ಕೇಳಿದ್ದಾರೆ. ಏನೇ ಹೇಳಿ ಭಿನ್ನವಾಗಿ, ವಿಶೇಷವಾಗಿ ಕಾಣಬೇಕು ಎಂದು ಜನ ಹೀಗೆ ಹುಚ್ಚುಚ್ಚಾರ ಮಾಡುತ್ತಾರೆ ಎಂದು ಅನೇಕರು ಹೇಳಿದ್ದಾರೆ. ಅದು ಅವರವರ ಸೃಜನಶೀಲತೆ. ಹೀಗೆಲ್ಲ ಮಾತನಾಡಬಾರದು ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:56 pm, Sat, 28 January 23