Liver Transplant: ‘ನನ್ನ ತಂದೆಗೆ ಮೂರು ವರ್ಷಗಳ ಹಿಂದೆ ಮಲಬದ್ಧತೆ ಸಮಸ್ಯೆ ಉಂಟಾಯಿತು. ಆಗ ತಂದೆ, ಏನಾಗಿಲ್ಲ ಎಲ್ಲವೂ ಸರಿ ಹೋಗುತ್ತದೆ ಎಂದರು. 2022ರಲ್ಲಿ ಲಿವರ್ ಸಿರೋಸಿಸ್ (Liver Cirrhosis) ಕೊನೆಯ ಹಂತದಲ್ಲಿದೆ ಎನ್ನುವುದು ಪತ್ತೆಯಾಯಿತು. ಆಗ ಲಿವರ್ ಟ್ರಾನ್ಸ್ಪ್ಲಾಂಟ್ ಮಾಡದಿದ್ದರೆ ಜೀವಕ್ಕೇ ಅಪಾಯ ಎಂದು ವೈದ್ಯರು ಹೇಳಿದರು. ನನ್ನ ತಾಯಿ, ಸೋದರ ಮತ್ತು ನಾನು ಲಿವರ್ ದಾನ ಮಾಡಲು ಮುಂದಾದೆವು. ಆದರೆ ತಾಯಿಯ ಮತ್ತು ಸಹೋದರನ ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ನಿರಾಕರಿಸಿದರು. ಕೊನೆಗೆ ನನ್ನ ಲಿವರ್ ಟ್ರಾನ್ಸ್ಪ್ಲಾಂಟ್ ಮಾಡಲು ಒಪ್ಪಿಗೆ ಸಿಕ್ಕಿತು. ಆದರೆ ಸಂಬಂಧಿಕರೆಲ್ಲ, ಮುಂದೆ ನಿನ್ನ ಭವಿಷ್ಯ ತೊಂದರೆಗೆ ಸಿಲುಕಿಕೊಳ್ಳುತ್ತದೆ ಎಂದರು. ನನ್ನ ಅಪ್ಪನೇ ನನ್ನ ಭವಿಷ್ಯ, ಅವರಿಗಾಗಿ ನಾನು ಏನು ಮಾಡಲೂ ಸಿದ್ಧ ಎಂದೆ.’
ಇದನ್ನೂ ಓದಿ : Viral Video: ಮರಳಲ್ಲಿ ಗೆರೆ ಎಳೆಯುತ್ತ ಕುಣಿಯುವ ಆಟ ಗೊತ್ತಾ ನಿಮಗೆ? ಬನ್ನಿ ಇವರು ಕಲಿಸ್ತಾರೆ
‘ಅಂತೂ ನನ್ನ 22ನೇ ವಯಸ್ಸಿನಲ್ಲಿ ಅಂದರೆ 2022ರ ಫೆ. 15ರಂದು ನನ್ನ ತಂದೆಗೆ ಲಿವರ್ ದಾನ ಮಾಡಿದೆ. ನಾನು ಅಪ್ಪ ಒಂದಿಷ್ಟು ದಿನ ಐಸಿಯುನಲ್ಲಿ ಕಳೆದೆವು. ವಾರ್ಡ್ಗೆ ಬಂದ ಮೇಲೆ ನನ್ನನ್ನು ಕರೆದು, ‘ಮಗಳೇ ನಿನ್ನ ಪಾದಗಳನ್ನು ಸ್ಪರ್ಶಿಸಬೇಕು’ ಎಂದರು. ‘ಅಪ್ಪಾ, ಇನ್ನು ಮುಂದೆ ನಿಮ್ಮ ಬದುಕಿನ ಹೊಸ ಅಧ್ಯಾಯ ಶುರುವಾಗಲಿದೆ’ ಎಂದು ಅಪ್ಪಿದೆ. ಇದೀಗ ಒಂದು ವರ್ಷವಾಯಿತು, ನಾನೂ ನನ್ನ ಅಪ್ಪ ಆರೋಗ್ಯವಾಗಿದ್ದೇವೆ. ನನ್ನ ಹೊಟ್ಟೆಯ ಮೇಲಿನ ಹೊಲಿಗೆಗಳು ಪ್ರೀತಿಯ ದ್ಯೋತಕ’ ಎಂದಿದ್ದಾರೆ ಸಾಕ್ಷಿ ತ್ಯಾಗಿ.
ನಿನ್ನೆ ಇನ್ಸ್ಟಾಗ್ರಾಂನ officialpeopleofindia ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ 2.8 ಲಕ್ಷ ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಹೆಂಡತಿಯನ್ನು ಪಡೆಯುವವರೆಗೆ ಮಾತ್ರ ಮಗ, ಆದರೆ ಮಗಳು ಜೀವನಪೂರ್ತಿ ಮಗಳೇ ಎಂದಿದ್ದಾರೆ ಒಬ್ಬರು. ಸಾರ್ವತ್ರೀಕರಣಗೊಳಿಸಬೇಡಿ, ಎಲ್ಲ ಗಂಡುಮಕ್ಕಳೂ ಹೀಗೆಯೇ ಇರುವುದಿಲ್ಲ, ಹೆಂಡತಿ ಮತ್ತು ತಾಯಿಯನ್ನು ಸಮಾನವಾಗಿ ಕಾಣುವ ಅನೇಕ ಗಂಡುಮಕ್ಕಳಿದ್ದಾರೆ ಎಂದಿದ್ದಾರೆ ಇನ್ನೊಬ್ಬರು.
ಇದನ್ನ ಓದಿ : Viral Video: ಶಾಲಾಬಾಲಕಿಯರ ಬೀದಿಜಗಳ; ನಮ್ಮ ದೇಶ ಮುಂದುವರಿಯುತ್ತಿದೆ ಎಂದ ನೆಟ್ಟಿಗರು
ಈ ಪೋಸ್ಟ್ ನೋಡುವಾಗ ಅದೆಷ್ಟು ಬಾರಿ ಇಷ್ಟಪಟ್ಟೆನೋ ಗೊತ್ತಿಲ್ಲ. ನೀವು ಧೈರ್ಯವಂತರು, ನಿಮ್ಮ ಬಗ್ಗೆ ಹೆಮ್ಮೆ ಇದೆ, ನಿಮ್ಮನ್ನು ನಾನು ಪ್ರೀತಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ. ನಾನೂ ನನ್ನ ತಾಯಿಗೆ ಲಿವರ್ ದಾನ ಮಾಡಿದ್ದೇನೆ, ಆ ಪ್ರಕ್ರಿಯೆ ನಿಜಕ್ಕೂ ಭಯಾನಕವಾಗಿತ್ತು. ಆದರೆ ಕೊನೆಯಲ್ಲಿ ದೇವರ ಆಶೀರ್ವಾದದೊಂದಿಗೆ ಸುಖಾಂತ್ಯವಾಯಿತು ಎಂದಿದ್ದಾರೆ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:47 pm, Fri, 22 September 23