Viral Video: ಬೆಂಗಳೂರೆಂಬ ತೊಟ್ಟಿಲಲ್ಲಿ ಅದೆಷ್ಟೋ ಭಾಷೆಯ ಮಕ್ಕಳು ಒಟ್ಟಿಗೇ ಆಡುತ್ತಿರುತ್ತವೆ, ನಗುತ್ತಿರುತ್ತವೆ, ವಾದಕ್ಕೆ ಬೀಳುತ್ತವೆ, ಜೋರಾಗಿ ಸಂಭ್ರಮಿಸುತ್ತವೆ, ಸಣ್ಣಗೆ ಜಗಳವನ್ನೂ ಮಾಡುತ್ತಿರುತ್ತವೆ ಹಾಗೆಯೇ ಕೆಲವೇ ಕೆಲವು ಮೆಲ್ಲ ದುಃಖಿಸುತ್ತಲೂ ಇರುತ್ತವೆ. ಮಕ್ಕಳೆಂದಮೇಲೆ ಅವುಗಳಿಗೆ ಬೇಕಾಗಿರುವುದು ಒಳಗೂ ಹೊರಗೂ ತನ್ನವರು ಎಂದು ಅಪ್ಪಿಕೊಳ್ಳುವ ಆಪ್ತಭಾವ ಮತ್ತು ವಿಶ್ವಾಸ ಅಲ್ಲವೆ? ಈ ವಿಡಿಯೋ ನೋಡಿ. ಸೃಷ್ಟಿ ಗೌಡ ಎಂಬ ವೈದ್ಯೆಯ ಕ್ಲಿನಿಕ್ಗೆ ಈ ಹೆಣ್ಣುಮಗು ತನ್ನ ಅಮ್ಮನೊಂದಿಗೆ ಬಂದಿದೆ. ಯಾಕದು ಇಷ್ಟೊಂದು ಕಣ್ಣೀರು ತುಂಬಿಕೊಂಡು ಬಂದಿರುವುದು ಮತ್ತು ಬಿಕ್ಕಿಬಿಕ್ಕಿ ಅಳುತ್ತಿರುವುದು?
ಬಿಹಾರಿ ಮೂಲದ ಈ ಮಗುವಿಗೆ ಬಂದಿರುವುದು ಅಂತಿಂಥ ಜ್ವರ ಅಲ್ಲ ಕನ್ನಡದ ಜ್ವರ! ಅಂದರೆ ನಾಳೆ ಕನ್ನಡ ಪರೀಕ್ಷೆ ಇದೆ ನನಗೆ ಕನ್ನಡ ಬರುವುದಿಲ್ಲ ಎಂಬ ಅಳುಕಿನಲ್ಲಿ ಅದು ಹೀಗೆ ನಲುಗಿಬಿಟ್ಟಿದೆ. ಬೇರೆ ಡಾಕ್ಟರ್ ಆಗಿದ್ದರೆ ಜ್ವರಕ್ಕೆ ಔಷಧಿ ಬರೆದು ಕೊಟ್ಟು ಕಳಿಸಿಬಿಡುತ್ತಿದ್ದರೇನೋ. ಆದರೆ ಈ ಡಾಕ್ಟರಮ್ಮ ಮಾತ್ರ ಈ ಮಗುವಿನೊಂದಿಗೆ ಪ್ರೀತಿಯಿಂದ ಮಾತನಾಡಿಸಿ ಅದಕ್ಕೊಂದು ಪೆನ್ನು ಕೊಟ್ಟಿದ್ದಾರೆ. ನಿನ್ನ ಹೆಸರನ್ನು ಕನ್ನಡದಲ್ಲಿ ಬರೆ ಎಂದು ಹೇಳಿ ಆತ್ಮವಿಶ್ವಾಸ ತುಂಬಿದ್ದಾರೆ. ಅಷ್ಟೇ ಅಲ್ಲ ಕನ್ನಡವು ಖಂಡಿತ ಸರಳವಾದ ಭಾಷೆ ಎಂದು ಮೈದಡವಿ ಹೇಳಿದ್ದಾರೆ.
ಇದನ್ನೂ ಓದಿ : Viral Video: ದಾರಿಬಿಡಿ ಜಿಂಕೆಟೀಚರ್ ಬಂದರು; ಸಾಲಾಗಿ ನಿಲ್ಲಿ ಎಡ್ಮಿಷನ್ ಶುರುವಾಗಿದೆ!
ಈ ವಿಡಿಯೋ ಅನ್ನು ಮಾರ್ಚ್ 31ರಂದು ಅಪ್ಲೋಡ್ ಮಾಡಲಾಗಿದೆ. ಮಕ್ಕಳಿಗೆ ಆಗ ಪರೀಕ್ಷಾ ಸಮಯ. ಕೆಲ ಮಕ್ಕಳಿಗೆ ಹೀಗೆ ಜ್ವರ ಬರುವುದುಂಟು. ಸಾಮಾನ್ಯವಾಗಿ ಯಾಕೆ ಜ್ವರ ಬರುತ್ತದೆ ಎನ್ನುವುದು ಆಯಾ ಪೋಷಕರಿಗೆ ಗೊತ್ತಿರುತ್ತದೆ. ಆದರೆ ಈ ಪ್ರಕರಣದಲ್ಲಿ ಕ್ಲಿನಿಕ್ಗೆ ಬಂದ ಮೇಲೆ ಸ್ಪಷ್ಟತೆ ದೊರೆತಿದೆ. ಈ ಮಗುವಿಗೆ ಜ್ವರ ಬಂದ ಕಾರಣವನ್ನು ಈ ವೈದ್ಯೆ ಚುರುಕಾಗಿ ಪತ್ತೆ ಹಚ್ಚಿದ್ದಾರೆ ಮತ್ತು ಆಪ್ತವಾಗಿ ನಿಭಾಯಿಸಿದ್ದಾರೆ. ಇಷ್ಟೇ ಅಲ್ಲ ಆ ಮಗು ಕೂಡ ಹಿಂಜರಿಕೆ ಇಲ್ಲದೆ ತನ್ನ ದುಃಖವನ್ನು ತೋಡಿಕೊಂಡಿದೆ.
ಇದನ್ನೂ ಓದಿ : Viral Video: ಎಲ್ಲಿಂದ ಬಂದರೋ ಎಲ್ಲಿಗೆ ಹೊರಟಿರುವರೋ ಈ ಅಜ್ಜಿ; ನಿಮಗೇನಾದರೂ ಗೊತ್ತೆ?
ಅಂತೂ ಭಾಷೆ ಎನ್ನುವುದು ಮನುಷ್ಯಮನುಷ್ಯರ ನಡುವೆ ಸೇತುವೆಯನ್ನು ಕಟ್ಟುವಂಥದ್ದು. ಶಕ್ತಿಯನ್ನು, ಭರವಸೆಯನ್ನು ನೀಡುವಂಥದ್ದು. ಅದಕ್ಕೆ ಅದರದೇ ಆದ ಲಯ, ಭಾವ, ಸೌಂದರ್ಯ ಮಿಗಿಲಾಗಿ ಅಂತಃಕರಣ ಇದೆ. ಇನ್ನು ಸೌಹಾರ್ದತೆ ಎನ್ನುವುದು ಗೋಷ್ಠಿ, ಭಾಷಣ, ದಾಖಲೆಗಳ ಮೂಲಕವೇ ರೂಪಗೊಳ್ಳುವಂಥದ್ದಲ್ಲ. ಇದೆಲ್ಲವೂ ಒಂದು ಆಪ್ತ ಅನುಭವ. ನಮ್ಮ ಸಂಪರ್ಕಕ್ಕೆ ಬಂದ ಯಾರನ್ನೂ ಹತ್ತಿರದಿಂದ ಒಳಗೊಂಡರೆ ಅವರ ಉಡಿಯಲ್ಲಿ ನಮ್ಮ ಭಾಷೆ, ನಮ್ಮ ಉಡಿಯಲ್ಲಿ ಅವರ ಭಾಷೆಯ ಧಾರೆ ಹರಿಯುತ್ತಲೇ ಇರುತ್ತದೆ. ಭಾಷೆ ಪ್ರೀತಿಯ ಸೆಲೆ. ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:45 pm, Thu, 25 May 23