‘ಅಮ್ಮ ನನ್ನ ಚಾಕೊಲೇಟ್ ಕದ್ದು ಕೆನ್ನೆಗೆ ಹೊಡೆದಿದ್ದಾಳೆ, ಆಕೆಯನ್ನು ಜೈಲಿಗೆ ಹಾಕಿ’ ಪೊಲೀಸ್ ಕಂಪ್ಲೆಂಟ್ ನೀಡಿದ 3 ವರ್ಷದ ಮಗು
Madhya Pradesh : ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಚಿವ ನರೋತ್ತಮ್ ಮಿಶ್ರಾ, ಮಗುವಿಗೆ ವಿಡಿಯೋ ಕಾಲ್ ಮಾಡಿ, ‘ದೀಪಾವಳಿಯಂದು ಚಾಕೋಲೇಟ್ ಮತ್ತು ಸೈಕಲ್ ಕಳಿಸುವುದಾಗಿ ಭರವಸೆ ನೀಡಿದ್ದಾರೆ.’
Trending : ಮಾಧ್ಯಮ ಮತ್ತು ಪರಿಸರದ ಪ್ರಭಾವದಿಂದ ಮಕ್ಕಳು ಬಹಳೇ ಎಚ್ಚರ ಬೆಳೆಸಿಕೊಳ್ಳುತ್ತಿದ್ದಾರೆ, ಪ್ರಜ್ಞಾವಂತರಾಗುತ್ತಿದ್ದಾರೆ. ಅದರ ಪ್ರಯೋಗವೆಲ್ಲ ಮನೆಯೆಂಬ ಪಾಠಶಾಲೆಯಲ್ಲಿಯೇ ನಡೆಯುತ್ತಿದೆ!; ನನ್ನ ತಾಯಿ ನನ್ನ ಸಿಹಿತಿಂಡಿ ಕದ್ದಿದ್ದಲ್ಲದೆ ನನ್ನ ಕೆನ್ನೆಗೆ ಏಟು ಕೂಡ ಕೊಟ್ಟಿದ್ದಾಳೆ. ನಡಿ ಪಪ್ಪಾ ಅಮ್ಮನ ಬಗ್ಗೆ ಪೊಲೀಸ್ ಕಂಪ್ಲೆಂಟ್ ಕೊಡೋಣ’ ಎಂದು ಪೊಲೀಸ್ ಠಾಣೆಗೆ ತನ್ನ ಅಪ್ಪನನ್ನು ಕರೆದೊಯ್ದಿದೆ ಮಧ್ಯಪ್ರದೇಶದ ಮೂರು ವರ್ಷದ ಈ ಗಂಡುಮಗು ಸದ್ದಾಂ. ಠಾಣೆಯಲ್ಲಿ, ‘ಯಾವಾಗಲೂ ಅಮ್ಮ ನನಗೆ ಸಿಹಿತಿಂಡಿಯನ್ನು ತಿನ್ನಬೇಡ ಎಂದು ಹೇಳುತ್ತಾಳೆ. ಹಾಗಾಗಿ ಅವಳನ್ನು ನೀವು ಬಂಧಿಸಲೇಬೇಕು’ ಎಂದು ಪಟ್ಟು ಹಿಡಿದಿದೆ.
ಬರ್ಹಾನ್ಪುರದ ಈ ಮಗು ಸಬ್ ಇನ್ಸ್ಪೆಕ್ಟರ್ ಪ್ರಿಯಾಂಕಾ ನಾಯಕ್ಗೆ, ‘ನನ್ನ ಅಮ್ಮ ನನ್ನ ಸಿಹಿತಿಂಡಿ ಕದ್ದಿದ್ದಾಳೆ. ಕೆನ್ನೆಗೆ ಹೊಡೆದಿದ್ದಾಳೆ. ತಕ್ಷಣವೇ ಅವಳನ್ನು ಜೈಲಿಗೆ ಹಾಕಲೇಬೇಕು ನೀವು’ ಎಂದು ಒತ್ತಾಯ ಮಾಡಿದೆ.
ಮಗುವಿನ ಮುಗ್ಧತನ, ಬಾಲಭಾಷೆ ಮತ್ತು ಅದು ಕೊಡುತ್ತಿರುವ ಕಂಪ್ಲೆಂಟ್ ಎಲ್ಲವನ್ನೂ ಆಲಿಸಿದ ಪ್ರಿಯಾಂಕಾ ಅವರಿಗೆ ನಗು ಬಂದಿದೆ. ಆದರೂ ಗಂಭೀರವಾಗಿ ಪ್ರಕರಣವನ್ನು ದಾಖಲಿಸಿಕೊಳ್ಳುತ್ತಿರುವಂತೆ ನಟಿಸಿದ್ದಾರೆ. ನಂತರ ಕೊನೆಯಲ್ಲಿ ಮಗುವಿನಿಂದ ಸಹಿ ಮಾಡಿಸಿಕೊಂಡಿದ್ದಾರೆ. ಜೊತೆಗೆ ಆದಷ್ಟು ಬೇಗ ನಿನ್ನ ಅಮ್ಮನನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿ ಕಳುಹಿಸಿದ್ದಾರೆ.
ಅದಕ್ಕಿಂತ ಮೊದಲು, ಈ ವಿಷಯವಾಗಿ ಸದ್ದಾಂನ ತಂದೆ ಬಳಿ ವಿಚಾರಿಸಿದಾಗ, ‘ಸಿಹಿತಿಂಡಿ ಕೇಳಿದಾಗ ಸದ್ದಾಂನ ತಾಯಿ ಕೆನ್ನೆ ಹಿಡಿದು ಮುದ್ದು ಮಾಡಿದ್ದಾರೆ’ ಎಂದು ಪೊಲೀಸರಿಗೆ ಉತ್ತರಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಮಗುವಿಗೆ ವಿಡಿಯೋ ಕಾಲ್ ಮಾಡಿ, ‘ದೀಪಾವಳಿಯಂದು ಮಗುವಿಗೆ ಚಾಕೋಲೇಟ್ ಮತ್ತು ಸೈಕಲ್ ಕಳಿಸುವುದಾಗಿ ಭರವಸೆ ನೀಡಿದ್ದಾರೆ.’
ಇದನ್ನು ಓದಿದ ನಿಮಗೆ ಏನೆನ್ನಿಸಿತು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:09 pm, Tue, 18 October 22