Viral Video : ಸಂಚಾರಿ ನಿಯಮಗಳು ಗೊತ್ತಿದ್ದರೂ ಒಮ್ಮೊಮ್ಮೆ ನಿಗದಿತ ವೇಗವನ್ನು ಮೀರಿ ವಾಹನ ಚಲಿಸಿಬಿಡುತ್ತೀರಿ. ಇದು ನಿಮಗೆ ಅರಿವಿಗೆ ಬರುವುದು ಮುಂದೆ ನಿಮ್ಮನ್ನು ಎದುರುಗೊಳ್ಳಲು, ಎದುರುಗೊಂಡು ದಂಡ ಹಾಕಲು ಪೊಲೀಸರು ಕಾಯುತ್ತ ನಿಂತಾಗಲೇ. ಆಗ ಉಂಟಾಗುವ ಪ್ರಕ್ಷುಬ್ಧ ವಾತಾವರಣ ನಿಮ್ಮ ಆ ದಿನದ ಮೂಡ್ ಹಾಳು ಮಾಡಿಬಿಡುತ್ತದೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹಂಗೇರಿಯಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಸಂಗೀತ ರಸ್ತೆ (Musical Road, Hungary) ಇದು. ರಸ್ತೆಯ ಬಲಬದಿಯ ಟ್ರ್ಯಾಕ್ನಲ್ಲಿ ಚಲಿಸಲು ಶುರು ಮಾಡುತ್ತಿದ್ದಂತೆ ರಸ್ತೆಯು ಹಂಗೇರಿಯನ್ನ ಜಾನಪದ ಹಾಡನ್ನು ವಾದ್ಯರೂಪದಲ್ಲಿ ಹೊಮ್ಮಿಸಲು ಶುರುಮಾಡಿಬಿಡುತ್ತದೆ.
ಹಂಗೇರಿಯ ಈಶಾನ್ಯ ಭಾಗಕ್ಕಿರುವ ರಸ್ತೆ-37 ಇದು. ದ್ರಾಕ್ಷಿತೋಟದ ಮಧ್ಯದಲ್ಲಿ ಸುಂದರವಾದ ಈ ರಸ್ತೆ ಹಾದು ಹೋಗಿದೆ. ಈ ಹಾಡು ಕೇಳಬೇಕೆಂದರೆ ಕಿ.ಮೀ ಗೆ 80ರ ವೇಗದಲ್ಲಿ ರಸ್ತೆಯ ಬಲಬದಿಗೆ ಚಲಿಸಬೇಕು. ವಾಹನಗಳ ಗಾಲಿಗಳ ಸ್ಪರ್ಶದಿಂದ ರಸ್ತೆಯಲ್ಲಿ ಅಳವಡಿಸಿರುವ ಯಂತ್ರ ವಾದ್ಯಸಂಗೀತದಲ್ಲಿ ಹಂಗೇರಿಯನ್ ಜಾನಪದ ಹಾಡನ್ನು ನುಡಿಸಲಾರಂಭಿಸುತ್ತದೆ. ಸುಮಾರು ಐನೂರು ಮೀಟರುಗಳ ದೂರದ ತನಕ ಈ ಹಾಡನ್ನು ಕೇಳಬಹುದಾಗಿದೆ.
Me going 250mph to hear the nightcore version pic.twitter.com/kK3dQsoWyV
— donny fon don (@scrotumthief) February 2, 2023
ಇದು ಜೋಗುಳದಂತಿದೆ, ಡ್ರೈವ್ ಮಾಡುವಾಗ ನಿದ್ದೆ ಬರುವುದು ಗ್ಯಾರಂಟಿ ಎಂದಿದ್ಧಾರೆ ಒಬ್ಬರು. ಇದೇ ರಸ್ತೆಯಲ್ಲಿ ನಾನು 250 ವೇಗದಲ್ಲಿ ಹೊರಟಿದ್ದೇನೆ ನೋಡಿ ಎಂದು ಇನ್ನೊಬ್ಬರು ವಿಡಿಯೋ ಟ್ವೀಟ್ ಮಾಡಿದ್ದಾರೆ. ನೆದರ್ಲ್ಯಾಂಡ್ನ ರಸ್ತೆಯೊಂದರಲ್ಲಿ ಸಾಗುವಾಗ 40-60 ವೇಗವನ್ನು ಮೀರಿದರೆ ಆ ರಸ್ತೆ ಕೂಡ ಜಾನಪದ ಹಾಡನ್ನು ಹಾಡುತ್ತದೆ ಎಂದು ನೆಟ್ಟಿಗರೊಬ್ಬರು ಫೋಟೋ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ‘ಚಹಾ ಮಾಡಬಾರದು’ ಎನ್ನುವುದನ್ನು ಕಲಿಯುತ್ತಿದ್ದೇನೆ; ಹಿಮಾಲಯದ ಮಹಿಳೆಯ ಈ ನಿರ್ಧಾರದ ಹಿಂದಿನ ಕಥೆ ಇಲ್ಲಿದೆ
ಜಪಾನಿನಲ್ಲಿ ನಿಗದಿತ ವೇಗದಲ್ಲಿ ಚಲಿಸಿದರೆ ಹೀಗೆ ರಸ್ತೆಯಿಂದ ಸಂಗೀತ ಹೊಮ್ಮುತ್ತದೆ ಎಂದು ಮತ್ತೊಬ್ಬರೂ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇದೆಲ್ಲ ಮೊದಲ ಸಲವಷ್ಟೇ ರೋಮಾಂಚನ ಕೊಡುತ್ತದೆ ಆದರೆ ನಂತರ ಕಿರಿಕಿರಿ ಎನ್ನಿಸುತ್ತದೆ ಎಂದು ಅನೇಕರು ಹೇಳಿದ್ದಾರೆ. ಎಲ್ಲರೂ ಅವರವರ ದೇಶಗಳ ರಸ್ತೆಗಳಿಂದ ಹೊಮ್ಮಿರುವ ಸಂಗೀತದ ಬಗ್ಗೆ ಹೇಳಿದ್ಧಾರೆ. ಭಾರತೀಯರು ಏನು ಹೇಳಲು ಸಾಧ್ಯ?
ಇದನ್ನೂ ಓದಿ : ಹುಲಿ ಬಂದೀತಮ್ಮಾ; ಚಳಿಗೆ ಚಹಾ ಬೇಕಾಯ್ತೇನೋ ತಮ್ಮಾ
ಪ್ರಯಾಣ ಆದಷ್ಟು ಸುಗಮವಾಗಿರಬೇಕು. ಅದಕ್ಕೆ ಬೇಕಾದ ಸೌಲಭ್ಯವನ್ನು ಸೃಷ್ಟಿಸಿಕೊಳ್ಳಬೇಕು. ಆಲೋಚನೆ, ಸೃಜನಶೀಲತೆ ಇದ್ದಲ್ಲಿ ಯಾವ ನಿಯಮವೂ ತನ್ನಿಂತಾನೇ ಶಿಸ್ತಿಗೆ ಒಳಪಡುತ್ತದೆ. ವಿವೇಚನಾರಹಿತ ನಿಯಂತ್ರಣ ಮತ್ತು ನಿಯಮಗಳು ಸದಾ ಕ್ಷೋಭೆಗೆ ತಳ್ಳುತ್ತವೆ.
ಈಗ ಹೇಳಿ, ಇಂಥ ರಸ್ತೆಗಳು ಭಾರತಕ್ಕೆ ಬೇಕೆ, ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:20 pm, Fri, 3 February 23