Money Rain: ಬೀದಿಯಲ್ಲಿ 500 ರೂ ನೋಟುಗಳ ಸುರಿಮಳೆ; ಮುಗಿಬಿದ್ದ ಜನರು: ವೈರಲ್ ವಿಡಿಯೋ
Viral Video From Gujarat: ಗುಜರಾತ್ನ ಮೆಹಸಾನ ಜಿಲ್ಲೆಯ ಗ್ರಾಮವೊಂದರಲ್ಲಿ ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಮಾಜಿ ಗ್ರಾ.ಪಂ. ಅಧ್ಯಕ್ಷನೊಬ್ಬ ಮನೆ ಮೇಲಿಂದ ನೋಟುಗಳನ್ನು ಕೆಳಗೆ ಎರಚಿದ್ದಾನೆ. ಅದನ್ನು ಬಾಚಿಕೊಳ್ಳಲು ಜನರು ಮುಗಿಬಿದ್ದ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಅಹ್ಮದಾಬಾದ್: ಚುನಾವಣೆಯ ವೇಳೆ ರಾಜಕಾರಣಿಗಳು ಜನರ ಕೈಗೆ ನೋಟುಗಳ ಕಂತೆ ಕೊಡೋದನ್ನು ನೋಡಿದ್ದೇವೆ. ಬಾರ್ ಡ್ಯಾನ್ಸರುಗಳಿಗೆ ನೋಟುಗಳನ್ನು ಎರಚುವುದನ್ನು ಕಾಣುತ್ತೇವೆ. ಆದರೆ, ಗುಜರಾತ್ನಲ್ಲೊಬ್ಬ ವ್ಯಕ್ತಿ ಮನೆ ಮೇಲಿಂದ ನೋಟುಗಳನ್ನು ಕೆಳಗೆ ಸುರಿದ ಘಟನೆ (Money Thrown Incident) ನಡೆದಿದೆ. ಗುಜರಾತ್ನ ಮೆಹಸಾನ ಜಿಲ್ಲೆ ಕೇಕ್ರಿ ತಾಲೂಕಿನ ಅಗೋಲ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಸಂಬಂಧಿಯೊಬ್ಬನ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಮನೆಯ ಮೇಲಿಂದ ನೋಟುಗಳನ್ನು ಕೆಳಗೆ ಸುರಿದ ವ್ಯಕ್ತಿ ಮಾಜಿ ಗ್ರಾ.ಪಂ. ಅಧ್ಯಕ್ಷ (Sarpanch) ಕರೀಮ್ ಯಾದವ್ ಎನ್ನಲಾಗಿದೆ.
ರಜಾಕ್ನ ಮದುವೆ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಾಗುತ್ತಿರುವಂತೆಯೇ, ಕರೀಮ್ ಯಾದವ್ ಮತ್ತವರ ಕೆಲ ಕುಟುಂಬ ಸದಸ್ಯರು ಮನೆ ಮೇಲಿಂದ 500 ರೂ ಮುಖಬೆಲೆಯ ನೂರಾರು ನೋಟುಗಳನ್ನು ಎರಚಿದ್ದಾರೆ. ಕೆಳಗಿದ್ದ ನೂರಾರು ಜನರು ಈ ನೋಟುಗಳನ್ನು ಬಾಚಿಕೊಳ್ಳಲು ಎಡತಾಕುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Former sarpanch showers cash at wedding event in Gujarat’s Mehsana.
A former sarpanch of a village in Gujarat’s Mehsana showered money on people gathered to witness his nephew’s wedding celebrations. pic.twitter.com/BjkeZgKW67
— Ahmed Khabeer احمد خبیر (@AhmedKhabeer_) February 19, 2023
ಹೈದರಾಬಾದ್ನಲ್ಲೂ….
ಇಂಥದ್ದೇ ರೀತಿಯ ಒಂದು ಘಟನೆ ಕಳೆದ ವರ್ಷ ಹೈದರಾಬಾದ್ನಲ್ಲಿ ನಡೆದಿದ್ದು ಸುದ್ದಿಯಾಗಿತ್ತು. ಅಲ್ಲೂ ಕೂಡ ವಿವಾಹ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬ 500 ರೂ ಮುಖಬೆಲೆಯ ನೋಟುಗಳನ್ನು ರಸ್ತೆಯಲ್ಲಿ ಎರಚಿದ್ದ. ಹೈದರಾಬಾದ್ನ ಚಾರ್ಮಿನಾರ್ ಬಳಿ ಮದುವೆ ಮೆರವಣಿಗೆ ಸಾಗುತ್ತಿದ್ದ ವೇಳೆ ಎರಡು ಕಡೆ ಈ ವ್ಯಕ್ತಿ ನೂರಾರು ನೋಟುಗಳನ್ನು, ಕೆಲ ಕಂತೆಕಂತೆ ನೋಟುಗಳನ್ನೂ ಸುರಿದ್ದ. ಸ್ಥಳೀಯ ಜನರು ಈ ನೋಟುಗಳನ್ನು ಆಯ್ದುಕೊಳ್ಳಲು ಮುಗಿಬೀಳುತ್ತಿದ್ದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿತ್ತು.
ಇದನ್ನೂ ಓದಿ: ರಸ್ತೆಯಲ್ಲಿ ನಿಂತು ಶಿವನ ಭಕ್ತರಿಗೆ ಬಿಯರ್ ಬಾಟಲಿಗಳನ್ನು ಹಂಚುತ್ತಿದ್ದ ಯುವಕನ ಬಂಧನ
ಬೆಂಗಳೂರು ಫ್ಲೈ ಓವರ್ ಘಟನೆ:
ಕಳೆದ ತಿಂಗಳು ಬೆಂಗಳೂರಿನ ಕೆಆರ್ ಮಾರ್ಕೆಟ್ನ ಫ್ಲೈಓವರ್ನಲ್ಲಿ ವ್ಯಕ್ತಿಯೊಬ್ಬ 10 ರೂ ಮುಖಬೆಲೆಯ 300ಕ್ಕೂ ಹೆಚ್ಚು ನೋಟುಗಳನ್ನು ಕೆಳಗೆ ಎರಚಿದ್ದು ಗಮನ ಸೆಳೆದಿತ್ತು. ಆ ವ್ಯಕ್ತಿ ಮಾನಸಿಕ ಅಸ್ವಸ್ಥನೆಂದು ಮೊದಲಿಗೆ ಅನುಮಾನ ಪಡಲಾಗಿತ್ತು. ಆದರೆ, ತನಿಖೆ ನಡೆಸಿದಾಗ, ಆ ವ್ಯಕ್ತಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯಾಗಿದ್ದು, ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದು ತಿಳಿದುಬಂದಿತ್ತು. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.