ರಸ್ತೆಬದಿಯ ಹಣತೆ ಅಂಗಡಿಯನ್ನು ಧ್ವಂಸಗೊಳಿಸಿದ ನಿವೃತ್ತ ಐಎಎಸ್ ಅಧಿಕಾರಿಯ ಮಗಳು
Lucknow : ‘ಮೇಡಮ್ ಬೆಳಗ್ಗೆ ಅಂಗಡಿಗಳನ್ನು ತೆರವುಗೊಳಿಸಲು ತಿಳಿಸಿದ್ದು ನಿಜ. ನಾವು ಸ್ವಲ್ಪ ಕಾಲಾವಕಾಶ ಕೊಡಿ ಇನ್ನೊಂದು ಸ್ಥಳಕ್ಕೆ ಸಾಗಣೆ ಮಾಡಲು ಎಂದಿದ್ದೆವು. ಅಷ್ಟರಲ್ಲಿ ಅವರು ಹೀಗೆಲ್ಲ ಮಾಡಿಬಿಟ್ಟರು’
Viral Video : ಇಡೀ ದೇಶ ದೀಪಾವಳಿಯ ಸಂಭ್ರಮ ಸಡಗರದಲ್ಲಿದೆ. ಆದರೆ ಉತ್ತರಪ್ರದೇಶದ ಲಕ್ನೋದ ಗೋಮತಿನಗರದಲ್ಲಿ ನಡೆದ ಘಟನೆ ಮಾತ್ರ ಬಹಳ ಅಹಿತಕರವೆನ್ನಿಸುತ್ತಿದೆ. ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮಗಳು ನೆಲ ಒರೆಸುವ ಮಾಪ್ನಿಂದ, ರಸ್ತೆಬದಿಯ ಹಣತೆ ಅಂಗಡಿಯನ್ನು ಧ್ವಂಸಗೊಳಿಸಿದ ವಿಡಿಯೋ ವೈರಲ್ ಆಗುತ್ತಿದೆ. ಟ್ವಿಟರ್ನಲ್ಲಿ ಈ ವಿಡಿಯೋ ಗಮನಿಸಿದ ಲಕ್ನೋ ಪೊಲೀಸರು, ಈ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಈಕೆ ನಿವೃತ್ತ ಐಎಎಸ್ ಅಧಿಕಾರಿ ಶಂಕರ್ ಲಾಲ್ ಅವರ ಮಗಳು ಎಂದು ಗುರುತಿಸಲಾಗಿದೆ. ಗೋಮತಿನಗರದ ಪತ್ರಕರ್ಪುರಂನಲ್ಲಿರುವ ಈಕೆಯ ಮನೆಯ ಮುಂದೆ ರಸ್ತೆಬದಿ ವ್ಯಾಪಾರಿಗಳು ಹಣತೆ ಮಾರುತ್ತಿದ್ದಾರೆ ಕಾರಣಕ್ಕೆ ಈಕೆ ಹೀಗೆ ವ್ಯತಿರಿಕ್ತವಾಗಿ ವರ್ತಿಸಿದ್ದಾರೆ.
Several videos of a woman vandalising potteries of road side vendors in posh Patrakarpuram area in UP’s Lucknow has surfaced. Request @lkopolice take cognizance. pic.twitter.com/4YKocXiaxj
— Piyush Rai (@Benarasiyaa) October 24, 2022
ಅಂಗಡಿಯ ಮಾಲೀಕರಿಗೆ ಅಂಗಡಿಗಳನ್ನು ತೆರವುಗೊಳಿಸಲು ಈಕೆ ಕೇಳಿಕೊಂಡಿದ್ದಾರೆ. ಆದರೆ ಅವರು ಕಾಲಾವಕಾಶ ಕೇಳಿದ್ದಾರೆ. ಆಗ ಆಕೆ ಹೀಗೆ ನೀರು ಸುರಿದು, ನಂತರ ನೆಲ ಒರೆಸುವ ಮಾಪ್ನಿಂದ ಪ್ರಣತೆಗಳನ್ನು ನಾಶ ಮಾಡಿದ್ದಾರೆ ಎಂದು ಆಜ್ತಕ್ ವರದಿ ಮಾಡಿದೆ.
ಇಂಡಿಯಾ ಟುಡೇ ಪ್ರಕಾರ, ‘ಮೇಡಮ್ ಬೆಳಗ್ಗೆ ಅಂಗಡಿಗಳನ್ನು ತೆರವುಗೊಳಿಸಲು ತಿಳಿಸಿದ್ದು ನಿಜ. ನಾವು ಸ್ವಲ್ಪ ಸಮಯ ಕೊಡಿ, ವಾಹನದಲ್ಲಿ ಅವುಗಳನ್ನು ತುಂಬಿಕೊಂಡು ಇನ್ನೊಂದು ಸ್ಥಳಕ್ಕೆ ಸಾಗಣೆ ಮಾಡುತ್ತೇವೆ ಎಂದಿದ್ದೆವು. ಆದರೆ ಅವರು, ಹಣತೆ ಮತ್ತು ಇನ್ನಿತರೇ ಅಲಂಕಾರಕ ವಸ್ತುಗಳ ಮೇಲೆ ನೀರನ್ನು ಎರಚಿ ಮತ್ತು ಅವುಗಳನ್ನು ಮಾಪಿನಿಂದ ಒಡೆದು ಹಾಕಿಬಿಟ್ಟರು’ ಎಂದು ರಸ್ತೆಬದಿ ಅಂಗಡಿಯ ಮಾಲೀಕರು ತಿಳಿಸಿದ್ದಾರೆ.
ನೆಟ್ಟಿಗರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿದ್ದಾರೆ. ‘ಬಡವರನ್ನು ಸಹಿಸಿಕೊಳ್ಳಲು ಯಾರೊಬ್ಬರಿಗೂ ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಆರ್ಥಿಕ ಅಸಮಾನಯನ್ನು ಸರಿದೂಗಿಸುವಲ್ಲಿ ಯೋಚಿಸಬೇಕು’ ಎಂದಿದ್ದಾರೆ ಒಬ್ಬರು. ‘ಈಕೆ ಖಂಡಿತ ಹಿಂದೂ ಮೇಲ್ಜಾತಿಯಿಂದ ಬಂದವರಾಗಿರುತ್ತಾರೆ.’ ಎಂದಿದ್ಧಾರೆ ಮತ್ತೊಬ್ಬರು. ‘ಮೇಲ್ವರ್ಗದ ಜನರಿಗೆ ಬಡವರ ನೋವು ಅರ್ಥವಾಗದು. ಈ ಎಲ್ಲ ನಷ್ಟವನ್ನು ಈಕೆ ಭರಿಸುತ್ತಾರೆಯೇ? ಎಂದು ಕೇಳಿದ್ಧಾರೆ ಮತ್ತೂ ಒಬ್ಬರು. ‘ದಯವಿಟ್ಟು ಯಾರಾದರೂ ಈ ರಸ್ತೆಬದಿ ವ್ಯಾಪಾರಿಯ ನಂಬರ್ ಕೊಡಿ. ಈ ನಷ್ಟವನ್ನು ಭರಿಸಲು ನಾನು ಸಿದ್ಧಳಿದ್ದೇನೆ’ ಎಂದಿದ್ದಾರೆ ಒಬ್ಬ ಮಹಿಳೆ. ‘ಈ ವಿಡಿಯೋದಲ್ಲಿರುವ ಜನ ನಿಂತು ತಮಾಷೆ ನೋಡುತ್ತಿದ್ದಾರೆ, ಎದುರಿಗೆ ನಡೆಯುತ್ತಿರುವುದು ಸಿನೆಮಾ ಎಂಬಂತೆ’ ಎಂದಿದ್ದಾರೆ ಮಗದೊಬ್ಬರು. ‘ಇಷ್ಟೊಂದು ಹೃದಯಹೀನರಾಗಿರಲು ಹೇಗೆ ಸಾಧ್ಯ? ಶ್ರೀಮಂತರು ತಮ್ಮ ತೋಳ್ಬಲದಿಂದ ಬಡವರನ್ನು ಹೀಗೇ ತುಳಿಯುತ್ತಾರೆ’ ಎಂದಿದ್ದಾರೆ ಒಬ್ಬರು.
ಒಟ್ಟಾರೆಯಾಗಿ ಬಹಳಷ್ಟು ಜನರು ಈ ನಡೆಯನ್ನು ಖಂಡಿಸಿದ್ದು, ಈ ಬೀದಿಬದಿ ವ್ಯಾಪಾರಿಗೆ ಸಹಾಯ ಮಾಡಲು ಆಸಕ್ತಿ ತೋರಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:32 pm, Tue, 25 October 22