ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧವರೆಗೂ ರೀಲ್ಸ್ ಹುಚ್ಚು ಜೋರಾಗಿದೆ. ಹೀಗಾಗಿ ದಿನ ಬೆಳಗಾದರೆ ರೀಲ್ಸ್ ಮಾಡುತ್ತಾ ಕಾಲ ಕಳೆಯುವವರೇ ಹೆಚ್ಚು. ಈ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯುವಕರು ಯುವತಿಯರು ಎಲ್ಲೆಂದರಲ್ಲಿ ವಿಡಿಯೋ ರೆಕಾರ್ಡ್ ಮಾಡುವುದನ್ನು ನೋಡಿರಬಹುದು. ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುವ ಮೂಲಕ ಸಾರ್ವಜನಿಕರಿಗೂ ತೊಂದರೆಯನ್ನುಂಟು ಮಾಡುತ್ತಿರುವ ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ದೆಹಲಿಯ ಪಶ್ಚಿಮ ವಿಹಾರ್ ಫ್ಲೈಓರ್‌ನಲ್ಲಿ ಕಾರು ನಿಲ್ಲಿಸಿ ರೀಲ್ಸ್ ಮಾಡುವ ಮೂಲಕ ಯುವಕರಿಬ್ಬರೂ ಹುಚ್ಚಾಟ ಮೆರೆದಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ಹಲವಾರು ವಾಹನಗಳು ಸಾಲಾಗಿ ನಿಂತಿದ್ದು, ಅವುಗಳು ಮುಂದೆ ಹೋಗಲು ದಾರಿ ಮಾಡಿಕೊಡದೆ ಇಸುಜು ವಿ-ಕ್ರಾಸ್ ಪಿಕಪ್ ರಸ್ತೆಯ ಮಧ್ಯದಲ್ಲಿ ನಿಂತಿದೆ. ಆ ವೇಳೆ ಕಾರಿನಿಂದ ಇಬ್ಬರು ಯುವಕರು ಇಳಿದು ಬಂದಿದ್ದು, ಅದರಲ್ಲೊಬ್ಬ ವ್ಯಕ್ತಿಯು ಮೈ ತುಂಬಾ ಚಿನ್ನದ ಆಭರಣಗಳನ್ನು ಧರಿಸಿದ್ದು ಶ್ರೀಮಂತ ವ್ಯಕ್ತಿಯೆನ್ನುವುದು ತಿಳಿಯುತ್ತದೆ.
ರೀಲ್ಸ್ ಬಳಿಕ ಅದೇ ರಸ್ತೆಯಲ್ಲಿ ಮುಂಭಾಗದ ಬಾಗಿಲುಗಳನ್ನು ತೆರೆದುಕೊಂಡೇ ಕಾರನ್ನು ಓಡಿಸಿದ್ದಾರೆ. ಡ್ರೈವಿಂಗ್ ಮಾಡುವಾಗ ಯುವಕನು ಮತ್ತೊಮ್ಮೆ ಕ್ಯಾಮೆರಾಗೆ ಪೋಸ್ ನೀಡಿದ್ದಾನೆ. ಈ ಆಘಾತಕಾರಿ ವೀಡಿಯೊವನ್ನು ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿನ ‘@lavelybakshi’ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊವೊಂದು ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಳ್ಳುವಂತೆ ನೆಟ್ಟಿಗರಿಂದ ಹಲವಾರು ಪ್ರತಿಕ್ರಿಯೆಗಳು ಬಂದಿವೆ.
ಇದನ್ನೂ ಓದಿ: ಯುವತಿಯ ಕಿಡ್ನಿ ವೈಫಲ್ಯಕ್ಕೆ ಕಾರಣವಾದ ಹೇರ್ ಸ್ಟ್ರೈಟ್ನಿಂಗ್ ಟ್ರೀಟ್ಮೆಂಟ್
ಈ ವಿಡಿಯೋ ನೋಡಿದ ನೆಟ್ಟಿಗನೊಬ್ಬನು, “ಪೊಲೀಸರು ಅವರನ್ನು ಹಿಡಿಯುವುದಿಲ್ಲ ಎಂದು ಅವರಿಗೆ ತುಂಬಾ ವಿಶ್ವಾಸವಿದೆ. ಒಂದು ವೇಳೆ ಅವರನ್ನು ಪತ್ತೆಹಚ್ಚಿದರೂ, ಅದು ಹೆಸರಿಗೆ ಮಾತ್ರ. ಇಂತಹ ಜನರು ಎಂದಿಗೂ ಪಾಠ ಕಲಿಯುವುದಿಲ್ಲ, ಪ್ರಾಣಕ್ಕೆ ಕುತ್ತು ತರುವ ಚಟುವಟಿಕೆಗಳಲ್ಲಿ ತೊಡಗುವುದನ್ನು ಕೂಡ ನಿಲ್ಲಿಸುವುದಿಲ್ಲ. ಕಾನೂನು ಎಂಬುದು ಸಾಮಾನ್ಯ ಜನರಿಗೆ ಮಾತ್ರ, ಇದು ಶ್ರೀಮಂತರಿಗೆ ವರ್ತಿಸುವುದಿಲ್ಲ” ಎಂದಿದ್ದಾರೆ. ಮತ್ತೊಬ್ಬರು, ‘ಈ ಯುವಕರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಹೀಗೆ ಈ ಯುವಕರ ವಿರುದ್ಧ ಗರಂ ಆಗಿರುವ ನೆಟ್ಟಿಗರು ಖಾರವಾಗಿಯೇ ಕಾಮೆಂಟ್ ಮಾಡುತ್ತಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ