ನಮ್ಮ ಹಿರಿಯರು ಸೃಷ್ಟಿಯ ಎಲ್ಲವನ್ನು ದೇವರಂತೆ ಪೂಜಿಸುತ್ತಿದ್ದರು. ಅದೇ ಸಂಸ್ಕಾರವನ್ನು ತಮ್ಮ ಮುಂದಿನ ಜನಾಂಗಕ್ಕೂ ಧಾರೆಯೆರೆದಿದ್ದಾರೆ. ಅದರಲ್ಲೂ ಸನಾತನ ಹಿಂದು ಧರ್ಮದಲ್ಲಿ ಗೋವನ್ನು ಅತ್ಯಂತ ಪವಿತ್ರ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಹಿಂದಿನಿಂದಲೂ ಗೋವನ್ನು ಪೂಜಿಸುವ ಸಂಸ್ಕಾರ ನಮ್ಮದು. ಎಲ್ಲೇ ಗೋವು ಕಂಡರೂ ಅದನ್ನು ಮುಟ್ಟಿ ನಮಸ್ಕರಿಸುವ ಪದ್ಧತಿ ಇದೆ. ಆದರೆ ಇಂದಿನ ಮಕ್ಕಳಲ್ಲಿ ಈ ಸಂಸ್ಕಾರ ಕಾಣಸಿಗುವುದು ಬಲು ಅಪರೂಪ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ಇಬ್ಬರು ಪುಟಾಣಿ ಮಕ್ಕಳು ಗೋಮಾತೆಗೆ ನಮಸ್ಕರಿಸುವ ಪರಿ, ನಮ್ಮಲ್ಲೂ ಭಕ್ತಿಭಾವವನ್ನು ಮೂಡಿಸುತ್ತದೆ. ಈ ಪುಟಾಣಿಗಳ ಉತ್ತಮ ಸಂಸ್ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಸಿಕ್ಕಿದೆ.
ಈ ವೀಡಿಯೊವನ್ನು ಶಂಕರ್ ದತ್ತ್ (@duttashankara) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಮಕ್ಕಳು ನಾವು ತೋರುವುದನ್ನು ಮಾಡುತ್ತಾರೆ. ಪ್ರತಿಯೊಬ್ಬರಲ್ಲೂ ಹಾಗೂ ಪ್ರಕೃತಿಯ ಎಲ್ಲದರಲ್ಲೂ ದೇವರನ್ನು ಕಾಣುವ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿ ನಮ್ಮದು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವೀಡಿಯೋದಲ್ಲಿ ಪುಟ್ಟ ಮಕ್ಕಳಿಬ್ಬರು ಗೋಮಾತೆಗೆ ಭಕ್ತಿ ಪೂರ್ವಕವಾಗಿ ನಮಸ್ಕಾರಿಸುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ:Video Viral: ಜಲಾವೃತಗೊಂಡ ಬೈಪಾಸ್‌ನಲ್ಲಿ ಸಿಲುಕಿಕೊಂಡ ಕಾಲೇಜ್ ಬಸ್, ಕಿಟಕಿಯ ಮೂಲಕ ವಿದ್ಯಾರ್ಥಿಗಳ ರಕ್ಷಣೆ
ಬೆಂಗಳೂರಿನಲ್ಲಿ ಫುಟ್ಬಾತ್ ಒಂದರ ಮೇಲೆ ಗೋವೊಂದು ಮಲಗಿರುತ್ತದೆ. ಅದನ್ನು ಕಂಡ ಬಾಲಕರಿಬ್ಬರೂ ಗೋವಿನ ಬಳಿ ಬಂದು ಸ್ವಲ್ಪ ದೂರದಲ್ಲಿಯೇ ನಿಂತು ಕೈ ಮುಗಿದು ನಮಸ್ಕಾರಿಸುತ್ತಿರುತ್ತಾರೆ. ಗೋವನ್ನು ಸ್ಪರ್ಶಿಸಿ ಅದರ ಆಶೀರ್ವಾದವನ್ನು ಪಡೆಯಬೇಕೆಂಬ ಹಂಬಲ ಅವರದ್ದು, ಆದರೆ ಪುಟ್ಟ ಮಕ್ಕಳಿಗೆ ಪ್ರಾಣಿಗಳ ಭಯ ಇದ್ದೇ ಇರುತ್ತದೆ ಅಲ್ವಾ. ಆ ಕಾರಣದಿಂದ ಮನಸ್ಸಿದ್ದರೂ ಗೋಮಾತೆಯನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಲು ಹಿಂಜರಿಯುತ್ತಿದ್ದರು. ಅಷ್ಟರಲ್ಲಿ ಪಾದಚಾರಿ ಮಹಿಳೆಯೊಬ್ಬರು ಗೋವನನ್ನು ಮುಟ್ಟಿ ನಮಸ್ಕರಿಸಿ ಹೋಗುತ್ತಾರೆ. ಇದನ್ನು ಕಂಡ ಬಾಲಕರಿಬ್ಬರೂ ಕೂಡಾ ಗೋಮಾತೆಯನ್ನು ಸ್ಪರ್ಶಿಸಿ ತಲೆಬಾಗುತ್ತಾ ನಮಿಸುವ ದೃಶ್ಯಾವಳಿಯನ್ನು ವೀಡಿಯೋದಲ್ಲಿ ಕಾಣಬಹುದು. ನಾವು ಏನು ಮಾಡುತ್ತೇವೆಯೋ ಮಕ್ಕಳು ಅದನ್ನೇ ಕಲಿಯುತ್ತಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಹಾಗಾಗಿ ಮಕ್ಕಳಿಗೆ ಯಾವಾಗಲು ಉತ್ತಮ ಸಂಸ್ಕಾರವನ್ನೇ ಕಲಿಸಬೇಕು.
ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ ವೀಡಿಯೋ 370 ಸಾವಿರ ವೀಕ್ಷಣೆಗಳನ್ನು ಹಾಗೂ 62.8 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈ ವೀಡಿಯೊಗೆ ಕಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು “ಪ್ರಕೃತಿಯನ್ನು ಯಾವಾಗಲು ಗೌರವಿಸಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದೇ ಅಲ್ಲವೇ ನಮ್ಮ ಸಂಸ್ಕೃತಿ’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮಕ್ಕಳ ಉತ್ತಮ ಸಂಸ್ಕಾರವನ್ನು ಕೊಂಡಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: