ದೆಹಲಿ: ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಸೀರೆಯುಟ್ಟ ಮಹಿಳೆಯನ್ನು ಒಳಗೆ ಬಿಡಲು ನಿರಾಕರಿಸಿದ ವಿಡಿಯೋ ಭಾರೀ ವೈರಲ್ ಆಗಿತ್ತು. ಸೀರೆಯನ್ನು ಗೌರವಯುತವಾದ ಉಡುಗೆಯಲ್ಲ ಎಂದು ರೆಸ್ಟೋರೆಂಟ್ ಒಳಗೆ ಹೋಗಲು ನನಗೆ ನಿರಾಕರಿಸಲಾಗಿದೆ. ಇದೇ ಮೊದಲ ಬಾರಿಗೆ ನಾನು ಈ ರೀತಿಯ ಅವಮಾನ ಅನುಭವಿಸಿದೆ. ನನಗೆ ಸೀರೆ ಇಷ್ಟವಾದ ಕಾರಣ ಅದನ್ನು ಧರಿಸಿ ಹೋಗಿದ್ದೆ. ಇದೇನಾ ಈ ರೆಸ್ಟೋರೆಂಟ್ ಭಾರತೀಯ ಸಂಸ್ಕೃತಿಗೆ ಕೊಡುವ ಮರ್ಯಾದೆ? ಎಂದು ಅನಿತಾ ಚೌಧರಿ ಎಂಬ ಮಹಿಳೆ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.
ಈ ವಿಡಿಯೋ ವೈರಲ್ ಅಗುತ್ತಿದ್ದಂತೆ ದೆಹಲಿಯ ಅಕ್ವಿಲಾ ರೆಸ್ಟೋರೆಂಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ದೆಹಲಿಯ ಅನ್ಸಾಲ್ ಪ್ಲಾಜಾದಲ್ಲಿರುವ ರೆಸ್ಟೋರೆಂಟ್ ಒಂದಕ್ಕೆ ಸೀರೆಯುಟ್ಟ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿದೆ. ಸ್ಮಾರ್ಟ್ ಕ್ಯಾಷುವಲ್ ಡ್ರೆಸ್ಕೋಡ್ ಅನ್ನು ಅನುಸರಿಸಿಲ್ಲ ಎಂಬ ಕಾರಣಕ್ಕೆ ಸೀರೆಯುಟ್ಟ ಮಹಿಳೆಗೆ ಆ ರೆಸ್ಟೋರೆಂಟ್ ಒಳಗೆ ಹೋಗಲು ಅವಕಾಶ ಕೊಟ್ಟಿಲ್ಲ. ಸೀರೆ ಸ್ಮಾರ್ಟ್ ಔಟ್ಫಿಟ್ ಅಲ್ಲ ಎಂದಿರುವ ರೆಸ್ಟೋರೆಂಟ್ ಸಿಬ್ಬಂದಿಯ ವಿಡಿಯೋ ವೈರಲ್ ಆಗಿದ್ದು, ಹಲವರು ಈ ವರ್ತನೆಗೆ ಕಿಡಿ ಕಾರಿದ್ದರು.
ಭಾರತದಲ್ಲಿಯೇ ಸೀರೆಗೆ ಮಾನ್ಯತೆ ಇಲ್ಲವೆಂದರೆ ಹೇಗೆ? ಎಂದು ಹಲವು ಮಹಿಳೆಯರು ಇನ್ಸ್ಟಾಗ್ರಾಂನಲ್ಲಿ ಆಕ್ಷೇಪ ಹೊರಹಾಕಿದ್ದರು. ಜೊಮ್ಯಾಟೋ ಕೂಡ ರೆಸ್ಟೋರೆಂಟ್ನ ಈ ವರ್ತನೆಗೆ ಅಸಮಾಧಾನ ಹೊರಹಾಕಿತ್ತು. ಆದರೆ, ಈ ಪ್ರಕರಣದ ಅಸಲಿ ಮುಖವನ್ನು ಅಕ್ವಿಲಾ ರೆಸ್ಟೋರೆಂಟ್ ತೆರೆದಿಟ್ಟಿದೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅಕ್ವಿಲಾ ರೆಸ್ಟೋರೆಂಟ್, ನಾವು ನಮ್ಮ ದೇಶದ ಸಂಸ್ಕೃತಿಯನ್ನು ಬಹಳ ಗೌರವಿಸುತ್ತೇವೆ. ನಮ್ಮ ರೆಸ್ಟೋರೆಂಟ್ಗೆ ಬರುವ ಗ್ರಾಹಕರು ಮಾಡರ್ನ್ ಬಟ್ಟೆ ಧರಿಸಬೇಕು, ಕ್ಯಾಷುವಲ್ ಅಥವಾ ಸಾಂಪ್ರದಾಯಿಕ ಉಡುಗೆಯನ್ನೇ ಧರಿಸಬೇಕೆಂಬ ಯಾವ ನಿರ್ಬಂಧವೂ ನಮ್ಮಲ್ಲಿ ಇಲ್ಲ. ನಮ್ಮ ರೆಸ್ಟೋರೆಂಟ್ಗೆ ಬಂದಿದ್ದ ಮಹಿಳೆಯೊಂದಿಗೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯ ಕೇವಲ 10 ಸೆಕೆಂಡ್ನ ವಿಡಿಯೋದಿಂದಾಗಿ ನಮ್ಮ ರೆಸ್ಟೋರೆಂಟ್ಗೆ ಕೆಟ್ಟ ಹೆಸರು ಬಂದಿದೆ. ಆದರೆ, ಆ ವಿಡಿಯೋದಲ್ಲಿರುವುದಷ್ಟೇ ನಿಜವಲ್ಲ ಎಂದಿದ್ದಾರೆ.
ಅಕ್ವಿಲಾ ರೆಸ್ಟೋರೆಂಟ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಆ ದಿನ ನಡೆದ ಇಡೀ ಘಟನೆ ರೆಕಾರ್ಡ್ ಆಗಿದೆ. ಆ ವಿಡಿಯೋವನ್ನು ನೋಡಿದರೆ ಪೂರ್ತಿ ಘಟನೆ ತಿಳಿಯಲಿದೆ ಎಂದು ರೆಸ್ಟೋರೆಂಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ನಮ್ಮ ರೆಸ್ಟೋರೆಂಟ್ನ ಸಿಬ್ಬಂದಿಯ ಕೆನ್ನೆಗೆ ಹೊಡೆದ ಮಹಿಳೆ ಎಲ್ಲರೊಂದಿಗೆ ಜಗಳವಾಡಿದ್ದರು. ಆಗ ಇನ್ನೋರ್ವ ಸಿಬ್ಬಂದಿ ಅಲ್ಲಿನ ವಾತಾವರಣವನ್ನು ಬೇರೆಡೆ ತಿರುಗಿಸಲು ಆಕೆಯ ಉಡುಗೆಯ ಬಗ್ಗೆ ಕಮೆಂಟ್ ಮಾಡಿದ್ದ. ಅದನ್ನು ಮಾತ್ರ ಕಟ್ ಮಾಡಿ ಆ ಮಹಿಳೆ ನಮ್ಮ ರೆಸ್ಟೋರೆಂಟ್ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಷ್ಟಕ್ಕೂ ಅಲ್ಲಿ ಆಗಿದ್ದೇನು?:
ಅನಿತಾ ಚೌಧರಿ ಅಕ್ವಿಲಾ ರೆಸ್ಟೋರೆಂಟ್ಗೆ ಬಂದಾಗ ಎಲ್ಲ ಟೇಬಲ್ಗಳೂ ಫುಲ್ ಆಗಿತ್ತು. ಹೀಗಾಗಿ, ರೆಸ್ಟೋರೆಂಟ್ ಸಿಬ್ಬಂದಿ ಆಕೆಗೆ ಕಾಯಲು ಸೂಚಿಸಿದ್ದರು. ಆಕೆ ಟೇಬಲ್ ರಿಸರ್ವೇಷನ್ ಮಾಡಿಸದೆ ಬಂದಿದ್ದರು. ಹೀಗಾಗಿ, ಟೇಬಲ್ ಖಾಲಿ ಆಗುವವರೆಗೂ ಕಾಯುವಂತೆ ವಿನಮ್ರವಾಗಿಯೇ ರೆಸ್ಟೋರೆಂಟ್ ಸಿಬ್ಬಂದಿ ಹೇಳಿದ್ದರು. ಅವರನ್ನು ಎಲ್ಲಿ ಕೂರಿಸಬೇಕೆಂಬ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸಿಬ್ಬಂದಿಯಿದ್ದ ಕಡೆ ಬಂದ ಆಕೆ ಜೋರಾಗಿ ಗಲಾಟೆ ಮಾಡಿದರು. ಅಲ್ಲದೆ, ಗ್ರಾಹಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ರೆಸ್ಟೋರೆಂಟ್ನ ಮ್ಯಾನೇಜರ್ಗೆ ಆಕೆ ಹೊಡೆದರು ಎಂದು ಇನ್ಸ್ಟಾಗ್ರಾಂನಲ್ಲಿ ಅಕ್ವಿಲಾ ರೆಸ್ಟೋರೆಂಟ್ ತಿಳಿಸಿದೆ.
ಆಕೆಯನ್ನು ಅಲ್ಲಿಂದ ಕಳುಹಿಸದಿದ್ದರೆ ಇನ್ನಷ್ಟು ದೊಡ್ಡ ಗಲಾಟೆ ಆಗುವ ಸಾಧ್ಯತೆ ಇತ್ತು. ಅಲ್ಲಿದ್ದ ಗ್ರಾಹಕರೆಲ್ಲ ಇದನ್ನೇ ನೋಡುತ್ತಿದ್ದರು. ಹೀಗಾಗಿ, ರೆಸ್ಟೋರೆಂಟ್ನ ಗೇಟ್ ಕೀಪರ್ ನಮ್ಮ ರೆಸ್ಟೋರೆಂಟ್ನಲ್ಲಿ ಸೀರೆ ಸ್ಮಾರ್ಟ್ ಕ್ಯಾಷುವಲ್ ಡ್ರೆಸ್ ಅಲ್ಲ, ನೀವಿನ್ನು ಹೋಗಬಹುದು ಎಂದು ಹೇಳಿದ್ದರು. ಆಗಿನ ಪರಿಸ್ಥಿತಿಯನ್ನು ಬೇರೆಡೆ ತಿರುಗಿಸಲು ಆತ ಹಾಗೆ ಹೇಳಿದ್ದರೇ ವಿನಃ ನಮ್ಮ ರೆಸ್ಟೋರೆಂಟ್ನಲ್ಲಿ ಆ ರೀತಿಯ ಯಾವ ನಿಯಮಗಳೂ ಇಲ್ಲ. ಆತ ಹಾಗೆ ಹೇಳಿದ್ದು ನಮ್ಮ ರೆಸ್ಟೋರೆಂಟ್ ಪರವಾಗಿ ಅಲ್ಲ. ಭಾರತದ ಉದ್ಯಮವಾದ ಅಕ್ವಿಲಾ ಭಾರತೀಯ ಸಂಪ್ರದಾಯ, ಸಂಸ್ಕೃತಿಗೆ ಬಹಳ ಗೌರವ ಕೊಡುತ್ತದೆ ಎಂದು ಅಕ್ವಿಲಾ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Viral Video: ಸೀರೆಯುಟ್ಟ ಮಹಿಳೆಗೆ ದೆಹಲಿಯ ರೆಸ್ಟೋರೆಂಟ್ನಲ್ಲಿ ನೋ ಎಂಟ್ರಿ; ವೈರಲ್ ವಿಡಿಯೋಗೆ ಭಾರೀ ವಿರೋಧ
Viral Video: ಬೇಕರಿ ತಿಂಡಿ ಪ್ರಿಯರೇ ಎಚ್ಚರ; ಈ ಶಾಕಿಂಗ್ ವಿಡಿಯೋ ನೋಡಿದರೆ ರಸ್ಕ್ ಮುಟ್ಟೋಕೂ ಅಸಹ್ಯ ಪಡ್ತೀರ!
(Women slapped our staff Delhi Restaurant denies refusing entry to woman in saree CCTV Footage)