Trending : ವಿಮಾನ ಸಂಸ್ಥೆಯಲ್ಲಿ ಮತ್ತು ವಿಮಾನಯಾನದಲ್ಲಿ ತಮ್ಮ ದಿರಿಸು, ಮೇಕ್ಅಪ್, ಶಿಸ್ತಿನೊಂದಿಗೆ ಉತ್ತಮವಾದ ನಡೆವಳಿಕೆಗಳಿಂದ ಗಮನ ಸೆಳೆದು ಪ್ರಯಾಣಸ್ನೇಹಿ ಎನ್ನಿಸಿಕೊಳ್ಳುವ ಕ್ಯಾಬಿನ್ ಸಿಬ್ಬಂದಿಗೆ ಹೀಗೊಂದು ವಿಚಿತ್ರ ಆದೇಶವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಯು (PIA) ಹೊರಡಿಸಿದೆ. ಕ್ಯಾಬಿನ್ ಸಿಬ್ಬಂದಿಯು ಸೂಕ್ತವಾದ ಒಳಉಡುಪುಗಳನ್ನು ಅಗತ್ಯವಾಗಿ ಧರಿಸಲೇಬೇಕು ಎಂದು ಸಂಸ್ಥೆಯು ಪ್ರಕಟಣೆ ಹೊರಡಿಸಿದೆ. ಕ್ಯಾಬಿನ್ ಸಿಬ್ಬಂದಿಗೆ ಡ್ರೆಸ್ಸಿಂಗ್ ಸೆನ್ಸ್ ಬಹಳ ಮುಖ್ಯ. ಇಲ್ಲವಾದಲ್ಲಿ ಸಂಸ್ಥೆಯ ಬಗ್ಗೆ ಪ್ರಯಾಣಿಕರು ನಕಾರಾತ್ಮಕ ಧೋರಣೆ ಹೊಂದುತ್ತಾರೆ ಎಂದಿದೆ ಪಿಐಎ. ಈ ಆದೇಶವು ವಿಚಿತ್ರ ಮತ್ತು ವಿಲಕ್ಷಣ ಎನ್ನಿಸುತ್ತಿದೆ ನಿಜ.
ಆದರೆ, ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಸಿಬ್ಬಂದಿಗೆ ಸೂಕ್ತವಾದಂಥ ಒಳ ಉಡುಪುಗಳನ್ನು ಧರಿಸುವುದು ಅತ್ಯಗತ್ಯ ಎಂದು ಆದೇಶ ಹೊರಡಿಸಿದೆ. ಹಾಗಾಗಿ ಪಾಕಿಸ್ತಾನ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಾರಾಷ್ಟ್ರೀಯ ಏರ್ ಕ್ಯಾರಿಯರ್ ಈ ಹೊಸ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ವಿಮಾನ ಸಿಬ್ಬಂದಿಯನ್ನು ಕೇಳಿಕೊಂಡಿದೆ. ಈ ಸುದ್ದಿಯನ್ನು ಜಿಯೋ ಸುದ್ದಿ ಸಂಸ್ಥೆಯು ವರದಿ ಮಾಡಿದೆ.
‘ಕೆಲ ಕ್ಯಾಬಿನ್ ಸಿಬ್ಬಂದಿ ಇಂಟರ್‌ಸಿಟಿ ಪ್ರಯಾಣ ಮಾಡುವಾಗ, ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವಾಗ ಮತ್ತು ವಿವಿಧ ಭೇಟಿಗಳ ಸಂದರ್ಭದಲ್ಲಿ ತಮ್ಮಿಚ್ಛೆಯಂತೆ ಉಡುಗೆ ಧರಿಸುತ್ತಾರೆ. ಇಂತಹ ಡ್ರೆಸ್ಸಿಂಗ್ ಸೆನ್ಸ್ ನೋಡುಗರಲ್ಲಿ ಮುಜುಗರ ಉಂಟುಮಾಡುತ್ತದೆ. ಇಷ್ಟೇ ಅಲ್ಲ, ಸಂಸ್ಥೆಯ ಬಗ್ಗೆ ಪ್ರಯಾಣಿಕರಲ್ಲಿ ತಪ್ಪು ಗ್ರಹಿಕೆಗೆ ಈಡುಮಾಡುತ್ತದೆ’ ಎಂದು ಪಿಐಎ ಜನರಲ್ ಮ್ಯಾನೇಜರ್ ಅಮೀರ್ ಬಶೀರ್ ಹೇಳಿದ್ಧಾರೆ.
‘ಪುರುಷರೇ ಆಗಲಿ ಮಹಿಳೆಯರೇ ಆಗಲಿ ಸೂಕ್ತ ಒಳಉಡುಪು ಮತ್ತು ಸರಳವಾದ ಉಡುಪುಗಳನ್ನು ಧರಿಸಬೇಕು. ಈ ಧರಿಸುವಿಕೆ ನಮ್ಮ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ನೈತಿಕತೆಗೆ ಅನುಗುಣವಾಗಿರಬೇಕು. ಈ ಕುರಿತು ಅಧಿಕಾರಿಗಳು ಗಮನಿಸಬೇಕು’ ಎಂದು ಬಶೀರ್ ತಿಳಿಸಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:04 am, Fri, 30 September 22