Viral: ‘ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?’
Romance : 'ನಮ್ಮ ದೇಶದ ರೈಲು ವ್ಯವಸ್ಥೆ ಶೀಘ್ರವೇ ಸುಧಾರಿಸಿ ಮುಂದಿನ ದಿನಗಳಲ್ಲಿ ಯುವಜನತೆಗೆ ಇಂಥ ಅವಕಾಶಗಳು ದಕ್ಕಲಿ' ಎಂದು ಕೆಲ ನೆಟ್ಮಂದಿ ಮನಸಾರೆ ಹಾರೈಸುತ್ತಿದೆ. ಇನ್ನೂ ಕೆಲವರು ಏನೆನ್ನುತ್ತಿದ್ದಾರೆ ಎಂದು ಓದಿ ನೋಡಿ.
Love : ಸುತ್ತಲೂ ಹಸಿರಿರುವ ಒಂದು ರಮ್ಯ ತಾಣ. ಟೀ ತೋಟಗಳ (Tea Estate) ಪಕ್ಕದಲ್ಲಿ ಸಾಗುತ್ತಿರುವ ರೈಲು. ರೈಲಿನ ಬಾಗಿಲ ಹಿಡಿಕೆಗಳನ್ನು ಹಿಡಿದುಕೊಂಡು ಹೊರಬಾಗಿರುವ ಒಬ್ಬ ಯುವತಿ. ಪಾದಗಳ ತುದಿಯ ಆಸರೆಯನ್ನಷ್ಟೇ ಪಡೆದು ಅವಳಿಗೆ ಮುಖ ಮಾಡಿ ಜೋತು ಬಿದ್ದಿರುವ ಸಾಹಸಿ ಯುವಕ. ಈ ಭಂಗಿಯಲ್ಲಿ ಒಬ್ಬರನ್ನೊಬ್ಬರು ಮುದ್ದಿಸುತ್ತಿರುವ ಫೋಟೋ, “ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?” ಎಂಬ ಪ್ರಚೋದನಕಾರಿ ಒಕ್ಕಣೆಯೊಂದಿಗೆ ಟ್ವಿಟರ್ನಲ್ಲಿ ಹರಿದಾಡುತ್ತಿದೆ.
What is stopping you from doing this with your lover? ?? pic.twitter.com/kVDzau575i
ಇದನ್ನೂ ಓದಿ— Reyme (@Reyme_KS) July 1, 2023
ಇದು ನಿಜಕ್ಕೂ ಈ ಮೂರ್ಖ ಜೋಡಿಯ ದುಸ್ಸಾಹಸವೋ ಫೋಟೋಶಾಪ್ ಕೆಲಸವೋ ಯಾರಿಗೂ ಗೊತ್ತಿಲ್ಲ. ಆದರೆ ಇದನ್ನು ನೋಡಿದ ಲಕ್ಷಾಂತರ ಜನ ಹುಚ್ಚೆದ್ದು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. “ನನ್ನ ತಲೆಯಲ್ಲಿ ಕೆಲಸ ಮಾಡುತ್ತಿರುವ ಮಿದುಳಿರುವುದೇ ನನಗೆ ಅಡ್ಡಿ,” “ಮುಂದಿನ ಫ್ರೇಮ್‌ನಲ್ಲಿ ಅಡ್ಡ ಬರುವ ಕರೆಂಟ್ ಕಂಬ,” “ಪಕ್ಕದ ಬೋಗಿಯಲ್ಲಿ ತಂಬಾಕು ತಿಂದು ಬಾಯಿ ಮುಕ್ಕಳಿಸಿ ಕಿಟಕಿಯಿಂದ ಉಗುಳುವ ಅಂಕಲ್‌ಗಳು”, “ಹಳಿಯ ಪಕ್ಕದಲ್ಲಿ ಕಕ್ಕಸ್ ಮಾಡಲು ಕೂತಿರುವ ಹೈಕಳು,” “ರೈಲು ನಿಧಾನವಾಗುವುದನ್ನು ಕಾಯುತ್ತ ಬಾಗಿಲಲ್ಲೇ ಕುಳಿತಿರುವ ಚುರುಮುರಿ ಮಾರುವವನು,” ಹೀಗೆ ತರಹೇವಾರಿ ಕಟಕಿಗಳು ಪುಂಖಾನುಪುಂಖವಾಗಿ ಹರಿದು ಬರುತ್ತಿವೆ.
ಇದನ್ನೂ ಓದಿ : Viral Video: ದ್ವೇಷ ಹರಡುವುದನ್ನೇ ಧ್ಯೇಯ ಎಂದು ಭಾವಿಸಿರುವ ವಾಟ್ಸ್ಯಾಪ್ ಆಂಟೀ ಅಂಕಲ್‌ಗಳು; ರವೀಶ್ ಕುಮಾರ್ ಹೊತ್ತಿಸಿದ ಕಿಡಿ
“ನಮ್ಮ ದೇಶದ ರೈಲು ವ್ಯವಸ್ಥೆ ಶೀಘ್ರವೇ ಸುಧಾರಿಸಿ ಮುಂದಿನ ದಿನಗಳಲ್ಲಿ ಯುವಜನತೆಗೆ ಇಂಥ ಅವಕಾಶಗಳು ದಕ್ಕಲಿ,” ಎಂದೊಬ್ಬರು ಹಾರೈಸಿದ್ದಾರೆ. “ರೈಲ್ವೇ ಮಾರ್ಗದಲ್ಲಿ ಗುಂಡಿಗಳಿರೋದೇ ನನಗೆ ಇಂಥ ಸಾಹಸಕ್ಕೆ ಅಡ್ಡಿ,” ಎಂದು ಉಗಾಂಡಾದ ಒಬ್ಬರು ಅಲ್ಲಿಯ ರೈಲು ವ್ಯವಸ್ಥೆಯ ದುಸ್ಥಿತಿಯನ್ನು ಬಣ್ಣಿಸಿದ್ದಾರೆ. “ಅಯ್ಯೋ ಆ ರೈಲು ನಿಂತಲ್ಲೇ ನಿಂತಿದೆ. ಹುಡುಗಿಯ ಕೂದಲು ಹಾರಾಡುತ್ತಲೇ ಇಲ್ಲ,” ಎಂದೊಬ್ಬರು ತಾಂತ್ರಿಕ ಪ್ರಶ್ನೆಯೆತ್ತಿದ್ದಾರೆ. ಒಟ್ಟಿನಲ್ಲಿ ಈ ದೃಶ್ಯವನ್ನು ನೋಡಿದವರಿಗೆಲ್ಲ ನಾನಾ ಕಾರಣಗಳಿಗೆ ಅದು ಕಚಗುಳಿ ಕೊಟ್ಟಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 7:27 pm, Mon, 3 July 23