Viral Video : ಇನ್ಸ್ಟಾಗ್ರಾಂನ ಮೆಸ್ಸಿ ಮಮ್ಮಾ, ಹ್ಯಾಪ್ಪಿನೆಸ್ ಕ್ರಿಯೇಟರ್ ನಟಿ ಸಮೀರಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಬಗೆಯ ಆಲೋಚನಾ ಕ್ರಮಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇವರ ವಿನೋದಾತ್ಮಕ ರೀಲುಗಳು ಭಾರೀ ಜನಪ್ರಿಯಗೊಳ್ಳುತ್ತಿರುತ್ತವೆ. ಇದೀಗ ಹೊಸ ರೀಲ್ನೊಂದಿಗೆ ನೆಟ್ಟಿಗರನ್ನು ಯೋಚಿಸುವಂತೆ ಮಾಡುತ್ತಿದ್ದಾರೆ. ಜಿಮ್ ಅಮ್ಮ, ಫ್ಯಾಷನ್ ಅಮ್ಮ, ಇನ್ಫ್ಲ್ಯೂಯೆನ್ಸರ್ ಅಮ್ಮ, ಸುಸ್ತಾದ ಅಮ್ಮಾ, ಡೋಂಟ್ ಟಾಕ್ ಟು ಮೀ ಅಮ್ಮ, ಹೀಗೆ ಬಗೆಬಗೆಯ ವೇಷದಲ್ಲಿ ಕಾಣಿಸಿಕೊಂಡಿರುವ ಸಮೀರಾ ನೀವು ಯಾವ ತರಹದ ಮಮ್ಮಾ ಅಥವಾ ಅಮ್ಮ ಎಂದು ಕೇಳಿದ್ದಾರೆ.
ಸುಮಾರು 56,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಕೊನೆಯ ಕ್ಲಿಪ್ಪಿಂಗ್ ಅದ್ಭುತವಾಗಿದೆ ಎಂದಿದ್ಧಾರೆ ಒಬ್ಬರು. ಒಂದು ದಿನ ಟಿಫನ್ ಕಳಿಸಲು ಮರೆಯುವುದು, ಇನ್ನೊಂದು ದಿನ ಪುಸ್ತಕಗಳನ್ನು ಮರೆಯುವುದು, ಇನ್ನೊಂದು ದಿನ ಖಾಲೀ ಬ್ಯಾಗ್ ಕೊಟ್ಟುಕಳಿಸುವುದು ಇಂಥ ಅಮ್ಮ ನಾನು ಎಂದಿದ್ದಾರೆ ಮತ್ತೊಬ್ಬರು.
ನಾನು ಸುಸ್ತಾದ ಅಮ್ಮ. ನನ್ನ ಗುರಿ ಜಿಮ್ ಮಾಮ್ ಆಗುವುದು, ಹಾಗೆಯೇ ಫ್ಯಾಷನ್ ಅಮ್ಮನೂ ಆಗುವುದು, ಆದರೆ ಎಂದೂ ಇನ್ಫ್ಲ್ಯೂಯೆನ್ಸರ್ ಅಮ್ಮನಾಗಲು ಇಷ್ಟಪಡಲಾರೆ ಎಂದಿದ್ದಾರೆ ಮತ್ತೂ ಒಬ್ಬರು. ಸ್ಕೂಲಿಗೆ ಡ್ರಾಪ್, ಪಿಕಪ್ ಮಾಡುವುದೆಲ್ಲ ಅಪ್ಪನ ಕೆಲಸ, ಉಳಿದದ್ದೆಲ್ಲ ನನ್ನ ಕೆಲಸ ಎಂದಿದ್ದಾರೆ ಇನ್ನೂ ಒಬ್ಬರು.
ಅಮ್ಮ ಅಪ್ಪನೆಂದರೆ ಒಂದೇ ಎರಡೇ? ಸಾಕಷ್ಟು ಪಾತ್ರಗಳನ್ನು ಇಂದು ಅಮ್ಮನೂ ಮಾಡಬೇಕಾಗುತ್ತದೆ ಹಾಗೇ ಅಪ್ಪನೂ. ದಿನವೂ ಹೊಸ ಹೊಸ ಸವಾಲುಗಳು ಬಂದೆರಗುತ್ತಿರುತ್ತವೆ ಎಲ್ಲವನ್ನೂ ನಿಭಾಯಿಸುತ್ತ ಕಾಲನೊಂದಿಗೆ ಓಡುತ್ತಲೇ ಇರಬೇಕು. ಆಗಾಗ ಇಂಥ ವಿಡಿಯೋ ನೋಡಿ ಉಸಿರಿಗೆ ಬಲ ತುಂಬಿಕೊಳ್ಳುವುದು. ಸಮಯವಿದ್ದರೆ ಇಂಥ ರೀಲ್ಸ್ ಮಾಡಿ ನಿಟ್ಟುಸಿರು ಬಿಡುವುದು. ಇದು ಇಂದಿನ ಜಮಾನಾ.
ಈ ವಿಡಿಯೋ ನೋಡಿದ ನೀವು ಎಂಥ ಅಮ್ಮ ಅಥವಾ ಅಪ್ಪ ಎಂದು ತಿಳಿಸಬಹುದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:01 pm, Thu, 1 December 22