ಮಾ.19ರ ರಾತ್ರಿ 45 ನಿಮಿಷ ಕೈಕೊಟ್ಟ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಆ್ಯಪ್ಗಳು; ಸಿಂಪಲ್ ಕಾರಣಕೊಟ್ಟು ಸುಮ್ಮನಾದ ಫೇಸ್ಬುಕ್
ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಮೆಸೆಂಜರ್ನೊಂದಿಗೆ ಕೆಲವು ಬಳಕೆದಾರರಲ್ಲಿ ಫೇಸ್ಬುಕ್ ಕೂಡ ಕಾರ್ಯನಿರ್ವಹಿಸಿರಲಿಲ್ಲ. ಇನ್ನು ಒಬ್ಬೊಬ್ಬರಲ್ಲಿ ಒಂದೊಂದು ವಿಧದ ಸಮಸ್ಯೆ ಕಾಣಿಸಿಕೊಂಡಿತ್ತು.

ಮೆಸೇಜಿಂಗ್ ಆ್ಯಪ್ಗಳಾದ ವಾಟ್ಸ್ಆ್ಯಪ್, ಫೇಸ್ಬುಕ್ ಮೆಸೆಂಜರ್ ಗಳು ಶುಕ್ರವಾರ ರಾತ್ರಿ ಸುಮಾರು 45 ನಿಮಿಷ ಕಾರ್ಯನಿಲ್ಲಿಸಿದ್ದವು. ಅಲ್ಲದೆ, ಇನ್ಸ್ಟಾಗ್ರಾಂ ಕೂಡ ಡೌನ್ ಆಗಿತ್ತು. ಇದು ಭಾರತವಷ್ಟೇ ಅಲ್ಲದೆ, ವಿಶ್ವದಾದ್ಯಂತ ಕಾಣಿಸಿಕೊಂಡಿದ್ದ ಸಮಸ್ಯೆಯಾಗಿದ್ದು, ಅನೇಕ ಬಳಕೆದಾರರು ಈ ಬಗ್ಗೆ ರಿಪೋರ್ಟ್ ಕೂಡ ಮಾಡಿದ್ದರು. ರಾತ್ರಿ 10.40ರಿಂದ ವಾಟ್ಸ್ಆ್ಯಪ್, ಫೇಸ್ಬುಕ್ ಮೆಸೆಂಜರ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಸಮಸ್ಯೆ ಶುರುವಾಗಿತ್ತು. ವಾಟ್ಸ್ಆ್ಯಪ್ ಹಾಗೂ ಫೇಸ್ಬುಕ್ ಮೆಸೆಂಜರ್ಗಳಿಂದ ಯಾರಿಗೂ ಸಂದೇಶ ಕಳಿಸಲು ಸಾಧ್ಯವಾಗುತ್ತಿರಲಿಲ್ಲ, ಹಾಗೇ ಯಾರ ಮೆಸೇಜ್ಗಳೂ ರಿಸೀವ್ ಆಗುತ್ತಿರಲಿಲ್ಲ ಎಂದು ಅನೇಕ ಗ್ರಾಹಕರು ದೂರಿದ್ದಾರೆ.
ಈ ಎಲ್ಲ ಆ್ಯಪ್ಗಳೂ ಫೇಸ್ಬುಕ್ ಒಡೆತನದಲ್ಲೇ ಇವೆ. ಇನ್ನು ನಿನ್ನೆ ರಾತ್ರಿ ಆ್ಯಪ್ಗಳು ಸ್ಥಗಿತಗೊಳ್ಳಲು ಸ್ಪಷ್ಟವಾದ ಕಾರಣ ಏನು ಎಂಬುದನ್ನು ಫೇಸ್ಬುಕ್ ತಿಳಿಸಿಲ್ಲ. ಆದರೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಫೇಸ್ಬುಕ್ ವಕ್ತಾರರೊಬ್ಬರು, ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಹಾಗೂ ಮೆಸೆಂಜರ್ ಸೇವೆಗಳಲ್ಲಿ ಅಡಚಣೆಯಾಗಿದ್ದು ನಿಜ. ನಾವದನ್ನು ಸರಿಪಡಿಸಿದ್ದೇವೆ. ಇದರಿಂದ ಬಳಕೆದಾರರಿಗೆ ಆದ ಅನನುಕೂಲತೆಗೆ ಕ್ಷಮೆ ಕೇಳುತ್ತೇವೆ ಎಂದು ತಿಳಿಸಿದ್ದಾರೆ.
ವಿಶ್ವದಾದ್ಯಂತ ಸಮಸ್ಯೆ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಮೆಸೆಂಜರ್ನೊಂದಿಗೆ ಕೆಲವು ಬಳಕೆದಾರರಲ್ಲಿ ಫೇಸ್ಬುಕ್ ಕೂಡ ಕಾರ್ಯನಿರ್ವಹಿಸಿರಲಿಲ್ಲ. ಇನ್ನು ಒಬ್ಬೊಬ್ಬರಲ್ಲಿ ಒಂದೊಂದು ವಿಧದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರಲ್ಲಿ 28,500 ಕ್ಕೂ ಹೆಚ್ಚುInstagram ಬಳಕೆದಾರರು ಹಾಗೂ 34,127ಕ್ಕೂ ಅಧಿಕ ವಾಟ್ಸ್ಆ್ಯಪ್ ಬಳಕೆದಾರರು ತಮಗೆ ಆಗುತ್ತಿರುವ ಅಡಚಣೆಯ ಬಗ್ಗೆ ಕಂಪನಿಗೆ ರಿಪೋರ್ಟ್ ಕೂಡ ಮಾಡಿದ್ದಾರೆ ಎಂದು ಡೌನ್ಡಿಟೆಕ್ಟರ್ವೊಂದು ವರದಿ ಮಾಡಿದೆ.
ಶೇ.49ರಷ್ಟು ವಾಟ್ಸ್ಆ್ಯಪ್ ಬಳಕೆದಾರರಿಗೆ ಆ್ಯಪ್ ಕನೆಕ್ಟ್ ಆಗುತ್ತಿರಲಿಲ್ಲ. ಶೇ.48ರಷ್ಟು ಮಂದಿ ಮೆಸೇಜ್ಗಳನ್ನು ಕಳಿಸಲು, ರಿಸೀವ್ ಮಾಡಲು ಸಾಧ್ಯವಾಗದೆ ಕಷ್ಟಪಟ್ಟರು. ಇನ್ನೂ ಶೇ.2ರಷ್ಟು ಜನರಿಗೆ ಆ್ಯಪ್ ಲಾಗಿನ್ ಆಗಲೇ ಸಾಧ್ಯವಾಗುತ್ತಿರಲಿಲ್ಲ. ಹಾಗೇ ಫೇಸ್ಬುಕ್ ವಿಚಾರಕ್ಕೆ ಬಂದರೆ, ಫೇಸ್ಬುಕ್ ತೆರೆದರೆ ಪೂರ್ತಿ ಖಾಲಿಯಾಗಿ ತೋರುತ್ತಿದೆ ಎಂದು ಶೇ.57ರಷ್ಟು ಜನರು ದೂರಿದ್ದರು. ಶೇ.29ರಷ್ಟು ಗ್ರಾಹಕರು ತಮಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಇನ್ಸ್ಟಾಗ್ರಾಂ ಬಳಕೆದಾರರಲ್ಲಿ ಶೇ.66ರಷ್ಟು ಜನರು, ತಮ್ಮ ಅಕೌಂಟ್ನಲ್ಲಿ ಯಾವುದೇ ಫೋಟೋ, ವಿಡಿಯೋ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಿಪೋರ್ಟ್ ಮಾಡಿದ್ದರು ಎಂದು ಡೌನ್ ಡಿಟೆಕ್ಟರ್ ತಿಳಿಸಿದೆ.
ಹಾಗೆ ನೋಡಿದರೆ, ಈ ಸೋಷಿಯಲ್ ಮೀಡಿಯಾ ಆ್ಯಪ್ಗಳಲ್ಲಿ ಸಮಸ್ಯೆ ಆಗಿದ್ದು, ವಿಶ್ವದಾದ್ಯಂತ ಕಾರ್ಯಾಚರಣೆಯಲ್ಲಿ ಏರುಪೇರಾಗಿದ್ದು ಇದೇ ಮೊದಲ ಬಾರಿ ಅಲ್ಲ. 2020ರ ಡಿಸೆಂಬರ್ನಲ್ಲಿ ಕೂಡ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಂಗಳು ಕೆಲವು ತಾಸುಗಳವರೆಗೆ ಕಾರ್ಯನಿಲ್ಲಿಸಿದ್ದವು.
13 ವರ್ಷದ ಒಳಗಿನ ಮಕ್ಕಳು ಕೂಡ ಇನ್ಸ್ಟಾಗ್ರಾಂ ಖಾತೆ ತೆರೆಯಬಹುದು.. ಫೇಸ್ಬುಕ್ನಿಂದ ಹೊಸ ಆ್ಯಪ್ ಲಾಂಚ್ ಸಾಧ್ಯತೆ
Published On - 12:57 pm, Sat, 20 March 21