ಮಣ್ಣಿನ ಪರೀಕ್ಷೆ ನಡೆಸಲು ಇಲ್ಲಿ ಪ್ರತಿ ಮನೆಗೂ 2 ಒಳ ಉಡುಪುಗಳನ್ನು ಕಳುಹಿಸಿಕೊಡಲಾಗುತ್ತಿದೆಯಂತೆ! ಏನಿದರ ಒಳಗುಟ್ಟು?

ಮಣ್ಣಿನ ಪರೀಕ್ಷೆ ನಡೆಸಲು ಇಲ್ಲಿ ಪ್ರತಿ ಮನೆಗೂ 2 ಒಳ ಉಡುಪುಗಳನ್ನು ಕಳುಹಿಸಿಕೊಡಲಾಗುತ್ತಿದೆಯಂತೆ! ಏನಿದರ ಒಳಗುಟ್ಟು?
ಮಣ್ಣಿನಲ್ಲಿ ಒಳ ಉಡುಪು ಹೂತಿಟ್ಟು ಮಣ್ಣಿನ ಪರೀಕ್ಷೆ ನಡೆಸುವ ಕ್ರಮ

ಸ್ವಿಜರ್​ಲ್ಯಾಂಡ್​ನಲ್ಲಿ ಒಳ ಉಡುಪನ್ನು ಬಳಸಿ ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಅಲ್ಲಿನ ಸರ್ಕಾರ ಮಣ್ಣಿನ ಪರೀಕ್ಷೆ ನಡೆಸುವವರಿಗೆ ಎರಡು ಬಿಳಿ ಬಣ್ಣದ ಒಳ ಉಡುಪುಗಳನ್ನು ಕಳುಹಿಸಿಕೊಡುತ್ತದೆ. ಅದನ್ನು ಜನರು ಮಣ್ಣಿನಲ್ಲಿ ಹೂತಿಟ್ಟು ಪರೀಕ್ಷೆ ನಡೆಸಬೇಕಿದೆ.

Skanda

| Edited By: preethi shettigar

Apr 20, 2021 | 8:27 AM

ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಫಸಲು ಪಡೆಯಲು ಮಣ್ಣಿನ ಫಲವತ್ತತೆ ಎಷ್ಟು ಮುಖ್ಯ ಎಂಬ ಅರಿವಿರುತ್ತದೆ. ಜಮೀನು ಎಷ್ಟೇ ವಿಸ್ತಾರವಾಗಿದ್ದರೂ, ಎಂತಹದ್ದೇ ನಿರಾವರಿ ವ್ಯವಸ್ಥೆ ಇದ್ದರೂ ಕೊನೆಯಲ್ಲಿ ಬೆಳೆಗೆ ಸೂಕ್ತವಾದ ಮಣ್ಣು ಅದಾಗಿದ್ದರೆ ಮಾತ್ರ ಲಾಭದಾಯಕ ಇಳುವರಿ ಪಡೆಯಲು ಸಾಧ್ಯ. ಇದಕ್ಕಾಗಿಯೇ ತಜ್ಞರು, ವಿಜ್ಞಾನಿಗಳು ಈಗಾಗಲೇ ಹಲವು ಬಗೆಯ ಮಣ್ಣು ಪರೀಕ್ಷಾ ವಿಧಾನವನ್ನು ಕಂಡು ಹಿಡಿದಿದ್ದಾರೆ. ಹತ್ತಿರದ ಕೃಷಿ ಕೇಂದ್ರಗಳಿಗೆ ತೆರಳಿದರೆ ಅಲ್ಲಿಯೂ ಮಣ್ಣಿನ ಪರೀಕ್ಷೆ ನಡೆಸಿ ಅದರ ಗುಣಾವಗುಣಗಳನ್ನು ತಿಳಿದುಕೊಳ್ಳಬಹುದು. ಬಹುತೇಕ ಎಲ್ಲಾ ಕಡೆಗಳಲ್ಲೂ ಮಣ್ಣಿನ ಪರೀಕ್ಷೆಗೆ ಹೆಚ್ಚೂಕಡಿಮೆ ಇಂತಹದ್ದೇ ಮಾರ್ಗವನ್ನು ಪಾಲಿಸಲಾಗುತ್ತದೆ. ಆದರೆ, ಸ್ವಿಜರ್​ಲ್ಯಾಂಡ್ ದೇಶದಲ್ಲಿ ಮಾತ್ರ ಮಣ್ಣಿನ ಪರೀಕ್ಷೆಗೆ ವಿಚಿತ್ರ ಮಾದರಿಯೊಂದು ಅನುಸರಿಸಲಾಗುತ್ತಿದ್ದು ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ವಿಪರ್ಯಾಸವೆಂದರೆ ಸ್ವಿಜರ್​ಲ್ಯಾಂಡ್​ನಲ್ಲಿ ಒಳ ಉಡುಪನ್ನು ಬಳಸಿ ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಅಲ್ಲಿನ ಸರ್ಕಾರ ಮಣ್ಣಿನ ಪರೀಕ್ಷೆ ನಡೆಸುವವರಿಗೆ ಎರಡು ಬಿಳಿ ಬಣ್ಣದ ಒಳ ಉಡುಪುಗಳನ್ನು ಕಳುಹಿಸಿಕೊಡುತ್ತದೆ. ಅದನ್ನು ಜನರು ಮಣ್ಣಿನಲ್ಲಿ ಹೂತಿಟ್ಟು ಪರೀಕ್ಷೆ ನಡೆಸಬೇಕಿದೆ. ಈ ವಿಧಾನದ ಮೂಲಕ ಮಣ್ಣಿನ ಪರೀಕ್ಷೆ ನಡೆಸುವುದು ಕೇಳಲು ವಿಚಿತ್ರ ಎಂದೆನಿಸಿದರೂ ಅಲ್ಲಿನ ವ್ಯವಸ್ಥೆ ಇದನ್ನು ಪಾಲಿಸಿಕೊಂಡು ಬರುತ್ತಿದೆ ಎನ್ನುವುದು ಸತ್ಯ. ಈ ಬಗ್ಗೆ ಈಗಾಗಲೇ ದೇಶ ವಿದೇಶಗಳಲ್ಲಿ ಸುದ್ದಿಯಾಗುತ್ತಿದ್ದು ಅನೇಕರು ಹುಬ್ಬೇರಿಸಿದ್ದಾರೆ.

ಆಂಗ್ಲ ಜಾಲತಾಣವೊಂದು ಪ್ರಕಟಿಸಿದ ವರದಿಯ ಪ್ರಕಾರ ಸ್ವಿಜರ್​ಲ್ಯಾಂಡ್​ನಲ್ಲಿ ಈಗಾಗಲೇ ಸುಮಾರು 2,000 ಒಳ ಉಡುಪುಗಳು ಪರೀಕ್ಷಾರ್ಥವಾಗಿ ಮಣ್ಣುಪಾಲಾಗಿವೆ. ಇದನ್ನು ವಿಜ್ಞಾನಿಗಳ ನೇತೃತ್ವದಲ್ಲಿಯೇ ಮಾಡಲಾಗುತ್ತಿದ್ದು, ಸ್ವಿಜರ್​ಲ್ಯಾಂಡ್​ ದೇಶದ ರೈತರು ಮಣ್ಣಿನ ಪರೀಕ್ಷೆಗಾಗಿ ವ್ಯಾಪಕವಾಗಿ ಬಳಸಲಾರಂಭಿಸಿದ್ದಾರೆ. ವರದಿಯ ಪ್ರಕಾರ ಬಿಳಿ ಬಣ್ಣದ ಒಳ ಉಡುಪನ್ನು ಸರ್ಕಾರದ ವತಿಯಿಂದಲೇ ಕಳುಹಿಸಿಕೊಡಲಾಗುತ್ತಿದ್ದು, ಅದನ್ನು ಮಣ್ಣಿನಲ್ಲಿ ಹೂತಿಟ್ಟು ಕೆಲ ಕಾಲದ ಬಳಿಕ ತೆಗೆದು ಮಣ್ಣಿನಲ್ಲಿನ ಸೂಕ್ಷ್ಮಾಣು ಜೀವಿಗಳು ಯಾವ ಪ್ರಮಾಣದಲ್ಲಿ ನಾಶವಾಗಿದೆ ಎಂಬುದನ್ನು ಕಂಡುಹಿಡಿಯಲಾಗುತ್ತಿದೆಯಂತೆ.

ತಜ್ಞರು ಏನೆನ್ನುತ್ತಾರೆ? ಈ ತೆರನಾದ ಒಳ ಉಡುಪಿನ ಪ್ರಯೋಗದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ತಜ್ಞ ಹಾಗೂ ಈ ಸಂಶೋಧನೆಯ ಮುಖ್ಯಸ್ಥ ಮಾರ್ಕೆಲ್ ಹೇಡನ್, ಇಂತಹ ಕೆಲ ಪ್ರಯೋಗಗಳು ಕೆನಡಾ ದೇಶದಲ್ಲಿ ನಡೆದಿದೆಯಾದರೂ ಈ ಪ್ರಮಾಣದಲ್ಲಿ ಆಗಿರಲಿಲ್ಲ. ಇನ್ನು ಕೆಲವೆಡೆ ಟೀ ಬ್ಯಾಗ್ ಬಳಸಿ ಮಣ್ಣಿನ ಪರೀಕ್ಷೆ ನಡೆಸಲಾಗಿದೆಯಾದರೂ ಇದು ವಿಭಿನ್ನ ಪ್ರಯೋಗ. ಇದರಲ್ಲಿಯೂ ಕೆಲ ರೈತರು ಒಳ ಉಡುಪಿನ ಜತೆ ಟೀ ಬ್ಯಾಗ್​ ಹುಗಿದಿಟ್ಟು ಪರಿಶೀಲಿಸುವುದನ್ನು ಮುಂದುವರೆಸಿದ್ದಾರೆ ಎಂದು ತಿಳಿಸಿದ್ದಾರೆ.

ಪರೀಕ್ಷೆ ನಡೆಸುವುದು ಹೇಗೆ? ಎರಡು ಬಿಳಿ ಬಣ್ಣದ ಒಳ ಉಡುಪುಗಳನ್ನೂ ಹೊಲ, ತೋಟ, ಗಾರ್ಡನ್​ಗಳಲ್ಲಿ ಮಣ್ಣಿನಡಿ ಹೂತಿಡಬೇಕು. ಮೊದಲು ಒಂದು ಒಳ ಉಡುಪನ್ನು ಹೊರತೆಗೆದು ಅದರದ್ದೊಂದು ಫೋಟೋ ಕ್ಲಿಕ್ಕಿಸಿ ಇಡಬೇಕು. ಅದಾದ ನಂತರ ಒಂದು ತಿಂಗಳು ಬಿಟ್ಟು ಮಣ್ಣಿನಲ್ಲಿರುವ ಇನ್ನೊಂದು ಒಳ ಉಡುಪನ್ನು ಹೊರತೆಗೆಯಬೇಕು. ಹೀಗೆ ಹೊರತೆಗೆದ ಒಳ ಉಡುಪನ್ನು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಅವಲೋಕಿಸಲಾಗುತ್ತದೆ.

ಡಿಜಿಟಲ್​ ತಂತ್ರಜ್ಞಾನದ ಮೂಲಕ ಪರಿಶೀಲಿಸಿ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಪತ್ತೆಹಚ್ಚಲಾಗುತ್ತದೆ. ಒಂದು ವೇಳೆ ಒಳ ಉಡುಪಿನಲ್ಲಿ ಅತಿ ಹೆಚ್ಚು ತೂತು ಬಿದ್ದು, ಅದು ಹಾಳಾಗುವ ಹಂತದಲ್ಲಿದ್ದರೆ ಆ ಮಣ್ಣಿನಲ್ಲಿ ಅತಿ ಹೆಚ್ಚು ಪೋಷಕಾಂಶ, ಖನಿಜಾಂಶಗಳಿವೆ ಎಂದರ್ಥ. ಒಂದು ವೇಳೆ ತಿಂಗಳುಗಟ್ಟಲೆ ಮಣ್ಣಿನಲ್ಲಿ ಹೂತಿಟ್ಟ ನಂತರವೂ ಒಳ ಉಡುಪಿಗೆ ಏನೂ ಆಗಿಲ್ಲವೆಂದರೆ ಆ ಮಣ್ಣಿಗೆ ಪೋಷಕಾಂಶ ಹಾಗೂ ಖನಿಜಾಂಶಗಳ ಕೊರತೆ ಇದೆ. ಮಣ್ಣಿಗೆ ಸೇರುವ ಅಂಶಗಳನ್ನು ಕರಗಿಸುವ ಶಕ್ತಿ ಕುಂದಿದೆ ಎನ್ನುವುದು ಸ್ಪಷ್ಟ ಎನ್ನುವುದು ತಜ್ಞರ ಅಭಿಪ್ರಾಯ.

ಬಿಳಿ ಬಣ್ಣದ ಒಳ ಉಡುಪು ಏಕೆ? ಮಣ್ಣಿನ ಪರೀಕ್ಷೆ ನಡೆಸಲು ಇದೊಂದು ವಿಚಿತ್ರ ಕ್ರಮವಾಗಿದ್ದು, ಇದರಲ್ಲಿ ಬಿಳಿ ಬಣ್ಣದ ಒಳ ಉಡುಪನ್ನೇ ಏಕೆ ಬಳಸಲಾಗುತ್ತದೆ? ಬೇರೆ ಬಣ್ಣದ ಒಳ ಉಡುಪುಗಳನ್ನು ಬಳಸಿದರೆ ಏನಾಗುತ್ತದೆ? ಎನ್ನುವುದಕ್ಕೆ ಇನ್ನೂ ಸ್ಪಷ್ಟ ಉತ್ತರಗಳು ಸಿಕ್ಕಿಲ್ಲ. ಇದಕ್ಕೂ ಮುನ್ನ ಬಿಳಿ ಬಣ್ಣದ ಟಿಶ್ಯೂ ಪೇಪರ್​, ಟೀ ಬ್ಯಾಗ್ ಇತ್ಯಾದಿಗಳನ್ನು ಬಳಸಲಾಗುತ್ತಿತ್ತು. ಆದರೆ, ಒಳ ಉಡುಪನ್ನು ಬಳಸಲು ಕಾರಣಗಳೇನು? ಇದರ ಹಿಂದಿನ ತರ್ಕಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ವಿಜ್ಞಾನಿಗಳು ಇನ್ನೊಂದು ತಿಂಗಳಲ್ಲಿ ಉತ್ತರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಾವಯವ ಕೃಷಿ ಮೂಲಕ ಸೊಪ್ಪು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ದಾವಣಗೆರೆ ರೈತ; ಸುಡು ಬಿಸಿಲಿನಲ್ಲಿ ಸೊಪ್ಪಿನ ಸಂತೆ 

Harappan Civilization Food Culture: ಹರಪ್ಪ ನಾಗರಿಕತೆ ಕಾಲದ 4000 ವರ್ಷಗಳ ಹಿಂದಿನ ಬಹುಧಾನ್ಯಗಳ ಲಾಡು ಪತ್ತೆ

(Why white underwear is being buried under soil here is the interesting facts of soil testing techniques by scientists know all details)

Follow us on

Related Stories

Most Read Stories

Click on your DTH Provider to Add TV9 Kannada