Viral Video: ಕೆಣಕಿದವರನ್ನು ಅಟ್ಟಾಡಿಸಿ ಹೊಸಕಿಹಾಕಿದ ಆನೆ; ವಿಡಿಯೋ ನೋಡಿ ತಪ್ಪು ಯಾರದ್ದು ನೀವೇ ಹೇಳಿ?

ವಿಡಿಯೋದಲ್ಲಿ ಕಾಣುವಂತೆ ರಸ್ತೆಯಲ್ಲಿ ನೆರೆದಿದ್ದ ಅನೇಕ ಮಂದಿ ಆನೆಗಳನ್ನು ಬೆದರಿಸಲು ಕೂಗಿ, ರಂಪಾಟ ಮಾಡುತ್ತಾ ತೀರಾ ಸನಿಹಕ್ಕೆ ಹೋಗಿ ಕೆಣಕಿದ್ದಾರೆ. ಕೈಯಲ್ಲಿ ಕಲ್ಲು, ಬಣ್ಣ ಬಣ್ಣದ ಬಟ್ಟೆ ಇತ್ಯಾದಿಗಳನ್ನು ಹಿಡಿದು ಅವುಗಳತ್ತ ಬೀಸುತ್ತಾ ಬೆದರಿಸಿದ್ದಾರೆ.

Viral Video: ಕೆಣಕಿದವರನ್ನು ಅಟ್ಟಾಡಿಸಿ ಹೊಸಕಿಹಾಕಿದ ಆನೆ; ವಿಡಿಯೋ ನೋಡಿ ತಪ್ಪು ಯಾರದ್ದು ನೀವೇ ಹೇಳಿ?
ಕೆಣಕಿದವರ ಮೇಲೆ ತಿರುಗಿಬಿದ್ದ ಆನೆ
Follow us
TV9 Web
| Updated By: Skanda

Updated on: Jul 28, 2021 | 3:30 PM

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ಇಂದು, ನಿನ್ನೆಯದಲ್ಲ. ಆದರೆ, ದಿನ ಕಳೆದಂತೆ ಅದು ಉಲ್ಬಣವಾಗುತ್ತಾ ಹೋಗುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಮನುಷ್ಯ ಪ್ರಾಣಿಗಳ ಆವಾಸಸ್ಥಾನಕ್ಕೆ ಕೈ ಹಾಕಿದರೆ, ನೆಲೆ ಕಳೆದುಕೊಂಡ ಪ್ರಾಣಿಗಳು ನಾಡಿಗೆ ಕಾಲಿಡುತ್ತಿವೆ. ಇಂತಹ ಸಂದರ್ಭದಲ್ಲಿ ಮನುಷ್ಯ ಹಾಗೂ ಕಾಡು ಪ್ರಾಣಿಗಳು ಮುಖಾಮುಖಿಯಾಗಿ ಎಷ್ಟೋ ಅವಘಡಗಳು ಸಂಭವಿಸುತ್ತಿವೆ. ಪ್ರಾಣಿಗಳ ದಾಳಿಯಿಂದ ಮನುಷ್ಯನೂ, ಮನುಷ್ಯನ ದಾಳಿಯಿಂದ ಪ್ರಾಣಿಯೂ ಪ್ರಾಣಬಿಟ್ಟ ಅದೆಷ್ಟೋ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ (Viral Video) ಒಂದು ಇಂಥದ್ದೇ ಸಂಘರ್ಷವೊಂದರ ಸಾಕ್ಷಿಯಾಗಿದೆ. ರಸ್ತೆ ದಾಟುತ್ತಿದ್ದ ಆನೆಗಳ (Elephants) ದೊಡ್ಡ ಗುಂಪು ಹಾಗೂ ಅವುಗಳನ್ನು ಕೆಣಕಲೆಂದೇ ಎರಡೂ ಬದಿಯಲ್ಲಿ ನೆರೆದು ಗದ್ದಲವೆಬ್ಬಿಸಿದ ಮನುಷ್ಯರ (Human) ಗುಂಪು ಪ್ರಾಣಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ದುರಂತ ಕತೆಯನ್ನು ಸಾರಿ ಹೇಳುವಂತಿದೆ. ಗಜಪಡೆಯನ್ನು ಕೆಣಕಲು ಹೋದ ಮನುಷ್ಯನನ್ನು ದೈತ್ಯ ಆನೆಯೊಂದು ಹೊಸಕಿ ಹಾಕಿದೆ. ಅಂದಹಾಗೆ, ಈ ವಿಡಿಯೋವನ್ನು ಸಂಪೂರ್ಣ ನೋಡಿದರೆ ತಪ್ಪು ಆನೆಯದ್ದೋ, ಮನುಷ್ಯನದ್ದೋ ಎಂಬ ಪ್ರಶ್ನೆ ಮೂಡದೇ ಇರದು.

ಈ ಘಟನೆ ನಡೆದಿದ್ದು ಎಲ್ಲಿ ಎನ್ನುವುದರ ಬಗ್ಗೆ ಒಂದಷ್ಟು ಗೊಂದಲವಿದೆಯಾದರೂ ಇದು ಕಳೆದೆರೆಡು ದಿನಗಳಿಂದ ಭಾರೀ ವೈರಲ್​ ಆಗಿದೆ. ಹತ್ತಾರು ಆನೆಗಳ ಗುಂಪೊಂದು ರಸ್ತೆ ದಾಟುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮರಿಗಳನ್ನೂ ಒಳಗೊಂಡ ಈ ಗುಂಪು ದಡದಡನೆ ಕಾಡಿನತ್ತ ನುಗ್ಗಿ ಹೋಗುತ್ತಿತ್ತು. ಆದರೆ, ಅವುಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಮನುಷ್ಯರು ಸುಖಾಸುಮ್ಮನೆ ಹತ್ತಿರ ತೆರಳಿ ರೊಚ್ಚಿಗೆಬ್ಬಿಸಿದ್ದಾರೆ.

ವಿಡಿಯೋದಲ್ಲಿ ಕಾಣುವಂತೆ ರಸ್ತೆಯಲ್ಲಿ ನೆರೆದಿದ್ದ ಅನೇಕ ಮಂದಿ ಆನೆಗಳನ್ನು ಬೆದರಿಸಲು ಕೂಗಿ, ರಂಪಾಟ ಮಾಡುತ್ತಾ ತೀರಾ ಸನಿಹಕ್ಕೆ ಹೋಗಿ ಕೆಣಕಿದ್ದಾರೆ. ಕೈಯಲ್ಲಿ ಕಲ್ಲು, ಬಣ್ಣ ಬಣ್ಣದ ಬಟ್ಟೆ ಇತ್ಯಾದಿಗಳನ್ನು ಹಿಡಿದು ಅವುಗಳತ್ತ ಬೀಸುತ್ತಾ ಬೆದರಿಸಿದ್ದಾರೆ. ದೊಡ್ಡ ಗುಂಪಿನಲ್ಲಿ ರಸ್ತೆ ದಾಟುತ್ತಿದ್ದ ಆನೆಗಳ ಪೈಕಿ ಮೊದಲೇ ಕೆಲವೊಂದಷ್ಟು ತಿರುಗಿ ತಮ್ಮ ಪ್ರತಿರೋಧ ತೋರಿಸಿದ್ದವಾದರೂ ಅದಕ್ಕೆ ಜಗ್ಗದ ಜನರು ತಮ್ಮ ತಲೆಹರಟೆ ಮುಂದುವರೆಸಿದ್ದಾರೆ.

ಇನ್ನೇನು ಇಡೀ ಗಜಪಡೆ ಕಾಡಿನತ್ತ ಹೋಯಿತು ಎನ್ನುವಾಗ ಮತ್ತಷ್ಟು ಹತ್ತಿರಕ್ಕೆ ಬಂದ ಜನರನ್ನು ನೋಡಿ ದೊಡ್ಡ ಆನೆಯೊಂದು ತಿರುಗಿಬಿದ್ದಿದೆ. ಜತೆಯಲ್ಲಿ ಮರಿಗಳೂ ಇದ್ದ ಕಾರಣ ಸಿಟ್ಟಾದ ಆನೆ ಕಾಡಿನ ದಾರಿ ಬಿಟ್ಟು ರಸ್ತೆಯಲ್ಲಿದ್ದವರನ್ನು ಅಟ್ಟಾಡಿಸಿದೆ. ಕೂಗಿ, ಗಲಾಟೆ ಮಾಡುತ್ತಿದ್ದವರತ್ತ ಯಾವಾಗ ಆನೆ ನುಗ್ಗಿ ಬಂತೋ ಆಗ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ, ಒಬ್ಬ ವ್ಯಕ್ತಿ ಮಾತ್ರ ಓಡುವ ಬರದಲ್ಲಿ ಆಯತಪ್ಪಿ ಬಿದ್ದಿದ್ದು ಆತನ ಮೇಲೆ ಆನೆ ತನ್ನ ಸಿಟ್ಟು ತೀರಿಸಿಕೊಂಡಿದೆ. ಸೊಂಡಿಲಿನಿಂದ ತಿವಿದು, ಒಮ್ಮೆ ಘೀಳಿಟ್ಟು ಕೋಪ ತೋರಿಸಿದ ಆನೆ ಕಾಲಿನಲ್ಲಿ ಜಾಡಿಸಿ, ತುಳಿದು ನಂತರ ಕಾಡಿನತ್ತ ಹೊರಟಿದೆ. ವಿಡಿಯೋ ಗಮನಿಸಿದರೆ ಆತನ ಜೀವಕ್ಕೆ ಹಾನಿಯಾದಂತೆಯೇ ಕಾಣಿಸುತ್ತದೆಯಾದರೂ ಆ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಅದೇನೇ ಇದ್ದರೂ ಕಾಡಿಗೆ ಹೋಗುತ್ತಿದ್ದ ಆನೆಗಳನ್ನು ಕೆಣಕಿ ಅಪಾಯವನ್ನು ಎಳೆದುಕೊಂಡಿದ್ದು ನಿಜಕ್ಕೂ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಯಾರನ್ನು ದೂರಬೇಕು ನೀವೇ ಆಲೋಚಿಸಿ.

ಇದನ್ನೂ ಓದಿ: ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ 

ಚೀನಾದ ಅಲೆಮಾರಿ ಆನೆಗಳ ವಿಶ್ವ ದಾಖಲೆ ನಡಿಗೆ; ಈ ಗಜಪಡೆಯ ಮಹಾಪ್ರವಾಸ ಎಷ್ಟು ಗಮ್ಮತ್ತಾಗಿದೆ ಗೊತ್ತಾ?

(Wild Elephant charges Humans who disturbed them while crossing road watch the viral video and think about it)