Viral Video: ಹಣ್ಣೆಂದು ಭಾವಿಸಿ ಹೆಲ್ಮೆಟ್ ನುಂಗಿದ ಕಾಡಾನೆ; ಬೈಕ್ ಸವಾರನ ಸ್ಥಿತಿ ಅಯ್ಯೋ ಪಾಪ!
ಹೆಲ್ಮೆಟ್ ಸೊಂಡಿಲಿಗೆ ಸಿಕ್ಕಿದ್ದೇ ತಡ, ಕಲ್ಲಂಗಡಿ ಹಣ್ಣನ್ನು ಎತ್ತಿ ಬಾಯಿಗಿಡುವಂತೆ ಅದನ್ನು ಬಾಯೊಳಗೆ ಇಟ್ಟಿದೆ. ಇದನ್ನೆಲ್ಲಾ ವಿಡಿಯೋ ಮಾಡುತ್ತಿದ್ದ ಬೈಕ್ ಸವಾರ ಅಯ್ಯಯ್ಯೋ, ನನ್ನ ಹೆಲ್ಮೆಟ್ ಹೋಯ್ತು ಎಂದು ಗೋಗರೆಯುತ್ತಿದ್ದರೆ ಆನೆ ಮಾತ್ರ ತನಗೆ ತಿನ್ನಲಿಕ್ಕೇನೋ ಹೊಸಾ ವಸ್ತು ಸಿಕ್ಕಿದೆ ಎಂದು ಭಾವಿಸಿ ಬಾಯಿಯೊಳಗಿಟ್ಟುಕೊಂಡು ತನಗೇನೂ ಗೊತ್ತೇ ಇಲ್ಲವೆಂಬಂತೆ ಅಲ್ಲಿಂದ ಹೊರಟಿದೆ.
ಗುವಾಹಟಿ: ಮನುಷ್ಯ ಹಾಗೂ ಕಾಡುಪ್ರಾಣಿಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಮಾನವ ಅಭಿವೃದ್ಧಿಯ ಹೆಸರಲ್ಲಿ ಕಾಡನ್ನು ನುಂಗುತ್ತಾ ಹೋದಂತೆ ನೆಲೆ ಕಳೆದುಕೊಂಡ ವನ್ಯಮೃಗಗಳು ಆಹಾರ ಅರಸಿ ನಾಡಿನೊಳಗೆ ಪ್ರವೇಶಿಸುತ್ತಿವೆ. ಎಷ್ಟೋ ಬಾರಿ ಈ ಸಂಘರ್ಷ ಮನುಷ್ಯ ಅಥವಾ ಮೃಗ ಇಬ್ಬರ ಪ್ರಾಣಕ್ಕೂ ಅಪಾಯ ಉಂಟುಮಾಡಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ದೈತ್ಯ ಕಾಡಾನೆ ಅಡ್ಡಗಟ್ಟಿ ಪುಡಿ ಮಾಡುವುದು, ಮರಿಗಳ ರಕ್ಷಣೆಗಾಗೆ ಮನುಷ್ಯರನ್ನು ಓಡಿಸುವುದನ್ನೆಲ್ಲಾ ನಾವು ಸಾಧಾರಣವಾಗಿ ನೋಡಿರುತ್ತೇವೆ. ಆದರೆ, ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಕಾಡಾನೆಯೊಂದು ರಸ್ತೆಗೆ ಬಂದು ಅಲ್ಲಿ ನಿಲ್ಲಿಸಿದ್ದ ಬೈಕ್ ತಲಾಶ್ ಮಾಡಿ ಅದರಲ್ಲಿದ್ದ ಸವಾರನ ಹೆಲ್ಮೆಟ್ ನುಂಗಿಬಿಟ್ಟಿದೆ. ಹಣ್ಣೆಂದು ಭಾವಿಸಿ ಆನೆ ಹೆಲ್ಮೆಟ್ ನುಂಗಿರುವ ಘಟನೆ ಗುವಾಹಟಿಯಲ್ಲಿ ನಡೆದಿದ್ದು, ಅದರ ದೃಶ್ಯ ಸವಾರನ ಮೊಬೈಲಲ್ಲಿ ಸೆರೆಯಾಗಿದೆ.
ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಸಮೀಪ ಬೈಕ್ ನಿಲ್ಲಿಸಿದ್ದ ಅದರಲ್ಲೇ ಹೆಲ್ಮೆಟ್ ಸಿಕ್ಕಿಸಿಟ್ಟಿದ್ದ. ಆದರೆ, ಧಿಡೀರನೆ ಅಲ್ಲಿ ಪ್ರತ್ಯಕ್ಷವಾದ ಆನೆ ಕುತೂಹಲದಿಂದ ಬೈಕ್ನತ್ತ ಬಂದಿದೆ. ತನಗೆ ತಿನ್ನಲಿಕ್ಕೇನಾದರೂ ಸಿಗಬಹುದಾ ಎಂದು ಸೊಂಡಿಲಿನಿಂದ ಹುಡುಕುತ್ತಿರುವಾಗ ಹೆಲ್ಮೆಟ್ ಅದಕ್ಕೆ ಸಿಕ್ಕಿದೆ. ಬೈಕ್ ಹ್ಯಾಂಡೆಲ್ನಲ್ಲಿ ನೇತುಹಾಕಿದ್ದ ಹೆಲ್ಮೆಟ್ ಅನ್ನು ನಿಧಾನಕ್ಕೆ ಅಲುಗಾಡಿಸಿದ ಆನೆ, ಅಂತೂ ತನ್ನ ಸೊಂಡಿಲಿನಿಂದ ಜೋಪಾನವಾಗಿ ಅದನ್ನು ತೆಗೆದುಕೊಂಡಿದೆ.
ಹೆಲ್ಮೆಟ್ ಸೊಂಡಿಲಿಗೆ ಸಿಕ್ಕಿದ್ದೇ ತಡ, ಕಲ್ಲಂಗಡಿ ಹಣ್ಣನ್ನು ಎತ್ತಿ ಬಾಯಿಗಿಡುವಂತೆ ಅದನ್ನು ಬಾಯೊಳಗೆ ಇಟ್ಟಿದೆ. ಇದನ್ನೆಲ್ಲಾ ವಿಡಿಯೋ ಮಾಡುತ್ತಿದ್ದ ಬೈಕ್ ಸವಾರ ಅಯ್ಯಯ್ಯೋ, ನನ್ನ ಹೆಲ್ಮೆಟ್ ಹೋಯ್ತು ಎಂದು ಗೋಗರೆಯುತ್ತಿದ್ದರೆ ಆನೆ ಮಾತ್ರ ತನಗೆ ತಿನ್ನಲಿಕ್ಕೇನೋ ಹೊಸಾ ವಸ್ತು ಸಿಕ್ಕಿದೆ ಎಂದು ಭಾವಿಸಿ ಬಾಯಿಯೊಳಗಿಟ್ಟುಕೊಂಡು ತನಗೇನೂ ಗೊತ್ತೇ ಇಲ್ಲವೆಂಬಂತೆ ಅಲ್ಲಿಂದ ಹೊರಟಿದೆ.
ಈ ವಿಡಿಯೋ ನೋಡಿದ ಹಲವರು ಬೈಕ್ ಸವಾರನ ಅವಸ್ಥೆಗೆ ನಕ್ಕಿದ್ದರೆ ಇನ್ನು ಕೆಲವರು ಆನೆಯನ್ನು ಕಂಡು ಅಯ್ಯೋ ಪಾಪ ಎಂದಿದ್ದಾರೆ. ಕಾಡಾನೆಗೆ ಹೊಟ್ಟೆ ಹಸಿದು ನಾಡಿನೆಡೆಗೆ ಬಂದಿತ್ತೋ, ಏನೋ. ಹೆಲ್ಮೆಟ್ ಅನ್ನು ಕಲ್ಲಂಗಡಿ ಎಂದುಕೊಂಡು ತಿಂದಿರಬೇಕು. ಕಾಡುಪ್ರಾಣಿಗಳ ಹೊಟ್ಟೆಗೆ ಈ ರೀತಿಯ ವಸ್ತುಗಳು ಸೇರಿದರೆ ಯಾರು ಹೊಣೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ಆನೆ ಹೆಲ್ಮೆಟ್ ನುಂಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಜನರು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ