Cheating in Relationship : ಪ್ರೇಮ ಸಂಬಂಧದಲ್ಲಿ ಮೋಸ ಹೋಗುವುದು, ಬ್ರೇಕ್ಅಪ್ಗೆ ಒಳಗಾಗುವುದು ಅನೇಕ ಜನರ ಮನಸ್ಸಿನ ಮೇಲೆ ಆಳಗಾಯ ಮಾಡುತ್ತದೆ ನಿಜ. ಬ್ರೇಕ್ ಅಪ್ನ ನಂತರ ಕೆಲವರು ಮೌನವಾಗಿದ್ದುಬಿಡುತ್ತಾರೆ. ಇನ್ನೂ ಕೆಲವರು ಅದರಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಮತ್ತೂ ಕೆಲವರು ಇದನ್ನು ಬೇರೊಂದು ಹಂತದಲ್ಲಿ ತಮಗಾದ ನೋವನ್ನು ವ್ಯಕ್ತಪಡಿಸಲು ನೋಡುತ್ತಾರೆ. ಡೈಲಿ ಮೇಲ್ನಲ್ಲಿ ಪ್ರಕಟವಾದ ವರದಿಯಲ್ಲಿ, ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ‘ನೀಚ’ ಕೃತ್ಯವನ್ನು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಬಹಿರಂಗಪಡಿಸಿದ್ದಾಳೆ. ಇದು ತಮಾಷೆಗಾಗಿ ಮಾಡಿದ್ದಲ್ಲ. ಜೆನ್ನಿ ನೀಡಿದ ಈ ಜಾಹೀರಾತು Mackay and Whitsunday Life ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಜಾಹಿರಾತಿನ ಒಕ್ಕಣೆಯನ್ನು ಓದಿ; ‘ಆತ್ಮೀಯ ಸ್ಟೀವ್, ನೀನು ಅವಳೊಂದಿಗೆ ಖುಷಿಯಿಂದ ಇದ್ದೀಯೆಂದು ಭಾವಿಸುತ್ತೇನೆ. ಈಗ ನೋಡು ನೀನು ಎಂಥ ಮೋಸಗಾರ, ಕೆಟ್ಟವ ಎನ್ನುವುದು ಇಡೀ ಊರಿಗೇ ತಿಳಿಯುತ್ತದೆ. ವಿ.ಸೂ – ಈ ಜಾಹೀರಾತನ್ನು ನಿನ್ನ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ನೀಡಿದ್ದೇನೆ.’
Mackay and Whitsunday Life ಪತ್ರಿಕೆಯು ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ, ‘ಮ್ಯಾಕೆ ಲೈಫ್‌ನ 4ನೇ ಪುಟದಲ್ಲಿ ಬಂದ ಈ ಜಾಹೀರಾತಿನ ಕುರಿತಾಗಿ ಬರುತ್ತಿರುವ ಸಂದೇಶಗಳಿಗೆ ಉತ್ತರಿಸಲಾಗದಷ್ಟು ಪ್ರಶ್ನೆಗಳಿಂದ ನಾವು ಮುಳುಗಿ ಹೋಗುತ್ತಿದ್ದೇವೆ, ಹಾಗಾಗಿ ಇಲ್ಲಿಯೇ ಆ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇವೆ; ಸ್ಟೀವ್ ಯಾರೆಂದು ನಮಗೆ ಗೊತ್ತಿಲ್ಲ. ಆದರೆ ಆತ ಕೆಟ್ಟ ವ್ಯಕ್ತಿಯಂತೂ ಹೌದು. ಅಲ್ಲದೆ ಜೆನ್ನಿಯ ವಿಷಯವಾಗಿ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾರೆವು.’ ಈ ಪೋಸ್ಟ್ ಇದೀಗ ವೈರಲ್ ಆಗಿದ್ದು, 4,000 ಲೈಕ್ಸ್, 2,500 ಪ್ರತಿಕ್ರಿಯೆ, 1,400 ಶೇರ್ ಆಗಿದೆ.
ನೆಟ್ಟಿಗರೊಬ್ಬರು, ‘ನಾನು ಜೆನ್ನಿಯ ಪರವಾಗಿ ಇದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ಯಾಕೆ ನೀವು ಕ್ರೆಡಿಟ್ ಕಾರ್ಡ್ ಗೆ ಚಾರ್ಜ್ ಮಾಡಿಲ್ಲ. ಸಾರ್ವಜನಿಕರಿಗಾಗಿ ಉಚಿತ ಸೇವೆ ನೀಡುತ್ತಿದ್ದೀರಾ?’ ಎಂದು ಪತ್ರಿಕೆಯವರಿಗೆ ಇನ್ನೊಬ್ಬ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಮತ್ತಷ್ಟು ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:47 pm, Fri, 12 August 22