ಇತ್ತೀಚೆಗಿನ ದಿನಗಳಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿರುವ ಕಾರಣ ಆರೋಗ್ಯ ಕಾಪಾಡುವ ಸಲುವಾಗಿ ಯೋಗಾಸನದ ಮೊರೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಯೋಗವು ದೇಹವನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಆರೋಗ್ಯಕರವಾಗಿಸುತ್ತದೆ. ಹೀಗಾಗಿ ದಿನನಿತ್ಯ ಯೋಗ ಮಾಡುವುದರಿಂದ ಫಿಟ್ ಆಗಿರಲು ಸಾಧ್ಯ. ನೀವೇನಾದರೂ ಯೋಗ ಮಾಡಿ ದೇಹವನ್ನು ಫಿಟ್ ಆಗಿಡಲು ಬಯಸಿದರೆ ಇಂತಹ ಯೋಗಾಸನವನ್ನು ಎಂದಿಗೂ ಪ್ರಯತ್ನಿಸಲೇಬೇಡಿ. ಇದೀಗ ವೈರಲ್ ಆಗಿರುವ ಯುವತಿಯೂ ವಿಭಿನ್ನವಾದ ಯೋಗಾಸನಕ್ಕೆ ಕೈ ಹಾಕಿದ್ದು ಅದುವೇ ಸ್ನೇಕ್ ಯೋಗಾಸನ.
ಸ್ನೇಕ್ ಯೋಗಾಸನದಲ್ಲಿ ನಿಜ ಹಾವನ್ನೇ ದೇಹಕ್ಕೆ ಸುತ್ತಿಕೊಂಡು, ಕುತ್ತಿಗೆ ಮೇಲೆ, ದೇಹದ ಮೇಲೆ ಬಿಟ್ಟುಕೊಂಡಿದ್ದಾಳೆ. ಯುವತಿಯ ಈ ಯೋಗಾಸನವನ್ನು ಕಂಡು ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ. ಕಂಟೆಂಟ್ ಕ್ರಿಯೆಟರ್ ಆಗಿರುವ ಝೆನ್ ಝಾಂಗ್ ಎನ್ನುವ ಯುವತಿಯೂ ಈ ಯೋಗಾಸನವನ್ನು ಮಾಡಿದ್ದಾಳೆ. ಈ ವಿಡಿಯೋವನ್ನು ಝೆನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ‘ಇದು ಹಾವಿನ ಆಸನ ಯೋಗ ಮಾಡುವ ಏಕೈಕ ಸ್ಥಳವಾಗಿದೆ. ಇದು ಎಂತಹ ವಿಶಿಷ್ಟ ಅನುಭವ’ ಎಂದು ಬರೆದುಕೊಂಡಿದ್ದಾಳೆ.
ಅದಲ್ಲದೇ, ಈ ವಿಡಿಯೋದಲ್ಲಿ ಯೋಗ ಕೇಂದ್ರಕ್ಕೆ ತೆರಳಿದ ವೇಳೆ ಈ ಯುವತಿಗೆ ಹೊಸ ಯೋಗಾಸನವನ್ನು ಹೇಳಿಕೊಡಲಾಗಿದೆ. ಈ ವಿಡಿಯೋದಲ್ಲಿ ಯೋಗ ಕೇಂದ್ರಕ್ಕೆ ತೆರಳಿದ ಝೆನ್ ಯಾಂಗ್ ಬಳಿಕ ಯೋಗಾ ಟೀಚರ್, ಒಂದು ಕಲ್ಲನ್ನು ಆರಿಸುವಂತೆ ಸೂಚಿಸಿದ್ದು, ಕಲ್ಲು ಆರಿಸಿ ನೀಡಿದ್ದಾರೆ. ಈ ಕಲ್ಲನ್ನು ಯೋಗ ಕೇಂದ್ರದಲ್ಲಿ ಇಡಲಾಗಿದ್ದು ಆ ಬಳಿಕ ಸ್ನೇಕ್ ಯೋಗಾಸನ ಆರಂಭವಾಗಿರುವುದನ್ನು ಕಾಣಬಹುದು.
ಇದನ್ನೂ ಓದಿ: ಮಟನ್ ಊಟ ಸರಿಯಾಗಿ ಬಡಿಸಿಲ್ಲವೆಂದು ರಣರಂಗವಾಯ್ತು ಮದುವೆ ಮನೆ
ಈ ವಿಡಿಯೋದಲ್ಲಿ ಯಾವ ಆಸನವನ್ನು ಮಾಡಿದರೂ ದೇಹದಲ್ಲಿ ಹಾವು ಇರಲೇಬೇಕು. ಝೆನ್ ಕೂಡ ಹೆಬ್ಬಾವು ಹಿಡಿದುಕೊಂಡು ಯೋಗಾಸನ ಮಾಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು ಈ ವಿಡಿಯೋ ಈಗಾಗಲೇ ಒಂಬತ್ತು ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ. ನೆಟ್ಟಿಗರೊಬ್ಬರು ‘ಯೋಗದ ಹೆಸರಿನಲ್ಲಿ ಈ ರೀತಿ ಮೋಸ ಮಾಡಬೇಡಿ. ಯೋಗದಲ್ಲಿ ಈ ರೀತಿ ಇಲ್ಲ. ಇದು ವಂಚಿಸಲು ಬಳಸುತ್ತಿರುವ ದಾರಿ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಹಾವು ಸೇರಿದಂತೆ ಯಾವುದೇ ಪ್ರಾಣಿಗಳನ್ನು ಈ ರೀತಿ ಹಿಂಸಿಸುವುದು ಸರಿಯಲ್ಲ, ಇದು ಕಾನೂನು ಬಾಹಿರ’ ಎಂದಿದ್ದಾರೆ.