ಊಟ ಹಾಕಿದ ಮಹಾತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಮನೆಗೆ ಬಂದು ಅಪ್ಪುಗೆ ನೀಡಿದ ವಾನರ: ಭಾವುಕ ವಿಡಿಯೋ ಇಲ್ಲಿದೆ

| Updated By: Skanda

Updated on: Jul 07, 2021 | 7:22 AM

ವೃದ್ಧೆಗೆ ಅನಾರೋಗ್ಯ ಹೆಚ್ಚಾಗಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂದ ಕಾರಣ ಆಕೆ ಕೋತಿಗೆ ಊಟ ಹಾಕಲು ಹೊರಗೆ ಹೋಗುವುದು ಸಾಧ್ಯವಾಗಿಲ್ಲ. ಇತ್ತ ನಿತ್ಯವೂ ಊಟ ಕೊಡುತ್ತಿದ್ದ ವೃದ್ಧೆ ಕಾಣಿಸದಾದಾಗ ಕೋತಿಗೂ ಆಕೆಯ ಅನುಪಸ್ಥಿತಿ ಕಾಡಲಾರಂಭಿಸಿದೆ. ನಂತರ ವೃದ್ಧೆಯ ಮನೆ ಒಳಗೇ ಬಂದ ವಾನರ ಆಕೆ ಮಲಗಿದ್ದ ಮಂಚದ ಬಳಿ ಹೋಗಿ, ಆಕೆಯ ಪಕ್ಕದಲ್ಲೇ ಕುಳಿತು ತಲೆ ನೇವರಿಸಿ, ಮುದ್ದಾಡಿದೆ.

ಊಟ ಹಾಕಿದ ಮಹಾತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಮನೆಗೆ ಬಂದು ಅಪ್ಪುಗೆ ನೀಡಿದ ವಾನರ: ಭಾವುಕ ವಿಡಿಯೋ ಇಲ್ಲಿದೆ
ವೃದ್ಧೆಯನ್ನು ಅಪ್ಪಿ, ಮುದ್ದಾಡಿದ ಕೋತಿ
Follow us on

ಪ್ರಾಣಿಗಳಿಗೆ ಮನುಷ್ಯರ ಭಾಷೆಯನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಬಾರದೇ ಇದ್ದರೂ ಅವುಗಳು ತೋರುವ ಪ್ರೀತಿ ಅದಕ್ಕೂ ಮಿಗಿಲಾದದ್ದು. ತಮಗೆ ಅನ್ನ ಹಾಕಿದವರನ್ನು, ಆಶ್ರಯ ನೀಡಿದವರನ್ನು ಕೊನೆಯ ತನಕವೂ ನೆನಪಿಟ್ಟುಕೊಳ್ಳುವ ಅವುಗಳ ಪ್ರೀತಿಗೆ ಸಾಟಿಯಿಲ್ಲ. ಎಷ್ಟೋ ಕಡೆ ಹುಲಿ, ಸಿಂಹಗಳಂತಹ ಪ್ರಾಣಿಗಳು ಕೂಡ ಅವುಗಳಿಗೆ ಚಿಕ್ಕಂದಿನಲ್ಲಿ ಊಟ ಹಾಕಿದವರನ್ನು ಅಥವಾ ಯಾವುದೋ ಅಪಾಯದಿಂದ ಕಾಪಾಡಿ ಸಲಹಿದವರನ್ನು ಮುದ್ದಾಡುವ ದೃಶ್ಯಗಳನ್ನು ನೋಡಿರುತ್ತೇವೆ. ಅಂತೆಯೇ ಇತ್ತೀಚೆಗೆ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ ಕೋತಿಯೊಂದು (ಲಂಗೂರ್) ತನಗೆ ಉಣಬಡಿಸುತ್ತಿದ್ದ ವೃದ್ಧೆಯೊಬ್ಬರು ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಮನೆಯ ಒಳಗೇ ಬಂದು ಮುದ್ದಾಡುವ ದೃಶ್ಯ ಎಲ್ಲರ ಮನಸ್ಸು ಗೆದ್ದಿದೆ. ಮೂಕಪ್ರಾಣಿ ತನ್ನ ಭಾವನೆಯನ್ನು ವ್ಯಕ್ತಪಡಿಸುವ ಪರಿಗೆ ನೆಟ್ಟಿಗರೇ ಮೂಕವಿಸ್ಮಿತರಾಗಿದ್ದಾರೆ.

ಯಾರಿಗಾದರೂ ತಮಾಷೆ ಮಾಡುವಾಗ, ರೇಗುವಾಗ ಕೋತಿ ಥರ ಆಡಬೇಡ, ಇಲ್ಲೇನು ಕೋತಿ ಕುಣೀತಿದ್ಯಾ ಎಂದೆಲ್ಲಾ ಹೇಳುವುದು ತೀರಾ ಸಾಮಾನ್ಯ. ಮಂಗನಿಂದ ಮಾನವ ಎಂಬ ಮಾತಿದ್ದರೂ ಮನುಷ್ಯರ ಪಾಲಿಗೆ ಕೋತಿಯೆಂದರೆ ಒಂದು ಚೇಷ್ಟೆಯ ಪ್ರಾಣಿ. ಕೋತಿ ಆಂಜನೇಯನ ಅವತಾರ, ದೇವರು ಎಂಬ ನಂಬಿಕೆಯಿದ್ದರೂ ಅವು ತುಸು ಹೆಚ್ಚೇ ತುಂಟಾಟ ಮಾಡುವುದರಿಂದ ಅವುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ, ಇಲ್ಲೊಬ್ಬರು ವೃದ್ಧೆ ಮಾತ್ರ ಕೋತಿಯೊಂದಕ್ಕೆ ನಿತ್ಯವೂ ಊಟ ಹಾಕಿ ತನ್ನ ಮನೆ ಮಗನಂತೆಯೇ ಪ್ರೀತಿ, ಕಾಳಜಿ ತೋರಿಸಿದ್ದಾರೆ. ಅದಕ್ಕೆ ಪ್ರತಿಫಲವೆಂಬಂತೆ ಕೋತಿಯೂ ಆಕೆಯನ್ನು ಅಷ್ಟೇ ಹಚ್ಚಿಕೊಂಡಿದೆ.

ವೃದ್ಧೆಗೆ ಅನಾರೋಗ್ಯ ಹೆಚ್ಚಾಗಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂದ ಕಾರಣ ಆಕೆ ಕೋತಿಗೆ ಊಟ ಹಾಕಲು ಹೊರಗೆ ಹೋಗುವುದು ಸಾಧ್ಯವಾಗಿಲ್ಲ. ಇತ್ತ ನಿತ್ಯವೂ ಊಟ ಕೊಡುತ್ತಿದ್ದ ವೃದ್ಧೆ ಕಾಣಿಸದಾದಾಗ ಕೋತಿಗೂ ಆಕೆಯ ಅನುಪಸ್ಥಿತಿ ಕಾಡಲಾರಂಭಿಸಿದೆ. ನಂತರ ವೃದ್ಧೆಯ ಮನೆ ಒಳಗೇ ಬಂದ ವಾನರ ಆಕೆ ಮಲಗಿದ್ದ ಮಂಚದ ಬಳಿ ಹೋಗಿ, ಆಕೆಯ ಪಕ್ಕದಲ್ಲೇ ಕುಳಿತು ತಲೆ ನೇವರಿಸಿ, ಮುದ್ದಾಡಿದೆ. ಹುಷಾರಿಲ್ಲದೇ ಮಲಗಿದ ಆಕೆಯನ್ನು ಕೋತಿ ಒತ್ತಿ ಹಿಡಿದು ಮುದ್ದಾಡಿದ ಪರಿಗೆ ಎಲ್ಲರೂ ಮನಸೋತಿದ್ದಾರೆ.

ಈ ಅಪರೂಪದ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಯುಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದೆ. ನಂತರ ಅಲ್ಲಿಂದ ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹರಿದಾಡಿದ ವಿಡಿಯೋ ಭಾರೀ ವೈರಲ್ ಆಗಿದೆ. ಇದನ್ನು ನೋಡಿದ ಅನೇಕರು ಗುಣದಲ್ಲಿ ಮನುಷ್ಯನಿಗಿಂತ ಮೂಕ ಪ್ರಾಣಿಗಳೇ ಶ್ರೇಷ್ಠ ಎನ್ನುವುದು ಸುಳ್ಳಲ್ಲ. ಕೃತಜ್ಞತೆಯನ್ನೇ ಮರೆತು ಎಲ್ಲರೂ ಕೃತಘ್ನರಾಗುತ್ತಿರುವ ಕಾಲದಲ್ಲಿ ಈ ಕೋತಿಯ ನಡೆ ನಮಗೆ ಪಾಠವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

(Woman who feed langur falls sick primate visited her home and hugs her video goes viral)

ಇದನ್ನೂ ಓದಿ:
ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ; ನಾಯಿ, ಕೋತಿಗಳಿಗೆ ನಿತ್ಯ ಆಹಾರ ನೀಡಿ ಪೋಷಣೆ 

Viral Video: ಕೋತಿ ತರಕಾರಿ ಕತ್ತರಿಸುವ ಚೆಂದ..; ಮಹಿಳೆಗೆ ಸಹಾಯ ಮಾಡುವ ಮಂಗಕ್ಕೆ ಮನಸೋತ ನೆಟ್ಟಿಗರು !