World Milk Day 2022: ಚಹಾ ಕಾಫಿಗೂ ಹಾಲು ಬೇಡವೆನ್ನುತ್ತಿರುವುದು ಯಾಕೆ?

|

Updated on: Jun 01, 2022 | 4:48 PM

Milk : ಹಾಲು ಅಮೃತ ಎಂಬ ಮಾತನ್ನು ಕೇಳಿದಂತೆ ನಾವು ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಮಾತನ್ನೂ ಕೇಳಿದ್ದೇವೆ. ಇಂದು ವಿಶ್ವ ಹಾಲಿನ ದಿನ ಎಂದು ಆಚರಿಸಲ್ಪಡುತ್ತಿದೆ. ಈ ಮೇಲಿನ ಎರಡೂ ನಾಣ್ಣುಡಿಗಳ ಹಿನ್ನೆಲೆಯಲ್ಲಿ ಈ ದಿನವನ್ನು ನೋಡುವ ಪ್ರಯತ್ನ ಇಲ್ಲಿದೆ.

World Milk Day 2022: ಚಹಾ ಕಾಫಿಗೂ ಹಾಲು ಬೇಡವೆನ್ನುತ್ತಿರುವುದು ಯಾಕೆ?
ಲೇಖಕಿ ನೂತನ ದೋಶೆಟ್ಟಿ
Follow us on

World Milk Day 2022: 1980ರ ದಶಕದ ಕೊನೆಯ ಭಾಗದಲ್ಲಿ ಕರ್ನಾಟಕದ ಕೆಲ ಪ್ರಮುಖ ನಗರಗಳಲ್ಲಿ ಪ್ಯಾಕೆಟ್ ಹಾಲು ಎಂಬ ಕೌತುಕ ಅವತಾರ ತಾಳಿತು. ಅದುವರೆಗೂ ಹಾಲೆಂದರೆ ತಾಯಿಯ ಎದೆ ಹಾಲು, ಆಕಳು, ಎಮ್ಮೆಯ ಹಾಲು, ಆಡಿನ ಹಾಲು ಇಷ್ಟು ಪ್ರಕಾರದ ಹಾಲುಗಳು ಮಾತ್ರ ಪರಿಚಿತವಾಗಿದ್ದವು. ಇವುಗಳಲ್ಲೂ ಬಹುಪಾಲು ಜನರಿಗೆ ಆಡಿನ ಹಾಲು ಕೇಳಿ ಮಾತ್ರ ಗೊತ್ತಿತ್ತು. ಸಣ್ಣ ಪಟ್ಟಣಗಳಲ್ಲೂ ಆಗ ಬಹುತೇಕರ ಮನೆಯಲ್ಲಿ ದನಕರುಗಳು ಇರುತ್ತಿದ್ದವು. ಮನೆಗೆ ಸಾಕಾಗುವಷ್ಟು ಹಾಲು-ಹೈನ ಇಟ್ಟುಕೊಂಡು ಉಳಿದದ್ದನ್ನು ಅಕ್ಕ-ಪಕ್ಕದ ವರ್ತನೆ ಮನೆಗಳಿಗೆ ಮಾರಾಟ ಮಾಡುವುದು ಸಮುದಾಯ ಮಟ್ಟದ. ಪುಟ್ಟ ಹಾಲು ವಿತರಣಾ ವ್ಯವಸ್ಥೆಯಾಗಿತ್ತು. ಅಲ್ಲಿ ಬೆಣ್ಣೆ, ಮೊಸರು, ತುಪ್ಪ ಮೊದಲಾದ ಹಾಲಿನ ಉಪ ಉತ್ಪನ್ನಗಳೂ ಮಾರಾಟವಾಗುತ್ತಿದ್ದವು.
ನೂತನ ದೋಶೆಟ್ಟಿ (Nutana Doshetty)

ಬರುಬರುತ್ತ ಪ್ಯಾಕೆಟ್ ಹಾಲಿನ ಕೇಂದ್ರಗಳು ಸಣ್ಣ ಪಟ್ಟಣಗಳಲ್ಲಿ ಕಾಣಿಸಿಕೊಂಡವು. ಹಳ್ಳಿಹಳ್ಳಿಗಳಲ್ಲಿ ಹುಟ್ಟಿದ ಕ್ಷೀರ ಕೇಂದ್ರಗಳಲ್ಲಿ ಹಾಲಿನ ಸಂಗ್ರಹವಾಗಿ ಅದು. ಸಂಸ್ಕರಣೆ ಹಾಗೂ ವಿತರಣೆ ಘಟಕಗಳಿಗೆ ರವಾನೆಯಾಗಲು ಆರಂಭವಾಯಿತು. ಹೈನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆಯಿತು. ಆ ನಂತರದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಪ್ಯಾಕೆಟ್ ರೂಪದಲ್ಲಿ ಹಳ್ಳಿಗಳಿಂದ ಮೊದಲ್ಗೊಂಡು, ದೇಶವ್ಯಾಪಿಯಾದವು. ಇದರಿಂದ ಇದುವರೆಗೂ ಹಾಲನ್ನು ಅಮೃತ ಎಂದು ನೋಡುತ್ತಿದ್ದ ಕಣ್ಣುಗಳಲ್ಲಿ ವ್ಯಾಪಾರಿ ದೃಷ್ಟಿ ಮೊಳೆಯಿತು. ಕರ್ನಾಟಕದಲ್ಲಿ ಕೆಎಮ್ಎಫ್ ನ ನಂದಿನಿ ಹಾಲು ಮನೆ ಮಾತಾಯಿತು. 1988-90ರ ಹೊತ್ತಿಗೆ 25 ಪೈಸೆಗೆ ಅರ್ಧ ಲೀಟರ್ ಇದ್ದ ಹಾಲು ಈಗ 19 ರೂಪಾಯಿಗಳಾಗಿದೆ. ಅದರೊಂದಿಗೆ ವಿವಿಧ ಬಣ್ಣಗಳ ಪ್ಯಾಕೆಟ್ಟುಗಳಲ್ಲಿ ಬರುವ ಬೇರೆ ಬೇರೆ ಬಣ್ಣ ಹಾಗೂ ಗುಣಮಟ್ಟದ ಹಾಲು ನಂದಿನಿಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ : World Milk Day 2022: ನಮ್ಮ ಅವ್ವನಂತೂ ಆಕಳ ಮೊಲೆಯಿಂದ ನೇರವಾಗೇ ಹಾಲು ಕುಡಿದವಳು!

ಇದನ್ನೂ ಓದಿ
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
National Wine Day: ಮೈಲ್ಸ್‌ ವೈನ್‌ ಮಾಯಾ ವೈನ್‌ ಮತ್ತು ಕಾರೇಹಣ್ಣಿನ ಮಧು ವೈಎನ್
ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ? ಕೆಎಂಎಫ್ ಅಧ್ಯಕ್ಷರು ಸೇರಿ ಮೂವರಿಗೆ ಲೀಗಲ್ ನೋಟಿಸ್ ಜಾರಿ
World Milk Day 2021 ವಿಶ್ವ ಹಾಲು ದಿನ.. ಈ ದಿನದ ಮಹತ್ವ ನಿಮಗೆ ಗೊತ್ತೆ?

ಹಾಲಿನ ಉದ್ಯಮ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಾಗ ಗುಜರಾತಿನ ಅಮುಲ್ ಅನ್ನು ನೆನೆಸಿಕೊಳ್ಳಲೇಬೇಕು. ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ ಅಮುಲ್ ಇಂದಿನ ವಿರಾಟ್ ರೂಪದ ಹೈನು ಉದ್ಯಮಕ್ಕೆ ನಾಂದಿ ಹಾಡಿತು. ಭಾರತದಲ್ಲಿ ಇದು ಬಿಳಿ ಕ್ರಾಂತಿ ( ವೈಟ್ ರೆವೊಲ್ಯೂಷನ್) ಅಥವಾ ಕ್ಷೀರ ಕ್ರಾಂತಿ ಎಂದೇ ಹೆಸರಾದದ್ದು ಈಗ ಇತಿಹಾಸ. ಆ ನಂತರದಲ್ಲಿ ಹಾಲಿನ ಉದ್ಯಮ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ನುಡಿಗಟ್ಟಿಗೆ ಸಾಕ್ಷಿಯಾಯಿತು. ಹಾಲಿಗೆ ಯೂರಿಯಾ ಬೆರೆಸಿ ಹಾಲಿನಂತೆ ಕಾಣುವ ಬಿಳಿಯ ದ್ರವವನ್ನು ತಯಾರು ಮಾಡಿ ಮಾರಾಟ ಮಾಡುತ್ತಾರೆ ಎಂಬ ಗುಲ್ಲು ಕೆಲ ವರ್ಷಗಳ ಹಿಂದೆ ಭಯ ಹುಟ್ಟಿಸಿದರೂ ಹಾಲೆಂಬ ಹಾಲಾಹಲ ಮಾರುಕಟ್ಟೆಗೆ ಬಂದು ಬೀಳುತ್ತಲೇ ಇದೆ. ಅದರಲ್ಲೂ ರಕ್ಕಸ ಬಾಯಿಯ ಶಹರಗಳ ಹೊಟ್ಟೆ ತುಂಬಲು ಯಾವ ಯಾವ ರೂಪದಲ್ಲಿ ಹಾಲು ಬಂದು ಬೀಳುತ್ತಿದೆ ಎಂದು ಹೇಳುವುದೇ ಕಷ್ಟ.

ದಶಕಗಳ ಹಿಂದೆ ಮನೆಯ ಹಿರಿ-ಕಿರಿಯರೆಲ್ಲರೂ ಬೆಳಿಗ್ಗೆ ಎದ್ದಾಗ ಹಾಗೂ ರಾತ್ರಿ ಮಲಗುವ ಮೊದಲು ಬಿಸಿಯಾದ ಹಾಲನ್ನು ಕುಡಿಯುವುದು ರೂಢಿಯಾಗಿತ್ತು. ಮಕ್ಕಳಿಗಂತೂ ಹೊಟ್ಟೆ ಹಸಿದಾಗೆಲ್ಲ ಒಂದು ಲೋಟ ಬೆಚ್ಚಗಿನ ಹಾಲೇ ಆಹಾರವಾಗಿತ್ತು. ಆಗ ಚಹಾ, ಕಾಫಿ ಸೇವನೆಯೂ ಇಲ್ಲ ಎನ್ನಬಹುದಾದಷ್ಟು ಅಪರೂಪವಾಗಿತ್ತು. ಕಾಲಕ್ರಮೇಣ ಆಹಾರ ಪದ್ಧತಿಯ ಬದಲಾವಣೆಯಿಂದ, ಸಾಮಾಜಿಕ, ಆರ್ಥಿಕ ಬದಲಾವಣೆಗಳಿಂದ ಚಹಾ, ಕಾಫಿಗೆ ಸೇವನೆ ಮಿತಿ ಮೀರಿತು. ಹಾಲಿನ ಪೂರೈಕೆಯ ಕೊರತೆ ಹಾಗೂ ಅವೇಳೆಯಲ್ಲಿ ಹಾಲಿನ ಲಭ್ಯತೆ ಇರದು ಕಾರಣ ಪರ್ಯಾಯವಾಗಿ ಹಾಲಿನ ಪುಡಿಗಳು ಲಗ್ಗೆ ಇಟ್ಟವು. 15 ದಿನಗಳ ಕಾಲ ಕೆಡದೇ ಇಡಬಹುದಾದ ಟೆಟ್ರಾ ಪ್ಯಾಕ್ ಗಳ ಹಾಲು ಬಂದಿತು. ಇಂದು ಮಾರುಕಟ್ಟೆಯಲ್ಲಿ ಹಾಲಿನ ಹತ್ತಾರು ಬಗೆಗಳಿವೆ. ಇವುಗಳಲ್ಲಿ ಯಾವುದು ಅಸಲಿ, ಯಾವುದು ನಕಲಿ ಹೇಳುವುದು ಅಸಾಧ್ಯ.

ಇದನ್ನೂ ಓದಿ : Global Running Day 2022 : ನಿಮ್ಮ ಕಾಲುಗಳೇ ದೇಹದ ಇನ್ನೊಂದು ಹೃದಯ

ಹಾಲನ್ನು ಮಲಗುವ ಮುನ್ನ ಕುಡಿದು ಮಲಗಿರಿ ಎಂದು ಸಲಹೆ ನೀಡುತ್ತಿದ್ದ ವೈದ್ಯರು ಹಾಲನ್ನು ಕಡಿಮೆ ಸೇವಿಸಿ. ಚಹಾ ಕಾಫಿಯನ್ನು ಹಾಲು ಹಾಕದೇ ಕುಡಿಯಿರಿ ಎಂದು ಕಿವಿಮಾತು ಹೇಳುತ್ತಾರೆ! ಇಷ್ಟಾದರೂ ಹಾಲಿನ ಉತ್ಪಾದನೆ, ಸೇವನೆ, ಉಪ ಉತ್ಪನ್ನಗಳ ತಯಾರಿಕೆ ಹೆಚ್ಚೇ ಆಗುತ್ತಿದೆ. ಸಿಹಿ, ಪೇಡೆ, ರಸಗುಲ್ಲಾ, ಖೋವಾ,, ಪನೀರ್, ಚೀಸ್, ತುಪ್ಪ, ಬೆಣ್ಣೆ ಮೊದಲಾದ ನೂರಾರು ಬಗೆಯ ಖಾದ್ಯಗಳಿಗೆ ಹಾಲೇ ಮೂಲ. ಹಾಗಾಗಿ ಹಾಲು ಅನಿವಾರ್ಯ.

ಈ ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2000 ಇಸವಿಯಲ್ಲಿ. ವಿಶ್ವ ಸಂಸ್ಥೆಯ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್ ( ಎಫ್ಎಓ) ಜೂನ್ ಒಂದನ್ನು ವಿಶ್ವ ಹಾಲಿನ ದಿನ ಎಂದು ಆಚರಿಸಲು ಕರೆ ಕೊಟ್ಟಿತು. ಹಾಲಿನ ಬಳಕೆ, ತನ್ಮೂಲಕ ಆರೋಗ್ಯದ ರಕ್ಷಣೆ , ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಹಾಲಿನ ಸಂಗ್ರಹಣೆಗೆ ಸಂಬಂಧಿಸಿದಂತೆ ಯುವಜನತೆಯಲ್ಲಿ ಚಟುವಟಿಕೆಗಳನ್ನು ಹೆಚ್ಚಿಸುವುದು ಮೊದಲಾದ ಉದ್ದೇಶಗಳಿಂದ ಕಳೆದ 22 ವರ್ಷಗಳಿಂದ ಈ ದಿನಾಚರಣೆ ನಡೆಯುತ್ತಿದೆ. ಕೆಲ ದಶಕಗಳ ಹಿಂದಿನವರೆಗೆ ಇದು ಅರ್ಥಪೂರ್ಣವೂ ಆಗಿತ್ತು. ಆದರೆ ಮಾರುಕಟ್ಟೆಯ ಆಶಯದಂತೆ ಹಾಲು-ಹಾಲಾಹಲವೂ ಹರಿಯುತ್ತಿರುವ ಇಂದಿನ ದಿನಗಳಲ್ಲಿ ಇದರ ಆಚರಣೆ ಎಷ್ಟು ಅರ್ಥಪೂರ್ಣವಾದೀತು?

ದೇಸಿ ತಳಿಗಳನ್ನು ಉಳಿಸಿ, ಬೆಳೆಸುವ ಯೋಜನೆಯನ್ನು ಅನೇಕ ಸರ್ಕಾರಗಳು ಮಾಡುತ್ತಿವೆ. ಇದು ಶುದ್ಧ ಹಾಗೂ ತಾಜಾ ಹಾಲಿನ, ಹಾಲಿನ ಉತ್ಪನ್ನಗಳ ತಯಾರಿಕೆಗೆ ಮತ್ತೊಮ್ಮೆ ಇಂಬು ಕೊಡುತ್ತಿದೆ. ಪರಿಪೂರ್ಣ ಆಹಾರ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದ ಹಾಲು ಮತ್ತೆ ಆ ಘನತೆಯನ್ನು ಹೊಂದುವಂತಾಗಲಿ.

ಗಮನಿಸಿ : ವಿಶೇಷ ದಿನಗಳ ಸಂದರ್ಭಕ್ಕೆ ನೀವೂ ಕೂಡ ನಿಮ್ಮ ವಿಚಾರ, ಅನುಭವವನ್ನು ಬರೆಯಬಹುದು. ಒಂದು ವಾರ ಮೊದಲು ಸುಮಾರು 300 ಪದಗಳಲ್ಲಿ ನಿಮ್ಮ ಫೋಟೋದೊಂದಿಗೆ ಬರಹ ನಮ್ಮನ್ನು ತಲುಪಲಿ. 

ಪ್ರತಿಕ್ರಿಯೆಗಾಗಿ : tv9kannadadigital@gmail.com