ಸುಡುಬಿಸಿಲಿನಲ್ಲಿ ಸೈಕಲ್​ನಲ್ಲಿಯೇ ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ; ಹೊಸ ಬೈಕ್ ಕೊಳ್ಳಲು ನೆರವಾದ ನೆಟ್ಟಿಗರು

| Updated By: shivaprasad.hs

Updated on: Apr 13, 2022 | 4:23 PM

Viral: ರಾಜಸ್ಥಾನದ ನಗರವೊಂದರಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ದುರ್ಗಾ ಮೀನಾ ಎಂಬುವವರ ಕತೆಯನ್ನು ಆದಿತ್ಯಾ ಶರ್ಮಾ ಎನ್ನುವವರು ಟ್ವಿಟರ್​ನಲ್ಲಿ ಬರೆದಿದ್ದರು. ಅದರಲ್ಲಿ ಅಂತಹ ಬಿಸಿಲಿನ ತಾಪದ ನಡುವೆಯೂ ಸೈಕಲ್ ಏರಿ ಸರಿಯಾದ ಸಮಯಕ್ಕೆ ಆಹಾರವನ್ನು ದುರ್ಗಾ ಅವರು ತಂದುಕೊಟ್ಟಿದ್ದನ್ನು ಆದಿತ್ಯಾ ಬರೆದಿದ್ದರು. ದುರ್ಗಾರ ಜೀವನ ಕತೆಯೇನು? ಆಮೇಲೇನಾಯ್ತು?

ಸುಡುಬಿಸಿಲಿನಲ್ಲಿ ಸೈಕಲ್​ನಲ್ಲಿಯೇ ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ; ಹೊಸ ಬೈಕ್ ಕೊಳ್ಳಲು ನೆರವಾದ ನೆಟ್ಟಿಗರು
ಸೈಕಲ್​ನಲ್ಲಿ ಆಹಾರ ತಲುಪಿಸುತ್ತಿದ್ದ ಯುವಕ, ಹೊಸ ಬೈಕ್
Follow us on

ರಾಜಸ್ಥಾನದ ಬಿಸಿಲೆಂದರೆ ಕೇಳಬೇಕೆ? 42 ಡಿಗ್ರಿಯ ಸುಡುಸುಡು ಬಿಸಿಲಿನಲ್ಲಿ ಸೈಕಲ್ ಏರಿ ಡೆಲಿವರಿ ಬಾಯ್ (Delivery Boy) ಆಗಿ ಕೆಲಸ ಮಾಡುವುದೆಂದರೆ ಸುಲಭದ ಮಾತಲ್ಲ. ಇತ್ತೀಚೆಗೆ ನೆಟ್ಟಿಗರೋರ್ವರು ಈ ಬಗ್ಗೆ ಬರೆದುಕೊಂಡಿದ್ದರು. ರಾಜಸ್ಥಾನದ ನಗರವೊಂದರಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ದುರ್ಗಾ ಮೀನಾ ಎಂಬುವವರ ಕತೆಯನ್ನು ಆದಿತ್ಯಾ ಶರ್ಮಾ ಎನ್ನುವವರು ಟ್ವಿಟರ್​ನಲ್ಲಿ ಬರೆದಿದ್ದರು. ಅದರಲ್ಲಿ ಅಂತಹ ಬಿಸಿಲಿನ ತಾಪದ ನಡುವೆಯೂ ಸೈಕಲ್ ಏರಿ ಸರಿಯಾದ ಸಮಯಕ್ಕೆ ಆಹಾರವನ್ನು ದುರ್ಗಾ ಅವರು ತಂದುಕೊಟ್ಟಿದ್ದನ್ನು ಆದಿತ್ಯಾ ಬರೆದಿದ್ದರು. ಜತೆಗೆ ದುರ್ಗಾರನ್ನು ಮಾತನಾಡಿಸಿ, ಅವರ ಜೀವನದ ಬಗ್ಗೆಯೂ ತಿಳಿಸಿದ್ದರು. ದುರ್ಗಾ ಅವರ ಹಿನ್ನೆಲೆ ಏನು? ಅದನ್ನು ಹಂಚಿಕೊಂಡ ನಂತರ ಆದ ಬದಲಾವಣೆ ಏನು? ಪ್ರಸ್ತುತ ಏನಾಗಿದೆ? ಮಾನವೀಯತೆ ಇದೆ ಎನ್ನುವುದನ್ನು ಸಾಬೀತುಪಡಿಸುವ ಈ ಘಟನೆಯ ಕುರಿತ ಬರಹ ಇಲ್ಲಿದೆ.

ದುರ್ಗಾ ಮೀನಾ ಯಾರು? ಅವರು ಸೈಕಲ್​ನಲ್ಲಿ ಆಹಾರ ತಲುಪಿಸಲು ಕಾರಣವೇನು?

ಆದಿತ್ಯಾ ಶರ್ಮಾ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಜೊಮ್ಯಾಟೋ ಆರ್ಡರ್ ಅನ್ನು ಸೈಕಲ್​ನಲ್ಲಿ ಸರಿಯಾದ ಸಮಯಕ್ಕೆ ತಂದ ದುರ್ಗಾ ಮೀನಾರ ಬಗ್ಗೆ ಬರೆದುಕೊಂಡಿದ್ದರು. ಅವರ ಹೆಸರನ್ನು ಕೇಳಿದ ನಂತರ ವೃತ್ತಿಯ ಬಗ್ಗೆ ವಿಚಾರಿಸಿದ್ದರು. ಇದಕ್ಕೆ ಉತ್ತರಿಸುತ್ತಾ ದುರ್ಗಾ ತಾವು ವೃತ್ತಿಯಲ್ಲಿ ಶಿಕ್ಷಕ. ಕಳೆದ 12 ವರ್ಷಗಳಿಂದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ. ಆದರೆ ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಇಂಗ್ಲೀಷ್​ನಲ್ಲಿ ಉತ್ತಮ ಪರಿಣತಿ ಹೊಂದಿರುವ ದುರ್ಗಾ, ಇಂಗ್ಲೀಷ್​ನಲ್ಲಿಯೇ ಸಂಭಾಷಣೆ ನಡೆಸಿದ್ದಾರೆ.

ಆರ್ಥಿಕ ಸಂಕಷ್ಟದ ಕಾರಣದಿಂದ ಕಳೆದ 4 ತಿಂಗಳಿಂದ ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಈ ಮೂಲಕ ತಿಂಗಳಿಗೆ ಸುಮಾರು 10,000 ರೂಗಳನ್ನು ಸಂಪಾದಿಸುತ್ತಿದ್ದರು. ತಾವು ದುಡಿದ ಹಣವನ್ನು ಉಳಿತಾಯ ಮಾಡುತ್ತಿರುವುದಾಗಿಯೂ, ಅದರಿಂದ ಬೈಕ್ ಕೊಂಡುಕೊಳ್ಳುವುದಾಗಿಯೂ ದುರ್ಗಾ ತಿಳಿಸಿದ್ದರು.

ಇದಕ್ಕೆ ಕಾರಣವನ್ನೂ ವಿವರಿಸಿದ್ದ ದುರ್ಗಾ, ‘‘ದಿನಕ್ಕೆ 10-12 ಡೆಲಿವರಿಗಳನ್ನು ಕೊಡುವಾಗ ಉಸಿರಾಡಲೂ ಸಮಯವಿರುವುದಿಲ್ಲ. ಒಂದು ವೇಳೆ ಬೈಕ್ ಇದ್ದರೆ ಅದರಿಂದ ಕೆಲಸ ಆರಾಮವಾಗುತ್ತದೆ’’ ಎಂದಿದ್ದರು. ನಂತರ ಆದಿತ್ಯಾರಲ್ಲಿ ದುರ್ಗಾ ವಿನಂತಿ ಮಾಡುತ್ತಾ, ‘‘ನೀವು ಬೈಕ್ ಅನ್ನು ಇಎಮ್​ಐ ಮಾದರಿಯಲ್ಲಿ ಕೊಳ್ಳಲು ಮೊದಲ ಕಂತನ್ನು ಪಾವತಿಸುತ್ತೀರಾ? ನಂತರದಲ್ಲಿ ಮೂಲ ಹಣವನ್ನು ಹಿಂತಿರುಗಿಸುತ್ತೇನೆ’’ ಎಂದು ಕೋರಿಕೊಂಡಿದ್ದರು. ಇದನ್ನು ನೋಡಿ ಆದಿತ್ಯಾ ಶರ್ಮಾ ದೇಣಿಗೆ ಸಂಗ್ರಹಿಸಿ ಏಕೆ ದುರ್ಗಾಗೆ ಸಹಾಯ ಮಾಡಬಾರದು ಎಂದು ಯೋಚಿಸಿದರು.

ಇದರಿಂದ ದುರ್ಗಾ ಮೀನಾಗೆ ಸಹಾಯ ಮಾಡುವುದಕ್ಕಾಗಿ 75,000 ರೂಗಳಷ್ಟು ದೇಣಿಗೆ ಸಂಗ್ರಹಿಸಲು ಅದಿತ್ಯಾ ಮುಂದಾದರು. ಈ ಬಗ್ಗೆ ಟ್ವೀಟ್ ಮಾಡಿದ್ದರು. ಅದು ವೈರಲ್ ಆಯಿತು. ಆ ಟ್ವೀಟ್ ಇಲ್ಲಿದೆ.

ಆದಿತ್ಯಾ ಶರ್ಮಾ ಇತ್ತೀಚೆಗೆ ಹೊಸ ಟ್ವೀಟ್ ಮಾಡಿದ್ದರು. ಅದರಲ್ಲಿ ಹೀರೋ ಸ್ಪ್ಲೆಂಡರ್​ ಬೈಕ್​ನ ಚಿತ್ರವನ್ನು ಹಂಚಿಕೊಂಡಿದ್ದು, ದೇಣಿಗೆಯಿಂದ ಸಂಗ್ರಹವಾದ ಹಣದಿಂದ ಬೈಕ್​ ಖರೀದಿಸಿ, ಅದು ದುರ್ಗಾರನ್ನು ತಲುಪಲಿದೆ ಎಂದಿದ್ದರು. ಇದೀಗ ಮತ್ತೊಂದು ಟ್ವೀಟ್​ನಲ್ಲಿ ಶೋರೂಮ್​ನಿಂದ ದುರ್ಗಾ ಮೀನಾ ಬೈಕ್ ಸ್ವೀಕರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ದುರ್ಗಾ ಅವರು ಭಾವುಕರಾಗಿದ್ದಾರೆ. ಸದ್ಯ ಆದಿತ್ಯರ ಈ ನಡೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೊಸ ಬೈಕ್​ ಅನ್ನು ದುರ್ಗಾ ಮೀನಾ ಅವರಿಗೆ ನೀಡುವ ಸಂದರ್ಭ:

ಇದನ್ನೂ ಓದಿ: Viral: ಈ ಚಿತ್ರದಲ್ಲಿ ಮೊದಲು ಏನನ್ನು ಗುರುತಿಸುತ್ತೀರಿ? ಇದರಿಂದ ನಿಮ್ಮ ಪ್ರೀತಿಯ ಬಗ್ಗೆ ಹೇಳಬಹುದಂತೆ!

Shocking Video: ವೇಗವಾಗಿ ಚಲಿಸುತ್ತಿದ್ದ ಟ್ರಕ್​ನಿಂದ ದನಗಳನ್ನು ಬಿಸಾಡಿದ ಹಸುಗಳ ಸ್ಮಗ್ಲರ್; ಶಾಕಿಂಗ್ ವಿಡಿಯೋ ವೈರಲ್

Published On - 4:15 pm, Wed, 13 April 22