ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2024 | 3:37 PM

ಇಂದು ಹಾಸನ ಜಿಲ್ಲೆಯ ಸಕಲೇಶಪುರ ದೊಡ್ಡತಪ್ಪಲು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ಅವರು, ಕಳೆದ ಐದಾರು ದಿನಗಳಿಂದ ದೊಡ್ಡಮಟ್ಟದ ಮಳೆ ಆರಂಭವಾಗಿದೆ. ಒಂದೆಡೆ ಜಲಾಶಯಗಳು ತುಂಬಿದ್ದು ಪಕ್ಕದ ರಾಜ್ಯಗಳ ಜೊತೆ ಸಂಘರ್ಷಕ್ಕೆ ಒಂದು ವರ್ಷ ವಿರಾಮ ಸಿಕ್ಕಿದೆ ಎಂದಿದ್ದಾರೆ.

ಹಾಸನ, ಜುಲೈ 21: ಸಕಲೇಶಪುರ ದೊಡ್ಡತಪ್ಪಲು ಗುಡ್ಡ ಕುಸಿತ ಪ್ರದೇಶಕ್ಕೆ ಇಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹಾಗೂ ವಿಪಕ್ಷ ನಾಯಕ ಆರ್​​ ಅಶೋಕ್ ಭೇಟಿ ನೀಡಿದ್ದಾರೆ. ಪರಿಶೀಲನೆ ನಂತರ ಹೆಚ್​​ಡಿ ಕುಮಾರಸ್ವಾಮಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಕಳೆದ ಐದಾರು ದಿನಗಳಿಂದ ದೊಡ್ಡಮಟ್ಟದ ಮಳೆ (Rain) ಆರಂಭವಾಗಿದೆ. ಒಂದೆಡೆ ಜಲಾಶಯಗಳು ತುಂಬಿದ್ದರಿಂದ ಕರ್ನಾಟಕ ಹಾಗೂ ತಮಿಳುನಾಡು ಸಂಘರ್ಷಕ್ಕೆ ಈ ವರ್ಷ ವಿರಾಮ ಸಿಕ್ಕಿದೆ. 2018ರಲ್ಲಿ ನಾನು ಸಿಎಂ ಆಗಿದ್ದಾಗ ಇದೇ ರೀತಿ ಮಳೆಯಾಗಿತ್ತು. ಆವಾಗ ಬಿಟ್ಟರೆ ಇದೀಗ ಮಳೆಯಾಗಿದೆ. ಮಳೆಯಿಂದ ಆಗಿರುವ ಅನಾಹುತಗಳು, ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಶಿರೂರಿನಲ್ಲಿ ಮಳೆ ಮುಂದುವರೆದರೆ ಇನ್ನೂ ಭೂಕುಸಿತವಾಗುತ್ತದೆ. ಸಕಲೇಶಪುರದಿಂದ ಉದ್ದಕ್ಕೂ ಭೂಕುಸಿತವಾಗುತ್ತಲೇ ಇದೆ. ಎಂಟು ವರ್ಷದ ಹಿಂದಿನಿಂದ ಗುತ್ತಿಗೆದಾರ ಕೆಲಸ ಮಾಡುತ್ತಿದ್ದಾನೆ. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗುತ್ತದೆ. ಕೇಂದ್ರದ ಭೂಸಾರಿಗೆ ಸಚಿವರಿಗೆ ಎಲ್ಲಾ ಮಾಹಿತಿ ಕೊಡುತ್ತೇನೆ. ಗಡ್ಕರಿ ಅವರ ಪಾತ್ರವೂ ಜಾಸ್ತಿ ಇದೆ. ವೈಜ್ಞಾನಿಕವಾಗಿ ಕಾಮಗಾರಿ ಮಾಡಲು ಗಡ್ಕರಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಸ್ಥಳಕ್ಕೆ ಒಮ್ಮೆ ಭೇಟಿ ನೀಡಲು ಮನವಿ ಮಾಡುತ್ತೇನೆ. ರಾಜ್ಯ ಸರ್ಕಾರದ ಮಂತ್ರಿಗಳು ಭೇಟಿ ನೀಡಿ ಜನಗಳಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದ್ದರಿಂದ ನಾನು ನಿನ್ನೆಯಿಂದ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Jul 21, 2024 03:35 PM