ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ 10 ಟನ್ ರಾಸಾಯನಿಕ ಮಿಶ್ರಿತ ಅಡಿಕೆ ಕೋಲಾರದಲ್ಲಿ ಜಪ್ತಿ
ಆಹಾರ ಕಲಬೆರಕೆ ಕುರಿತು ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ಆತಂಕ ಹೆಚ್ಚಾಗಿದೆ. ಕೋಲಾರದಲ್ಲಿ 10 ಟನ್ ರಾಸಾಯನಿಕ ಮಿಶ್ರಿತ ಅಡಿಕೆ ಜಪ್ತಿ ಮಾಡಲಾಗಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದಲ್ಲದೆ, ಬ್ರಾಂಡೆಡ್ ಕುರುಕಲು ತಿಂಡಿಗಳ ಗುಣಮಟ್ಟದ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಆರೋಗ್ಯ ಇಲಾಖೆ ಮರುಪರಿಶೀಲನೆಗೆ ಮುಂದಾಗಿದೆ.
ಬೆಂಗಳೂರು, ಸೆಪ್ಟೆಂಬರ್ 16: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಹಾರ ಗುಣಮಟ್ಟದ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ಕಲಬೆರಕೆ ಆಹಾರ ಪದಾರ್ಥಗಳು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದು, ಇತ್ತೀಚೆಗೆ ಕೋಲಾರದಲ್ಲಿ 10 ಟನ್ ರಾಸಾಯನಿಕ ಮಿಶ್ರಿತ ಅಡಿಕೆ ಜಪ್ತಿ ಮಾಡಿರುವುದು ಈ ಆತಂಕಕ್ಕೆ ಪುಷ್ಟಿ ನೀಡಿದೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಈ ಅಡಿಕೆಯನ್ನು ಮುಳಬಾಗಿಲು ಟಿಎಚ್ಓ ಡಾ. ಸುಗುಣ ನೇತೃತ್ವದಲ್ಲಿ ಆರೋಗ್ಯ ಸುರಕ್ಷತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಲರಿಂಗ್ ಏಜೆಂಟ್‌ಗಳನ್ನು ಬಳಸಿರುವುದಾಗಿ ಶಂಕಿಸಲಾಗಿದ್ದು, ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.
ಅಡಿಕೆಯಲ್ಲದೆ, ಮಕ್ಕಳ ನೆಚ್ಚಿನ ಟೆಟ್ರಾಪ್ಯಾಕ್ ಜ್ಯೂಸ್, ಬಿಸ್ಕತ್, ಚಿಪ್ಸ್, ಚಾಕೋಲೇಟ್ ಮತ್ತು ಕೇಕ್‌ಗಳಂತಹ ಬ್ರಾಂಡೆಡ್ ಕುರುಕಲು ತಿಂಡಿಗಳ ಬಗ್ಗೆಯೂ ಈಗ ಅನುಮಾನ ಮೂಡಿದೆ. ಆಹಾರ ಪದಾರ್ಥಗಳು ಮಾರುಕಟ್ಟೆಗೆ ಬರುವ ಮುನ್ನ ಲ್ಯಾಬ್ ಟೆಸ್ಟ್ ಕಡ್ಡಾಯವಾಗಿದ್ದರೂ, ಕೆಲ ಖಾಸಗಿ ಲ್ಯಾಬ್‌ಗಳು ಮತ್ತು ಕಂಪನಿಗಳು ಅಕ್ರಮದಲ್ಲಿ ತೊಡಗಿವೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಬ್ರಾಂಡೆಡ್ ಫುಡ್‌ಗಳ ಮಾದರಿಗಳನ್ನು ಸಂಗ್ರಹಿಸಿ, ಸರ್ಕಾರಿ ಲ್ಯಾಬ್‌ಗಳಲ್ಲಿ ಮರುಪರಿಶೀಲನೆ ನಡೆಸಲು ಮುಂದಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರು ಎಫ್‌ಡಿಎ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಕಲಬೆರಕೆ ವಿರುದ್ಧ ಕಠಿಣ ಕ್ರಮದ ಸೂಚನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

