Karnataka Rain: 2018ರಲ್ಲಿ ಭೂಕುಸಿತದಿಂದ ನಲುಗಿದ್ದ ಕೊಡಗು ಗ್ರಾಮಕ್ಕೆ ಮತ್ತೆ ಎದುರಾಯ್ತು ಆತಂಕ

| Updated By: Skanda

Updated on: Jul 23, 2021 | 3:02 PM

ಉದಯಗಿರಿ ಪ್ರಪಾತದಲ್ಲಿ ಭೂಕುಸಿತವಾದ ಸ್ಥಳದಲ್ಲೇ ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕೃತಕ ಕೆರೆ ಸೃಷ್ಟಿಯಾಗಿದ್ದು, 15 ಅಡಿಗೂ ಅಧಿಕ ಆಳವಿರುವ ಕೆರೆ ಅಪಾಯಕ್ಕೆ ನಾಂದಿ ಹಾಡಬಹುದು ಎಂಬ ಭಯ ಆವರಿಸಿದೆ. ಕೆರೆಯಿಂದ ಕೆಲವೇ ಮೀಟರ್ ದೂರದಲ್ಲಿ ಏಳು ಕುಟುಂಬಗಳ ಮನೆಗಳಿದ್ದು, ಅವರಿನ್ನೂ ಮನೆ ತೆರವು ಮಾಡದೇ ಇರುವುದು ಆತಂಕಕಾರಿಯಾಗಿದೆ.

ಮಡಿಕೇರಿ: ಕಳೆದ ಎರಡು ಮೂರು ವರ್ಷಗಳಿಂದ ಭಾರೀ ಮಳೆ ಸಂದರ್ಭದಲ್ಲಿ ಅನಾಹುತಕ್ಕೀಡಾಗುತ್ತಿರುವ ಮಡಿಕೇರಿ, ಕೊಡಗು ಭಾಗದಲ್ಲಿ ಈ ಬಾರಿಯ ಮಳೆ ಮತ್ತೆ ಆತಂಕ ತಂದೊಡ್ಡಿದೆ. 2018ರಲ್ಲಿ ಭೂ ಕುಸಿತಕ್ಕೆ ತತ್ತರಿಸಿದ್ದ ಮಡಿಕೇರಿ ತಾಲ್ಲೂಕಿನ ಉದಯಗಿರಿ ಗ್ರಾಮದಲ್ಲಿ ಈ ವರ್ಷವೂ ಭೂ ಕುಸಿತವಾಗಬಹುದು ಎನ್ನುವ ಭಯ ಉದ್ಭವಿಸಿದ್ದು, ಉದಯಗಿರಿಯ ಪ್ರಪಾತದಲ್ಲಿ ಮನೆ ಕಟ್ಟಿಕೊಂಡಿರುವ ಒಟ್ಟು 7 ಕುಟುಂಬದವರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಉದಯಗಿರಿಯ ಪ್ರಪಾತದಲ್ಲಿ ನೆಲೆಸಿರುವ ಏಳು ಕುಟುಂಬಗಳಿಗೆ ಮಳೆಯಿಂದ ಆತಂಕ ಎದುರಾಗಿದ್ದರೂ ಅವರು ಮನೆಯನ್ನು ಖಾಲಿ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಉದಯಗಿರಿ ಪ್ರಪಾತದಲ್ಲಿ ಭೂಕುಸಿತವಾದ ಸ್ಥಳದಲ್ಲೇ ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕೃತಕ ಕೆರೆ ಸೃಷ್ಟಿಯಾಗಿದ್ದು, 15 ಅಡಿಗೂ ಅಧಿಕ ಆಳವಿರುವ ಕೆರೆ ಅಪಾಯಕ್ಕೆ ನಾಂದಿ ಹಾಡಬಹುದು ಎಂಬ ಭಯ ಆವರಿಸಿದೆ. ಕೆರೆಯಿಂದ ಕೆಲವೇ ಮೀಟರ್ ದೂರದಲ್ಲಿ ಏಳು ಕುಟುಂಬಗಳ ಮನೆಗಳಿದ್ದು, ಅವರಿನ್ನೂ ಮನೆ ತೆರವು ಮಾಡದೇ ಇರುವುದು ಆತಂಕಕಾರಿಯಾಗಿದೆ.

ಲಘು ಭೂಕುಸಿತ
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಲಘು ಭೂ ಕುಸಿತ ಸಂಭವಿಸಿದ್ದು, ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಬಿದ್ದಿಯಂಡ ರಾಣಿ ಪೊನ್ನವ್ವ ಎಂಬುವರ ಮನೆ ಭಾಗಶಃ ಹಾನಿಗೊಳಗಾಗಿದೆ. ಮನೆ ಮೇಲೆ ಮಣ್ಣು ಕುಸಿದ ಪರಿಣಾಮ ಗೋಡೆ ಜಖಂ ಆಗಿದ್ದು, ಮುಂದುವರೆದಿರುವ ಮಳೆಯ ಆರ್ಭಟದಿಂದ ಅಕ್ಕಪಕ್ಕದ ಊರಿನವರಲ್ಲೂ ಭೂ ಕುಸಿತದ ಭೀತಿ ಎದುರಾಗಿದೆ. ಕಳೆದ ಒಂದೆರೆಡು ವರ್ಷಗಳಿಂದ ಕೊಡಗು, ಮಡಿಕೇರಿ ಭಾಗದ ಜನರಿಗೆ ಮಳೆಯ ರೌದ್ರಾವತಾರ ಭಾರೀ ಭೀತಿ ಹುಟ್ಟಿಸಿದ್ದು, ಈ ಬಾರಿಯೂ ಅಂತಹದ್ದೇ ಅನಾಹುತ ಸಂಭವಿಸಿದರೆ ಏನು ಮಾಡುವುದು ಎಂಬ ಚಿಂತೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ:
ಮಲೆನಾಡಿನಲ್ಲಿ ಭಾರೀ ಮಳೆ: ಸೋರುತ್ತಿದೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆ, ಮುಳುಗುತ್ತಿವೆ ಜಮೀನು, ರಸ್ತೆ; ಎಲ್ಲೆಲ್ಲೂ ಅವ್ಯವಸ್ಥೆ