ಬೆಂಗಳೂರು: ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡಿ ಸಿಕ್ಕಿಬಿದ್ದ ಯುವಕ
ಅಗರ ಕೆರೆ ಆವರಣದಲ್ಲಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಗೊಲ್ಡನ್ ಕುಮಾರ್ ಬಂಧನ. ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರ ಗಮನಕ್ಕೆ ಬಂದ ಘಟನೆ ಸಾರ್ವಜನಿಕರ ಗಮನಕ್ಕೆ ತರಲಾಯಿತು. ಮಹಿಳೆಯರ ಖಾಸಗಿತನ ಮತ್ತು ಸುರಕ್ಷತೆಗೆ ಧಕ್ಕೆ ತಂದ ಈ ಕೃತ್ಯದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮೂಡಿದೆ.
ಬೆಂಗಳೂರು, ಸೆ.3: ರಾಜಧಾನಿಯ ಅಗರ ಕೆರೆ (Agara Lake) ಆವರಣದಲ್ಲಿ ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದ ಯುವಕನೊಬ್ಬ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದು, ಆತನ ವಿರುದ್ಧ ಹೆಚ್‌ಎಸ್‌ಆರ್ ಲೇಔಟ್ (HSR Layout) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಜಾಪುರ ರಸ್ತೆಯಲ್ಲಿ ವಾಸವಿರುವ ಗೊಲ್ಡನ್ ಕುಮಾರ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಎಂದಿನಂತೆ ಬೆಳಗಿನ ಜಾವ ಅಗರ ಕೆರೆ ಆವರಣದಲ್ಲಿ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದಾಗ ಯುವಕನೊಬ್ಬ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಜಾಗರೂಕರಾದ ಮಹಿಳೆ ಆರೋಪಿಯನ್ನು ತಡೆದು ಪ್ರಶ್ನಿಸಿದ್ದಾರೆ ಹಾಗೂ ಸುತ್ತಮುತ್ತಲಿದ್ದ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಸಾರ್ವಜನಿಕರು ಯುವಕನ ಮೊಬೈಲ್ ಫೋನ್ ಪರಿಶೀಲಿಸಿದಾಗ, ಅಲ್ಲಿ ಜಾಗಿಂಗ್ ಹಾಗೂ ವಾಕಿಂಗ್ ಮಾಡುತ್ತಿದ್ದ ಹಲವು ಮಹಿಳೆಯರ ದೃಶ್ಯಗಳನ್ನು ಆತ ಅನುಮತಿಯಿಲ್ಲದೇ ವಿಡಿಯೋ ಮಾಡಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ತನ್ನ ಕೃತ್ಯ ಸಾರ್ವಜನಿಕರ ಎದುರು ಬಹಿರಂಗವಾಗುತ್ತಿದ್ದಂತೆಯೇ ಹೆದರಿದ ಯುವಕ, ಸ್ಥಳದಲ್ಲಿದ್ದ ಮಹಿಳೆಯ ಕಾಲಿಗೆ ಬಿದ್ದು ಕ್ಷಮಿಸುವಂತೆ ಬೇಡಿಕೊಂಡಿದ್ದಾನೆ. ಆದರೆ, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಘಟನೆಯನ್ನು ತೀವ್ರವಾಗಿ ಪರಿಗಣಿಸಿದ ಸ್ಥಳೀಯರು ಮತ್ತು ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಗೊಲ್ಡನ್ ಕುಮಾರ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

