ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಸೀಸನ್ 17 ಕಳೆದ ತಿಂಗಳು ಅಂದರೆ ಆಗಸ್ಟ್ 11 ರಿಂದ ಆರಂಭವಾಗಿದೆ. ಈ ಕಾರ್ಯಕ್ರಮದ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಅಮಿತಾಬ್, ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಆರ್‌ಸಿಬಿ ತಂಡದ ಜೀವಾಳ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ.
ವಾಸ್ತವವಾಗಿ ಕೌನ್ ಬನೇಗಾ ಕರೋಡ್ಪತಿ ಸೀಸನ್ 17 ರ ಒಂದು ಸಂಚಿಕೆಯಲ್ಲಿ, ಅಮಿತಾಬ್ ಬಚ್ಚನ್ ಹಾಟ್ ಸೀಟ್ನಲ್ಲಿ ಕುಳಿತಿದ್ದ ಸ್ಪರ್ಧಿಗೆ ಒಂದು ಪ್ರಶ್ನೆ ಕೇಳಿದರು. ಆ ಪ್ರಶ್ನೆ ವಿರಾಟ್ ಕೊಹ್ಲಿಗೆ ಸಂಬಂಧಿಸಿದ್ದು, ಇದಕ್ಕೆ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಆ ಪ್ರಶ್ನೆ ಏನೆಂದರೆ..
ತಮ್ಮ ವೃತ್ತಿಜೀವನದಲ್ಲಿ ಒಂದೇ ಐಪಿಎಲ್ ಫ್ರಾಂಚೈಸಿ ಪರ 9000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಯಾರು ಎಂಬುದು ಪ್ರಶ್ನೆಯಾಗಿತ್ತು. ಅಮಿತಾಬ್ ಬಚ್ಚನ್ ಅವರ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಸ್ಪರ್ಧಿ, ವಿರಾಟ್ ಕೊಹ್ಲಿ ಎಂದರು. ಈ ಉತ್ತರ ಕೂಡ ಸರಿಯಾಗಿತ್ತು. ಉತ್ತರದ ಬಳಿಕ ಮಾತನಾಡಿದ ಅಮಿತಾಬ್ ಕಿಂಗ್ ಕೊಹ್ಲಿಯನ್ನು ಹಾಡಿ ಹೊಗಳಿದರು.
ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಆರ್‌ಸಿಬಿ ಪರ ಮಾತ್ರ ಆಡಿದ್ದಾರೆ. ಆದರೆ ಅವರ ನಾಯಕತ್ವದಲ್ಲಾಗಲಿ ಅಥವಾ ಬೇರೆಯವರ ನಾಯಕತ್ವದಲ್ಲಾಗಲಿ ತಂಡ ಎಂದಿಗೂ ಕಪ್ ಗೆದ್ದಿರಲಿಲ್ಲ. ಆದರೆ 2025 ರಲ್ಲಿ ಕಪ್ ಗೆಲ್ಲುವ ಕನಸು ನನಸಾಯಿತು. ಆ ಐತಿಹಾಸಿಕ ಗೆಲುವಿನ ಕ್ಷಣದ ವಿಡಿಯೋವನ್ನು ನೀವು ನೋಡಿರಬೇಕು. ಅದರಲ್ಲಿ ವಿರಾಟ್ ಕೊಹ್ಲಿ ತುಂಬಾ ಭಾವುಕರಾಗಿದ್ದರು. ಪ್ರಪಂಚದಾದ್ಯಂತ ಪ್ರಸಿದ್ಧನಾಗಿರುವ ಅಂತಹ ಸ್ಟಾರ್ ಕ್ರಿಕೆಟಿಗ ಕೂಡ, ಹಲವು ವರ್ಷಗಳ ನಂತರ ಅಂತಹ ಗೆಲುವು ಬಂದಾಗ ಭಾವುಕನಾಗುತ್ತಾನೆ ಎಂದರು. ಇದೀಗ ಅಮಿತಾಬ್ ಅವರ ಈ ಹೊಗಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ