ನಿದ್ರೆಯನ್ನು ಯಾವತ್ತೂ ಕಡೆಗಣಿಸಬೇಡಿ, ಕನಿಷ್ಟ 6 ತಾಸುಗಳ ನಿದ್ರೆ ದೇಹಕ್ಕೆ ಅತ್ಯವಶ್ಯಕ: ಡಾ ಸೌಜನ್ಯ ವಶಿಷ್ಠ
ಮಲಗುವಾಗ ಕೆಟ್ಟ ಸಂಗತಿಗಳನ್ನು ಯೋಚಿಸುವ ಬದಲು ದಿನದಲ್ಲಿ ಘಟಿಸಿದ 10 ಒಳ್ಳೆಯ ಅಥವಾ ಸಂತೋಷದ ಸಂಗತಿಗಳನ್ನು ಮೆಲುಕು ಹಾಕಬೇಕು. ಆಲೋಚನೆಗಳ ನಿಯಂತ್ರಣ ಬಹಳ ಮುಖ್ಯ.
ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಈ ಸಂಚಿಕೆಯಲ್ಲಿ ನಿದ್ರೆ ಬಗ್ಗೆ ಮಾತಾಡಿದ್ದು, ಉತ್ತಮ ನಿದ್ರೆ ಮಾಡಲು ಏನು ಮಾಡಬೇಕೆಂದು ತಿಳಿಸಿಕೊಟ್ಟಿದ್ದಾರೆ. ನಮಗೆ ದಿನವೊಂದಕ್ಕೆ ಕನಿಷ್ಠ 6-8 ತಾಸುಗಳ ನಿದ್ರೆ ಬಹಳ ಮುಖ್ಯ ಮತ್ತು ಅದು ಸೊಂಪಾದ ನಿದ್ರೆಯಾಗಿರಬೇಕು ಎಂದು ಅವರು ಹೇಳುತ್ತಾರೆ. ನಿದ್ರೆ ಸರಿಯಾಗಿ ಮಾಡದಿದ್ದರೆ ಬೆಳಗ್ಗೆ ಎದ್ದಾಗ ನಮ್ಮನ್ನು ಜಡತ್ವ ಕಾಡುತ್ತದೆ, ಲವಲವಿಕೆ ಇರುವುದಿಲ್ಲ, ದಿನವಿಡೀ ಒಂದು ಬಗೆಯ ಅನ್ಯಮನಸ್ಕತೆ ನಮ್ಮನ್ನು ಆವರಿಸಿಕೊಂಡಿರುತ್ತದೆ ಅಂತ ಸೌಜನ್ಯ ಹೇಳುತ್ತಾರೆ. ಹಾಗಾಗಿ, ಉತ್ತಮ ನಿದ್ರೆಯ ಮೂಲಕ ದೇಹಕ್ಕೆ ಸೂಕ್ತ ವಿಶ್ರಾಂತಿ ನೀಡುವುದನ್ನು ಕಡೆಗಣಿಸಬಾರದು.
ಹಾಗಾದರೆ, ನಮ್ಮ ನಿದ್ರೆಯ ಗುಣಮಟ್ಟ ಚೆನ್ನಾಗಿರಬೇಕಾದರೆ ಏನು ಮಾಡಬೇಕು? ಡಾ ಸೌಜನ್ಯ ಕೆಲವು ಉಪಾಯ ಹಾಗೂ ಸಲಹೆಗಳನ್ನು ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಮಲಗಲು ಹೋಗುವ ಸಮಯಕ್ಕೆ 4-5 ಗಂಟೆಗಳಷ್ಟು ಮೊದಲೇ ಡಿನ್ನರ್ ಮಾಡಿರಬೇಕು. ಮದ್ಯಪಾನದ ಅಭ್ಯಾಸ ಇರುವವರು ಸಹ ಅಷ್ಟು ಸಮಯ ಮೊದಲು ಅದನ್ನು ಮಾಡಿರಬೇಕು. ಅದಾದ ಮೇಲೆ ಹಾಸಿಗೆಗೆ ತೆರಳುವ ಮೊದಲು ಒಂದು ಲೋಟ ಬಿಸಿನೀರು (ಜಾಸ್ತಿ ಬಿಸಿಯಲ್ಲ, ಉಗುರು ಬಿಸಿ) ಕುಡಿಯಬೇಕೆನ್ನುವ ಸಲಹೆಯನ್ನು ಸೌಜನ್ಯ ನೀಡುತ್ತಾರೆ.
ಮಲಗುವ ಮುನ್ನ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ, ಮಲಗುವಾಗ ಹಗುರವಾದ ಬಟ್ಟೆ ಧರಿಸಬೇಕು, ಮತ್ತು ಹಾಸಿಗೆ ಮೇಲೆ ಕಾಲು ಚಾಚುವ ಮೊದಲು, ಒಂದೈದು ನಿಮಿಷಗಳಷ್ಟು ಧ್ಯಾನ, ಪ್ರಾಣಯಾಮ, ಪವನಮುಕ್ತ ಆಸನ ಮಾಡುವುದರಿಂದ ನಿದ್ರೆ ಉತ್ತಮವಾಗಿರುತ್ತದೆ ಎಂದು ಅವರು ಹೇಳುತ್ತಾರೆ.
ಮಲಗುವ ಸಮಯದಲ್ಲಿ ಗ್ಯಾಜೆಟ್ ಗಳು-ಎಲ್ಲಕ್ಕೂ ಮೊಬೈಲ್ ಫೋನ್ ಹತ್ತಿರದಲ್ಲಿ ಇಟ್ಟುಕೊಳ್ಳಲೇಬಾರದು ಎಂದು ಡಾ ಸೌಜನ್ಯ ತಾಕೀತು ಮಾಡುತ್ತಾರೆ.
ಮಲಗುವಾಗ ಕೆಟ್ಟ ಸಂಗತಿಗಳನ್ನು ಯೋಚಿಸುವ ಬದಲು ದಿನದಲ್ಲಿ ಘಟಿಸಿದ 10 ಒಳ್ಳೆಯ ಅಥವಾ ಸಂತೋಷದ ಸಂಗತಿಗಳನ್ನು ಮೆಲುಕು ಹಾಕಬೇಕು. ಆಲೋಚನೆಗಳ ನಿಯಂತ್ರಣ ಬಹಳ ಮುಖ್ಯ. ಏನೇ ಆಲೋಚನೆ ಹುಟ್ಟಿದರೂ, ನಾನೀಗ ಮಲಗುವ ಸಮಯ, ಬೆಳಗ್ಗೆ ಅದರ ಬಗ್ಗೆ ಯೋಚಿಸುತ್ತೇನೆ ಅಂತ ನಮ್ಮ ಮೆದುಳಿಗೆ ಹೇಳಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.
ನಿದ್ರೆ ಬರುತ್ತಿಲ್ಲವಾದರೆ, ಐ ಯಾಮ್ ನಾಟ್ ದಿ ಮೈಂಡ್, ನಾಟ್ ದಿ ಬಾಡಿ ಅಂತ ಹೇಳಿಕೊಳ್ಳಬೇಕು ಅಂತ ಅವರು ಹೇಳುತ್ತಾರೆ.
ಇದನ್ನೂ ಓದಿ: Shocking Video: ದೈತ್ಯ ನಾಗರಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಮುದ್ದಾಡಿದ ವ್ಯಕ್ತಿ; ವಿಡಿಯೋ ನೋಡಿ